ADVERTISEMENT

ಮಲ್ಪೆ ದಲಿತ ಮಹಿಳೆ ಮೇಲಿನ ಹಲ್ಲೆಯ ಸಮರ್ಥನೆ ದುರದೃಷ್ಟಕರ: ಅನಿಲ್‌ ಕುಮಾರ್

ಆರೋಪಿಗಳನ್ನು ಶಾಸಕರು ಜೈಲಿನಲ್ಲಿ ಭೇಟಿ ಮಾಡಿದ್ದಕ್ಕೆ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2025, 8:27 IST
Last Updated 26 ಮಾರ್ಚ್ 2025, 8:27 IST
   

ಮಂಗಳೂರು: ಮಲ್ಪೆಯಲ್ಲಿ ದಲಿತ ಮಹಿಳೆಯನ್ನು ಕಟ್ಟಿ ಹಾಕಿ ಹಲ್ಲೆ ನಡೆಸಿದ ಕೃತ್ಯವನ್ನು ಕೆಲವು ಜನಪ್ರತಿನಿಧಿಗಳು ಸಮರ್ಥಿಸಿಕೊಳ್ಳುತ್ತಿರುವುದು ಹಾಗೂ ಪ್ರಕರಣದ ಆರೋಪಿಗಳನ್ನು ಜೈಲಿನಲ್ಲಿ ಭೇಟಿಯಾಗಿ ಬೆಂಬಲ ವ್ಯಕ್ತಪಡಿಸುವುದು ದುರದೃಷ್ಟಕರ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೌರ ಕಾರ್ಮಿಕರ ಹಾಗೂ ನಾಲ್ಕನೇ ದರ್ಜೆ ನೌಕರರ ಸಂಘವು ಹೇಳಿದೆ.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಈ ಕುರಿತು ಪ್ರತಿಕ್ರಿಯಿಸಿದ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಅನಿಲ್‌ ಕುಮಾರ್, ‘ಒಬ್ಬ ದಲಿತ ಮಹಿಳೆಯನ್ನು ಕಟ್ಟಿ ಹಾಕಿ ಹೊಡೆಯುವುದನ್ನೂ ಜನಪ್ರತಿನಿಧಿಗಳು ಸಮರ್ಥಿಸುತ್ತಿದ್ದಾರೆ ಎಂದರೆ, ನಮ್ಮ ರಾಜಕೀಯ ಮೌಲ್ಯಗಳು ಯಾವ ಮಟ್ಟಕ್ಕೆ ಇಳಿದಿವೆ ಎಂದು ಆಲೋಚಿಸಬೇಕು. ಇದು ಕರ್ನಾಟಕವೇ ಹೊರತು ಉತ್ತರ ಪ್ರದೇಶವನ್ನು. ಯಾವುದಾದರೂ ರಾಜಕಾರಣಿ ಇಂತಹ ಕೃತ್ಯವನ್ನು ಸಮರ್ಥಿಸಲು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದರು.

‘ನಾನು ಕೂಡಾ ಮೀನುಗಾರಿಕಾ ದಕ್ಕೆಯಲ್ಲಿ ಕೆಲಸ ಮಾಡಿದ್ದೇನೆ. ಬಿದ್ದ ಮೀನಗಳನ್ನು ಹೆಕ್ಕುವುದೆಲ್ಲ ಅಲ್ಲಿ ಸಾಮಾನ್ಯ. ಒಂದು ವೇಳೆ ಮಹಿಳೆ ಮೀನುಗಳನ್ನು ಕದ್ದಿದ್ದರೂ ಪೊಲೀಸರಿಗೆ ದೂರು ನೀಡಬೇಕಿತ್ತು. ಹಲ್ಲೆ ನಡೆಸಿದವರು ಬಲಾಢ್ಯರು. ಅವರನ್ನು ಸಮರ್ಥಿಸಿ ಹೋರಾಟ ನಡೆಯುತ್ತಿರುವುದು ಇನ್ನೂ ಬೇಸರದ ವಿಷಯ. ಸಂತ್ರಸ್ತ ಮಹಿಳೆ ರಾಜಿಗೆ ಒಪ್ಪದಿದ್ದರೆ ಆಕೆಯ ನದಿಯಲ್ಲೋ ಇನ್ನೆಲ್ಲೊ ಸಿಗುತ್ತದೆ. ದಲಿತರು ಇಂತಹ ಪರಿಸ್ಥಿತಿ ಎದುರಿಸುತ್ತಿರುವುದು ಸಾಮಾನ್ಯ ಎಂಬಂತಾಗಿದೆ’ ಎಂದರು.

