ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡು ನಗರ ಪೊಲೀಸ್ ಠಾಣೆ ಬಳಿ ಮಂಗಳೂರಿನ ನಿರ್ಮಿತಿ ಕೇಂದ್ರದ ಮೂಲಕ ಸೈಬರ್ ಸ್ಟೇಷನ್ (ಸೆನ್) ಕಟ್ಟಡ ನವೀಕರಣ ಕಾಮಗಾರಿ ನಡೆಯುತ್ತಿದೆ
ಬಂಟ್ವಾಳ: ಮಂಗಳೂರಿನಲ್ಲಿ ಕಾರ್ಯಾಚರಿಸುತ್ತಿದ್ದ ಜಿಲ್ಲಾ ಸೈಬರ್ ಅಪರಾಧ ಠಾಣೆ (ಸೆನ್) ಶೀಘ್ರವೇ ಬಂಟ್ವಾಳಕ್ಕೆ ಸ್ಥಳಾಂತರಗೊಳ್ಳಲಿದ್ದು, ಬ್ರಿಟಿಷರ ಆಡಳಿತಾವಧಿಯಲ್ಲಿ ಜೈಲಾಗಿದ್ದ ಬಂಟ್ವಾಳ ನಗರ ಪೊಲೀಸ್ ಠಾಣೆಯ ಹಳೆ ಕಟ್ಟಡದಲ್ಲಿ ಆರಂಭಗೊಳ್ಳಲಿದೆ.
ಮಂಗಳೂರು ನಿರ್ಮಿತಿ ಕೇಂದ್ರದ ಮೂಲಕ ಹಳೆಯ ಕಟ್ಟಡದ ನವೀಕರಣ ಕಾಮಗಾರಿ ಆರಂಭಗೊಂಡಿದ್ದು, ಕೊಠಡಿ ವಿಸ್ತರಣೆ ಕಾಮಗಾರಿಯೂ ನಡೆಯುತ್ತಿದೆ. ಜಿಲ್ಲೆಯ ಯಾವುದೇ ಪ್ರದೇಶಗಳಲ್ಲಿ ಸೈಬರ್ ಅಪರಾಧ ಪ್ರಕರಣಗಳು ನಡೆದರೂ, ಸಂತ್ರಸ್ತರು ದೂರು ಸಲ್ಲಿಸಲು ಮಂಗಳೂರಿಗೇ ಹೋಗಬೇಕಿತ್ತು. ಆದರೆ, ಬಂಟ್ವಾಳ ಸೇರಿದಂತೆ ಸುಳ್ಯ, ಪುತ್ತೂರು, ಬೆಳ್ತಂಗಡಿ, ಕಡಬ ತಾಲ್ಲೂಕಿನ ನಾಗರಿಕರಿಗೆ ಸಮಸ್ಯೆ ಆಗುತ್ತಿತ್ತು.
ಮಂಗಳೂರಿನ ಬಾಡಿಗೆ ಕಟ್ಟಡದಲ್ಲಿ ಸೆನ್ ಠಾಣೆ ಕಾರ್ಯಾಚರಿಸುತ್ತಿದ್ದು, ಶೀಘ್ರವೇ ಬಿ.ಸಿ.ರೋಡಿನ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಳಿಸಲು ಇಲಾಖೆ ಸಿದ್ಧತೆ ನಡೆಸಿದೆ. ಸುಮಾರು ₹ 35 ಲಕ್ಷ ವೆಚ್ಚದಲ್ಲಿ ದುರಸ್ತಿ ಮತ್ತು ವಿಸ್ತರಣೆ ಕಾಮಗಾರಿ ನಡೆಯುತ್ತಿದೆ. ಹಳೆಯ ಶೈಲಿಯ ಕಟ್ಟಡ ಹಾಗೇ ಉಳಿಸುವ ದೃಷ್ಟಿಯಿಂದ ಚಾವಣಿ ಅಳವಡಿಸಿ ನವೀಕರಣಗೊಳಿಸಲಾಗುತ್ತಿದೆ. ಈ ಕಟ್ಟಡದ ಮುಂದೆ 8 ಪಿಲ್ಲರ್ ಅಳವಡಿಸುವ ಮೂಲಕ ದೂರುದಾರರಿಗೆ ಅನುಕೂಲಕರ ವಾತಾವರಣ ನಿರ್ಮಿಸಲಾಗುತ್ತಿದೆ. ಎರಡು ವರ್ಷಗಳ ಹಿಂದೆ ಸೆನ್ ಠಾಣೆ ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾವನೆ ಕಳುಹಿಸಲಾಗಿದ್ದು, ಈ ವರ್ಷ ಅನುದಾನ ಬಿಡುಗಡೆಗೊಂಡಿದೆ.
ಇದರಲ್ಲಿ ಪ್ರತ್ಯೇಕ ಎರಡು ಜೈಲು, ಡಿವೈಎಸ್‌ಪಿ, ಇನ್‌ಸ್ಪೆಕ್ಟರ್, ಪಿಎಸ್ಐ ಮತ್ತು ಸಿಬ್ಬಂದಿಗೆ ಪ್ರತ್ಯೇಕ ಕೊಠಡಿ, ಅಹವಾಲು ಸ್ವೀಕಾರದ ಕೊಠಡಿ, ಸಹಿತ ಶೌಚಾಲಯ ನಿರ್ಮಾಣಗೊಳ್ಳಲಿದೆ. ಈಗಾಗಲೇ 25 ಮಂದಿ ಸಿಬ್ಬಂದಿ ಹೊಂದಿರುವ ಈ ಸೆನ್ ಠಾಣೆ ಕಟ್ಟಡಕ್ಕೆ ಎಸ್‌ಪಿ ಯತೀಶ್ ಎನ್. ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮುಂದಿನ ಏಳೆಂಟು ತಿಂಗಳ ಒಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ನಿರ್ಮಿತಿ ಕೇಂದ್ರದ ಎಂಜಿನಿಯರ್ ನವೀನ್ ಚಂದ್ರ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.