ADVERTISEMENT

ಉಜಿರೆಯಲ್ಲಿ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಇಂದಿನಿಂದ

ಧರ್ಮಸ್ಥಳದ ಹೇಮಾವತಿ ಹೆಗ್ಗಡೆ ಅಧ್ಯಕ್ಷೆ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2023, 5:34 IST
Last Updated 3 ಫೆಬ್ರುವರಿ 2023, 5:34 IST
ಹೇಮಾವತಿ ಹೆಗ್ಗಡೆ
ಹೇಮಾವತಿ ಹೆಗ್ಗಡೆ   

ಉಜಿರೆ: ಕನ್ನಡ ಸಾಹಿತ್ಯ ಪರಿಷತ್ತು ದಕ್ಷಿಣ ಕನ್ನಡ ಜಿಲ್ಲಾ 25ನೇ ಸಾಹಿತ್ಯ ಸಮ್ಮೇಳನವು ಫೆ.3ರಿಂದ 5ರವರೆಗೆ ಇಲ್ಲಿನ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ಕುಂಬ್ಳೆ ಸುಂದರರಾವ್ ಪ್ರಾಂಗಣದಲ್ಲಿ ಸಾ.ರಾ. ಅಬೂಬಕ್ಕರ್ ವೇದಿಕೆಯಲ್ಲಿ ನಡೆಯಲಿದೆ. ಧರ್ಮಸ್ಥಳದ ಹೇಮಾವತಿ ವಿ. ಹೆಗ್ಗಡೆ ಸಮ್ಮೇಳನದ ಅಧ್ಯಕ್ಷರಾಗಿದ್ದಾರೆ.

ಮಹಿಳಾ ಸಬಲೀಕರಣದ ರೂವಾರಿ ಹೇಮಾವತಿ ಹೆಗ್ಗಡೆಯವರು ಮಹಿಳೆಯರಿಗೆ ಅನುಕಂಪ ತೋರುವ ಬದಲು, ಅವರಲ್ಲಿ ಸ್ವಭಾವತಃ ಇರುವ ನಾಚಿಕೆ, ಸಂಕೋಚ, ಕೀಳರಿಮೆ ಹೋಗಲಾಡಿಸಿ, ಸಮಾನತೆಯ ನೆಲೆಯಲ್ಲಿ ಸಮಾಜದ ಮುಖ್ಯ ವಾಹಿನಿಗೆ ಬರುವಂತೆ ಧೈರ್ಯ ಮತ್ತು ಆತ್ಮವಿಶ್ವಾಸ ತುಂಬುವ ಪ್ರಯತ್ನದಲ್ಲಿ ಯಶಸ್ವಿಯಾದವರು. ಗ್ರಾಮೀಣ ಪ್ರದೇಶದಲ್ಲಿ ಅವರು ಮೌನ ಕ್ರಾಂತಿಯನ್ನೇ ಮಾಡಿದ್ದಾರೆ. ಮಹಿಳಾ ಸಬಲೀಕರಣಕ್ಕೆ ಅವರು ಅನುಪಮ ಕೊಡುಗೆ ನೀಡಿದ್ದಾರೆ.

ಮಹಿಳೆಯೊಬ್ಬಳಿಗೆ ಶಿಕ್ಷಣ ನೀಡಿದರೆ ಇಡೀ ಕುಟುಂಬಕ್ಕೆ ಶಿಕ್ಷಣ ನೀಡಿದಂತಾಗುತ್ತದೆ. ಈ ಉದ್ದೇಶದಿಂದ ಅವರ ವಿಚಾರಧಾರೆಯಂತೆ ಕಾರ್ಕಳದಲ್ಲಿ ಬಾಹುಬಲಿ ಶ್ರಾವಿಕಾಶ್ರಮದಲ್ಲಿ ವಿದ್ಯಾರ್ಥಿನಿಯರಿಗೆ ಶಿಕ್ಷಣದ ಜೊತೆಗೆ ಯೋಗ, ಜಪ, ಧ್ಯಾನ, ಪ್ರಾರ್ಥನೆ ಮೊದಲಾದ ಚಟುವಟಿಕೆಗಳನ್ನು ಹೇಳಿಕೊಡಲಾಗುತ್ತದೆ.

ADVERTISEMENT

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಹೇಮಾವತಿ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮ ಮತ್ತು ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಮೂಲಕ ‘ಮಹಿಳೆಯರು, ಮಹಿಳೆಯರಿಗಾಗಿ ಮತ್ತು ಮಹಿಳೆಯರಿಂದ’ ತತ್ವದಡಿ ಅನೇಕ ಸೃಜನಾತ್ಮಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಬೆಳ್ತಂಗಡಿ ತಾಲ್ಲೂಕಿನ ‘ಸಮೂಹ’ ಸಾಂಸ್ಕೃತಿಕ ಸಂಘಟನೆಯ ಅಧ್ಯಕ್ಷರಾಗಿ ನೃತ್ಯ, ನಾಟಕ, ಸಂಗೀತ, ಯಕ್ಷಗಾನ, ಸಾಹಿತ್ಯ ಮೊದಲಾದ ಕಲಾ ಪ್ರಕಾರಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.