ಎರ್ಮಾಯಿ ಜಲಪಾತ
ಪ್ರಜಾವಾಣಿ ಚಿತ್ರ ಫಕ್ರುದ್ದೀನ್ ಎಚ್
ಮಂಗಳೂರು: ಭೋರ್ಗರೆಯುವ ಕಡಲು, ಹಸಿರುಟ್ಟ ಭೂಮಾತೆಯ ಮಡಿಲು, ಬೆಟ್ಟ ಗುಡ್ಡಗಳ ಸಾಲು, ದೈವಸ್ಥಾನ, ದೇವಾಲಯ, ಚರ್ಚ್–ಮಸೀದಿಗಳಲ್ಲಿ ಅಧ್ಯಾತ್ಮದ ತಂಪು... ಇವೆಲ್ಲವೂ ಇರುವ ದಕ್ಷಿಣ ಕನ್ನಡ, ಪ್ರವಾಸೋದ್ಯಮದ ದೃಷ್ಟಿಯಿಂದ ಸಂಪದ್ಭರಿತ ಜಿಲ್ಲೆ. ಭಕ್ತಿಯಿಂದ ಆರಾಧಿಸುವವರಿಗೆ ಪ್ರಾರ್ಥನಾಲಯಗಳೂ, ಶಕ್ತಿ ಪ್ರದರ್ಶಿಸುವವರಿಗೆ ಸಾಹಸ ಕ್ರೀಡೆಗಳೂ ಪರಿಸರ ಪ್ರೇಮಿಗಳಿಗೆ ಪ್ರಕೃತಿಯೇ ಸೃಷ್ಟಿಸಿರುವ ಸಂಪನ್ಮೂಲವೂ ಇರುವ ಇಲ್ಲಿ ಈಗ ಪ್ರವಾಸೋದ್ಯಮ ಅಭಿವೃದ್ಧಿ ದಿಸೆಯಲ್ಲಿ ಹೊಸ ಭರವಸೆ ಮೂಡಿದೆ.
ಜಿಲ್ಲೆಯ ಪ್ರವಾಸಿ ತಾಣಗಳ ಪೈಕಿ 37 ಕೇಂದ್ರಗಳಲ್ಲಿ ಮೂಲಸೌಲಭ್ಯ ಒದಗಿಸಲು ಪ್ರವಾಸೋದ್ಯಮ ಇಲಾಖೆ ಮುಂದಾಗಿದೆ. ಕಡಲ ಕಿನಾರೆಗಳು, ದೇವಸ್ಥಾನಗಳು, ನಿಸರ್ಗಧಾಮಗಳು, ಗುಹಾಲಯಗಳು, ಬೆಟ್ಟಗಳು, ಜಲಪಾತಗಳು ಮತ್ತು ದೇವಾಲಯಗಳು ಈ ಪಟ್ಟಿಯಲ್ಲಿವೆ. ಜಿಲ್ಲೆಯ ಬಹುತೇಕ ಎಲ್ಲ ತಾಣಗಳೂ ಇದರಲ್ಲಿ ಅಡಕವಾಗಿವೆ. ಹೊಸ ಪ್ರವಾಸೋದ್ಯಮ ನೀತಿಯಡಿ (2024–29) ಇವುಗಳನ್ನು ಆಕರ್ಷಣೀಯವಾಗಿಸಲು ಸದ್ಯದಲ್ಲೇ ಯೋಜನೆ ಸಿದ್ದವಾಗಲಿದೆ.
ರಾಜ್ಯದ ಒಟ್ಟು 1,275 ತಾಣಗಳನ್ನು ಅಭಿವೃದ್ಧಿ ಮಾಡಲು 2024ರ ನವೆಂಬರ್‌ನಲ್ಲೇ ಸರ್ಕಾರ ಆದೇಶ ಹೊರಡಿಸಿತ್ತು. ಈ ವರ್ಷದ ಏಪ್ರಿಲ್ 14ರಂದು ದಕ್ಷಿಣ ಕನ್ನಡ ಜಿಲ್ಲೆಯಿಂದ ಪಟ್ಟಿಯನ್ನು ಸಲ್ಲಿಸಲಾಗಿತ್ತು. ಇದಕ್ಕೆ ಆಗಸ್ಟ್ ತಿಂಗಳಲ್ಲಿ ಅನುಮೋದನೆ ಲಭಿಸಿದೆ. 37 ತಾಣಗಳನ್ನು ಯಾವ ರೀತಿ ಅಭಿವೃದ್ಧಿಪಡಿಸಬಹುದು ಎಂಬುದನ್ನು ಪರಿಶೀಲಿಸಿ ವರದಿ ಸಲ್ಲಿಸುವಂತೆ ಪ್ರವಾಸೋದ್ಯಮ ಇಲಾಖೆಯ ಎಂಜಿನಿಯರಿಂಗ್ ವಿಭಾಗ ಕೆಟಿಐಎಲ್‌ಗೆ (ಕರ್ನಾಟಕ ಪ್ರವಾಸೋದ್ಯಮ ಮೂಲಸೌಕರ್ಯ ಅಭಿವೃದ್ಧಿ ಸಂಸ್ಥೆ) ಆಗಸ್ಟ್ 14ರಂದು ಸೂಚಿಸಲಾಗಿದೆ.
