ಮಂಗಳೂರು: ದೈವಜ್ಞ ಬ್ರಾಹ್ಮಣ ಸಮುದಾಯ ಬಾಂಧವರ ಸಂಘಟನೆ ಮತ್ತು ಶ್ರೇಯೋಭಿವೃದ್ದಿಗಾಗಿ ದೈವಜ್ಞ ಯುನಿಟಿ ಕಪ್-2025 ರಾಜ್ಯ ಮಟ್ಟದ ಕ್ರಿಕೆಟ್ ಟೂರ್ನಿಯು ನಗರದ ಉರ್ವ ಕ್ರಿಕೆಟ್ ಮೈದಾನದಲ್ಲಿ ಫೆ.12ರಿಂದ 14ರ ವರೆಗೆ ನಡೆಯಲಿದೆ ಎಂದು ಆಡಳಿತ ಸಮಿತಿ ಅಧ್ಯಕ್ಷ ಎಂ.ಪ್ರಶಾಂತ್ ಶೇಟ್ ತಿಳಿಸಿದರು.
ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಎಸ್.ಎಲ್.ಶೇಟ್, ಎಂ.ರಘುನಾಥ ಶೇಟ್ ಮೆಮೋರಿಯಲ್ ಚಾರಿಟಬಲ್ ಟ್ರಸ್ಟ್ ಪ್ರಾಯೋಜಕತ್ವದಲ್ಲಿ ನಡೆಯುವ ಟೂರ್ನಿಯಲ್ಲಿ 12 ಜಿಲ್ಲೆಗಳಿಂದ 22ತಂಡಗಳು ಭಾಗವಹಿಸಲಿವೆ. ಓವರ್ ಆರ್ಮ್ ಹೊನಲು ಬೆಳಕಿನ ಈ ಟೂರ್ನಿಯಲ್ಲಿ 330ಕ್ಕೂ ಹೆಚ್ಚು ಆಟಗಾರರು ಭಾಗವಹಿಸಲಿದ್ದಾರೆ ಎಂದರು.
ಎಸ್.ಎಲ್.ಶೇಟ್, ಎಂ.ರಘುನಾಥ ಶೇಟ್ ಮೆಮೋರಿಯಲ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷೆ ಪದ್ಮಾ ಆರ್. ಶೇಟ್ ಫೆ.12ರಂದು ಟೂರ್ನಿ ಉದ್ಘಾಟಿಸುವರು. ಮಾಜಿ ಕ್ರಿಕೆಟ್ ಆಟಗಾರ ಶಿವಪ್ರಸಾದ್ ಮಂಜುನಾಥ್ ಶೇಟ್ ಭಾಗವಹಿಸಲಿದ್ದಾರೆ. ರಾತ್ರಿ 11ರ ವರೆಗೆ ಟೂರ್ನಿ ನಡೆಯಲಿದೆ. ಫೆ.13ರಂದು ಬೆಳಿಗ್ಗೆ 10ರಿಂದ ರಾತ್ರಿ 11ರವರೆಗೆ ಟೂರ್ನಿ ನಡೆಯಲಿದ್ದು, 14ರಂದು ಬೆಳಿಗ್ಗೆ 10ರಿಂದ ಸಂಜೆ 4 ಗಂಟೆ ವರೆಗೆ ಅಂತಿಮ ಸುತ್ತಿನ ಪಂದ್ಯಗಳು ನಡೆಯುತ್ತವೆ ಎಂದರು.
ಸಮಾರೋಪ ಸಮಾರಂಭದಲ್ಲಿ ಭೂಷಣ್ ಅಣ್ವೇಕರ್ (ಶಟಲ್), ಅರ್ಪಿತಾ ಶೇಟ್( ಸ್ಕೇಟಿಂಗ್) ಹಾಗೂ ಪ್ಯಾರಾ ಒಲಿಂಪಿಕ್ ಆಟಗಾರ ರಾಘವೇಂದ್ರ ಶೇಟ್(ಈಜು) ಅವರನ್ನು ಸನ್ಮಾನಿಸಲಾಗುವುದು. ಗೆದ್ದ ತಂಡಕ್ಕೆ ₹99 ಸಾವಿರ ನಗದು, ರೋಲಿಂಗ್ ಟ್ರೋಫಿ, ರನ್ನರ್ಸ್‌ಗೆ ₹49 ಸಾವಿರ ನಗದು, ರೋಲಿಂಗ್ ಟ್ರೋಫಿ, ಮ್ಯಾನ್ ಆಫ್ ದ ಸಿರೀಸ್, ಮ್ಯಾನ್ ಆಫ್ ದಿ ಮ್ಯಾಚ್, ಬೆಸ್ಟ್ ಬೌಲರ್ ಟ್ರೋಫಿ, ನಗದು ಬಹುಮಾನ ನೀಡಲಾಗುವುದು ಎಂದು ಹೇಳಿದರು.
ಎಂ.ನಿಶಾಂತ್ ಶೇಟ್, ಎಂ.ಎಸ್. ಗುರುರಾಜ ಶೇಟ್, ಅರ್ಜುನ್ ಡಿ. ಶೇಟ್, ವಿಘ್ನೇಶ್ ಶೇಟ್, ರಾಘವೇಂದ್ರ ಶೇಟ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.