ADVERTISEMENT

ಸಂಘದ ಪ್ರಧಾನ ಕಾರ್ಯದರ್ಶಿ ಎಸ್‌.ಪಿ.ಆನಂದ, ‘ಈ ರೀತಿ ದೌರ್ಜನ್ಯ ಗಂಭೀರ ವಿಚಾರ. ಯಾವುದೇ ಮಹಿಳೆಯರ ಬಗ್ಗೆ ಈ ರೀತಿ ಮಾನಹಾನಿಕರವಾಗಿ ನಡೆದುಕೊಂಡು ತೇಜೋವಧೆ ಮಾಡುವುದನ್ನು ಸಹಿಸಲಾಗದು. ಪರಿಶಿಷ್ಟರ ಮೇಲಿನ ದೌರ್ಜನ್ಯದಂತಹ ಪ್ರಕರಣವನ್ನು ರಾಜಿಯಲ್ಲಿ ಇತ್ಯರ್ಥ‍ಪಡಿಸಲೂ ಅವಕಾಶ ಇಲ್ಲ. ಅಷ್ಟಕ್ಕೂ ಕಾನೂನು ಕೈಗೆತ್ತಿಕೊಳ್ಳಲು ಅವಧಿಗೆ ಅಧಿಕಾರ ನೀಡಿದ್ದು ಯಾರು’ ಎಂದು ಪ್ರಶ್ನಿಸಿದರು.

‘ಮಹಿಳೆ ಈಗಾಗಲೇ ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಿದ್ದಾರೆ. ಮಹಿಳೆ ಮೇಲೆ ಒತ್ತಡ ಹಾಕಲಾಗುತ್ತಿದೆ. ಇಂತಹ ಕೃತ್ಯ ಇನ್ನು ಪುನರಾವರ್ತನೆ ಆಗಬಾರದು. ಈ ಕೃತ್ಯವನ್ನು ಖಂಡಿಸಿ ದಲಿತ ಸಂಘಟನೆಗಳೆಲ್ಲ ಒಟ್ಟಾಗಿ ಪ್ರತಿಭಟನೆ ನಡೆಸಲಿದ್ದೇವೆ. ಈ ವಿಚಾರದಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮ್ಮಯ ಸೂಚನೆ ನೀಡಿದ್ದನ್ನು ಸ್ವಾಗತಿಸುತ್ತೇವೆ’ ಎಂದರು.

‘ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ, ನಗರ ಸಭೆ, ಪುರಸಭೆಗಳ ಪೌರಕಾರ್ಮಿಕರ ಮಹಾ ಸಂಘವು ಏಪ್ರಿಲ್ 3ರಂದು ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಬೃಹತ್ ಸಮಾವೇಶವನ್ನು ಹಮ್ಮಿಕೊಂಡಿದೆ. ದೇಶದ ವಿವಿಧ ಭಾಗಗಳ ಸುಮಾರು 60 ಸಾವಿರ ಪೌರಕಾರ್ಮಿಕರು ಭಾಗವಹಿಸುವರು. ನಮ್ಮ ಜಿಲ್ಲೆಯಂದ 400 ಮಂದಿ ಭಾಗವಹಿಸಲಿದ್ದೇವೆ’ ಎಂದರು.

‘ಜಿಲ್ಲೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಪೌರಕಾರ್ಮಿಕರನ್ನು ನೇರಪಾವತಿ ವ್ಯವಸ್ಥೆಯಡಿ ತರಲಾಗಿದೆ. ಪಾಲಿಕೆಯ 462 ಪೌರಕಾರ್ಮಿಕರು, ಕಸ ಸಾಗಣೆ ವಾಹನಗಳ 157 ಚಾಲಕರು, 127 ಲೋಡರ್‌ಗಳು ಹಾಗೂ ಜಿಲ್ಲೆಯ ಇತರ ನಗರ ಸ್ಥಳೀಯ ಸಂಸ್ಥೆಗಳ ಪೌರಕಾರ್ಮಿಕರು ಸೇರಿ ನಮ್ಮ ಜಿಲ್ಲೆಯಲ್ಲಿ 671 ಮಂದಿಯ ಕೆಲಸ ಕಾಯಂಗೊಳ್ಳಬೇಕಿದೆ. ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕುರಿತು ಶುಭ ಸುದ್ದಿ ನೀಡುವ ನಿರೀಕ್ಷೆ ಇದೆ’ ಎಂದರು.

‘ನಗರದಲ್ಲಿ ಪೌರಕಾರ್ಮಿಕರನ್ನು ವಾಚ್ಯವಾಗಿ ಬೈದು ಹಲ್ಲೆ ನಡೆಸುವ ಪರಿಪಾಠ ಹೆಚ್ಚುತ್ತಿದೆ. ಬಿಕರ್ನಕಟ್ಟೆಯಲ್ಲಿ ಹಾಗೂ ಬಂದರಿನಲ್ಲಿ ಇಂತಹ ಘಟನೆಗಳು ನಡೆದಿವೆ. ಕುಡಿಯಲು ನೀರು ಕೇಳುವ ‍ಪೌರಕಾರ್ಮಿಕರನ್ನು ಅಸ್ಪೃಶ್ಯರಂತೆ ನಡೆಸಿಕೊಳ್ಳಲಾಗುತ್ತಿದೆ. ಪೌರಕಾರ್ಮಿಕರಿಗೆ ರಕ್ಷಣೆಗೆ ಜಿಲ್ಲಾಡಳಿತ ಕ್ರಮವಹಿಸಬೇಕು’ ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಸೇಸಪ್ಪ ಹಾಗೂ ಆನಂದ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.