‘ಪಟ್ಟಿಯನ್ನು ಕೆಟಿಐಎಲ್‌ಗೆ ಕಳುಹಿಸಲಾಗಿದೆ. ಅವರು ಎಲ್ಲ ತಾಣಗಳನ್ನು ಪರಿಶೀಲಿಸಿ ಅಂದಾಜು ವೆಚ್ಚದ ವಿವರ ಸಲ್ಲಿಸಲಿದ್ದಾರೆ. ಅವರಿಂದ ವರದಿ ಬಂದ ನಂತರ ಕೇಂದ್ರ ಕಚೇರಿಗೆ ಕಳುಹಿಸಲಾಗುವುದು. ಅನಂತರವೇ ಯೋಜನೆ ಸಿದ್ಧವಾಗಲಿದೆ’ ಎಂದು ಪ್ರವಾಸೋದ್ಯಮ ಇಲಾಖೆಯ ಪ್ರಭಾರ ಉಪನಿರ್ದೇಶಕ ದಿಲೀಪ್ ತಿಳಿಸಿದರು.
‘ಮೂಲಸೌಕರ್ಯಗಳಿಗೆ ಆದ್ಯತೆ ನೀಡಲಾಗುವುದು. ಶೌಚಾಲಯಗಳು ಮತ್ತು ಸ್ನಾನಗೃಹಗಳನ್ನು ಆದ್ಯತೆಯ ಮೇಲೆ ನಿರ್ಮಿಸಲಾಗುವುದು. ಅಗತ್ಯ ಇರುವ ಕಡೆಗಳಲ್ಲಿ ಆಸನದ ವ್ಯವಸ್ಥೆಗಳನ್ನು ಒದಗಿಸುವುದಕ್ಕೂ ನಿರ್ಧರಿಸಲಾಗಿದೆ’ ಎಂದು ಅವರು ವಿವರಿಸಿದರು.
ಪಟ್ಟಿಯಲ್ಲಿರುವ ತಾಣಗಳಲ್ಲಿ ದೇವಸ್ಥಾನಗಳಿಗೇ ಆದ್ಯತೆ. ಬೀಚ್‌ಗಳನ್ನು ಕೂಡ ಗುರುತಿಸಲಾಗಿದೆ. ಹೆಚ್ಚು ಪ್ರಸಿದ್ಧಿ ಗಳಿಸದ ಮತ್ತು ಅಪರಿಚಿತ ತಾಣಗಳು ಕೂಡ ಇವೆ. ಗುಹೆ, ಗುಹಾಲಯ, ಬೆಟ್ಟ ಮತ್ತು ಜಲಪಾತಗಳು ಈ ಸಾಲಿಗೆ ಸೇರುತ್ತವೆ. ಪುತ್ತೂರಿನ ಬೆಂದ್ರ್ ತೀರ್ಥ, ಅನಂತವಾಡಿ ಪಾಂಡವರ ಗುಹೆ, ಬೆಳ್ತಂಗಡಿ ಸಮೀಪದ ಜಮಲಾಬಾದ್ ಕೋಟೆ, ಎರ್ಮಾಯಿ ಜಲಪಾತ, ಪುತ್ತೂರು ಸಮೀಪದ ಬಿರುಮಲೆ ಬೆಟ್ಟ, ಪಡುಮಲೆ ಬೆಟ್ಟ, ಸುಳ್ಯ ಸನಿಹದ ತೋಡಿಕಾನ ಜಲಪಾತ ಮುಂತಾದ ಹೆಚ್ಚು ಪ್ರವಾಸಿಗರು ಭೇಟಿ ನೀಡದ ಅಥವಾ ಸಾಂದರ್ಭಿಕವಾಗಿ ಮಾತ್ರ ತೆರಳುವ ಪ್ರದೇಶಗಳು ಕೂಡ ಯೋಜನೆ ಜಾರಿಗೊಂಡ ನಂತರ ಇನ್ನಷ್ಟು ಮಂದಿಯನ್ನು ಆಕರ್ಷಿಸಲಿದೆ.
ಪ್ರವಾಸಿಗರು, ಚಾರಣ ಪ್ರಿಯರು ಮತ್ತು ಸ್ಥಳೀಯರು ಈ ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ. ಆದರೆ ಕೊಣಾಜೆ ಕಲ್ಲಿನಂಥ ಆಕರ್ಷಕ, ಬಹಳ ಮಂದಿ ಭೇಟಿ ನೀಡಲು ಇಷ್ಟಪಡುವ ಕೇಂದ್ರಗಳನ್ನು ಪಟ್ಟಿಯಲ್ಲಿ ಸೇರಿಸದೇ ಇರುವುದು ಕೆಲವರಲ್ಲಿ ಬೇಸರ ಮೂಡಿಸಿದೆ.
‘ಬೆಂದ್ರ್ ತೀರ್ಥ ಹೇಳಿಕೇಳಿ ತುಂಬ ಹೆಸರು ಇರುವ, ನಂಬಿಕೆಯ ಜಾಗ. ಆದರೆ ಸೌಲಭ್ಯಗಳು ತೀರಾ ಕಡಿಮೆ. ಪ್ರವಾಸೋದ್ಯಮ ಇಲಾಖೆಯ ಆಧೀನದಲ್ಲಿರುವ ಇಲ್ಲಿಗೆ ಕನಿಷ್ಠ ಪ್ರಮಾಣದ ಮೂಲಸೌಕರ್ಯಗಳನ್ನಾದರೂ ಕಲ್ಪಿಸಬೇಕು ಎಂದು ಕೋರಲಾಗಿತ್ತು. ನಿರ್ವಹಣೆಗೆ ಇದ್ದ ಒಬ್ಬರು ವ್ಯಕ್ತಿ ನಿವೃತ್ತರಾದ ನಂತರ ಯಾರನ್ನೂ ನೇಮಕ ಮಾಡಲಿಲ್ಲ’ ಎಂದು ಈ ಪ್ರದೇಶವನ್ನು ಕಾಳಜಿಯಿಂದ ನೋಡಿಕೊಳ್ಳುತ್ತಿರುವ ಶಿವಾಜಿ ಯುವಸೇನೆ ಸಂಘಟನೆಯ ಅಧ್ಯಕ್ಷ ಧನ್ಯರಾಜ್ ಹೇಳಿದರು.
‘ಫೆಬ್ರುವರಿ ನಂತರ ಸಾಮಾನ್ಯವಾಗಿ ಇಲ್ಲಿ ನೀರು ಇರುವುದಿಲ್ಲ. ಆದ್ದರಿಂದ ಎಲ್ಲ ಕಾಲದಲ್ಲೂ ನೀರು ನಿಲ್ಲುವಂಥ ವ್ಯವಸ್ಥೆ ಅಗಬೇಕು. ಆರು ವರ್ಷಗಳ ಹಿಂದೆ ಇಲ್ಲೊಂದು ಸಣ್ಣ ವಸತಿ ಗೃಹ ನಿರ್ಮಿಸಲಾಗಿದೆ. ಆದರೆ ಅದರೊಳಗೆ ಏನೇನೂ ಸೌಕರ್ಯ ಇಲ್ಲ. ಈಗ ಇಡೀ ಪ್ರದೇಶವನ್ನು ಅಭಿವೃದ್ಧಿ ಮಾಡಲು ಮುಂದಾಗಿರುವುದು ಖುಷಿಯ ವಿಷಯ’ ಎಂದರು ಅವರು.
‘ಗುಡ್ಡ–ಪರ್ವತ ಪ್ರದೇಶಗಳಲ್ಲಿ ಅಭಿವೃದ್ಧಿ ಎಂದರೆ ಪರಿಸರಕ್ಕೆ ಪೂರಕವಾಗಿರಬೇಕು. ಅರಣ್ಯ ಇಲಾಖೆ ಅಧೀನದಲ್ಲಿರುವ ಕುಮಾರ ಪರ್ವತ, ಗಡಾಯಿಕಲ್ಲು ಮುಂತಾದ ಕಡೆಗಳಲ್ಲಿ ನಿರ್ಬಂಧಗಳನ್ನು ಹೇರಿರುವುದರಿಂದ ಕೆಲವರ ಅನಾಗರಿಕ ನಡವಳಿಕೆಯ ಮೇಲೆ ನಿಯಂತ್ರಣ ಸಾಧ್ಯವಾಗಿದೆ. ಜಲಪಾತಗಳಲ್ಲಿ ಇನ್ನೂ ಇಂಥ ನಿರ್ಬಂಧಗಳು ಜಾರಿಗೆ ಬರಲಿಲ್ಲ. ಆದ್ದರಿಂದ ಅಲ್ಲೆಲ್ಲ ಪ್ರಕೃತಿಗೆ ಮಾರಕವಾದ ಚಟುವಟಿಕೆಗಳು ಕಂಡುಬರುತ್ತಿವೆ. ಪರಿಸರಕ್ಕೆ ಪೂರಕವಾಗಿರುವ ಪ್ರದೇಶಗಳಲ್ಲಿ ರೀಲ್ಸ್, ಕುಡಿತ, ಮೋಜು–ಮಸ್ತಿಯೇ ಮುಖ್ಯವಾಗಬಾರದು. ಅಭಿವೃದ್ಧಿ ಯೋಜನೆಯಲ್ಲಿ ಈ ನಿಟ್ಟಿನ ಚಿಂತನೆಯೂ ಇರಬೇಕು’ ಎಂಬುದು ಸುಬ್ರಹ್ಮಣ್ಯ ನಿವಾಸಿ, ಹೈದರಾಬಾದ್‌ನಲ್ಲಿ ಉದ್ಯೋಗದಲ್ಲಿರುವ ಟ್ರೆಕಿಂಗ್ ಆಸಕ್ತ ಸ್ಮರಣ್ ಅಭಿಪ್ರಾಯ.
ತಣ್ಣೀರುಬಾವಿ ಕಡಲ ಕಿನಾರೆ
ಎರ್ಮಾಯಿ ಜಲಪಾತ
ಶಿವಾಜಿ ಯುವ ಸೇನೆ ಸಂಘಟನೆಯ ಒತ್ತಾಯದ ಮೇರೆಗೆ ಬೆಂದ್ರ್ ತೀರ್ಥದಲ್ಲಿ ಸೋಲಾರ್ ದೀಪಗಳನ್ನು ಅಳವಡಿಸಲಾಗಿದೆ. ಗಿಡಗಳನ್ನು ಬೆಳೆಸುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಕಾಂಕ್ರಿಟ್ ರಸ್ತೆ ಇದೆ. ಇಲ್ಲಿ ಇನ್ನಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವುದಾದರೆ ಸ್ಥಳೀಯರ ಜೊತೆಯೂ ಚರ್ಚೆ ನಡೆಸಬೇಕು. ಯಾಕೆಂದರೆ ಗ್ರಾಮೀಣರದ್ದೇ ಆದ ಕೆಲವು ಸಮಸ್ಯೆಗಳು ಇರುವುದರಿಂದ ಸೂಕ್ತ ಸಲಹೆಗಳು ಸಿಗುವ ಸಾಧ್ಯತೆ ಇದೆ.ಧನ್ಯರಾಜ್ ಶಿವಾಜಿ ಯುವಸೇನೆ ಅಧ್ಯಕ್ಷ
ಟ್ರೆಕಿಂಗ್ ಮಾಡುವಂಥ ಜಾಗದಲ್ಲಿ ಅಭಿವೃದ್ಧಿ ಎಂಬುದೇ ಸೂಕ್ತವಲ್ಲದ ಪರಿಕಲ್ಪನೆ. ಇಂತಹ ತಾಣಗಳು ಪ್ರವಾಸೋದ್ಯಮ ಕೇಂದ್ರಗಳಾಗಬಾರದು. ಕಾಡಿನ ಒಳಗೆ ಹೋಗುವುದೇ ಪ್ರಕೃತಿಯನ್ನು ತಿಳಿಯುವುದಕ್ಕಾಗಿ. ಅದಕ್ಕೆ ನೈಜ ಪರಿಸರವೇ ಬೇಕು. ವಾಸ್ತವದಲ್ಲಿ ಕಾಡಿನ ಒಳಗೆ ಮನುಷ್ಯರು ಪ್ರವೇಶಿಸುವುದೇ ತಪ್ಪು. ಹೋದರೂ ಅಲ್ಲಿನ ಜೀವಜಾಲಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಮಾರ್ಗದರ್ಶನಕ್ಕಾಗಿ ಸ್ಥಳೀಯರನ್ನು ಕರೆದುಕೊಂಡು ಹೋಗುವ ವ್ಯವಸ್ಥೆ ಮಾಡಿದರೆ ಅವರಿಗೆ ಜೀವನೋಪಾಯವೂ ಆಗಬಹುದು.ರಾಜು ಕಿದೂರು ಶಿಕ್ಷಕ ಪರಿಸರ ಪ್ರೇಮಿ