ADVERTISEMENT

ಎಸ್‌ಎಸ್‌ಎಲ್‌ಸಿ: ಶಾಲೆಗಳಿಗೆ ಭೇಟಿ, ‘ಆಪ್ತ’ ಸಲಹೆ; ಜಿಲ್ಲಾಧಿಕಾರಿ ದರ್ಶನ್

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 2:56 IST
Last Updated 19 ಫೆಬ್ರುವರಿ 2026, 2:56 IST
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ದರ್ಶನ್ ಎಚ್‌.ವಿ ಮಾತನಾಡಿದರು. ಶಶಿಧರ ಜಿ.ಎನ್, ಅರುಣ್ ಕೆ ಮತ್ತು ನರ್ವಡೆ ವಿನಾಯಕ ಕರ್ಭಾರಿ ಪಾಲ್ಗೊಂಡಿದ್ದರು
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ದರ್ಶನ್ ಎಚ್‌.ವಿ ಮಾತನಾಡಿದರು. ಶಶಿಧರ ಜಿ.ಎನ್, ಅರುಣ್ ಕೆ ಮತ್ತು ನರ್ವಡೆ ವಿನಾಯಕ ಕರ್ಭಾರಿ ಪಾಲ್ಗೊಂಡಿದ್ದರು   

ಮಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಸಂದರ್ಭದಲ್ಲಿ ಮಕ್ಕಳಲ್ಲಿ ಧೈರ್ಯ ಮತ್ತು ಭರವಸೆ ತುಂಬುವುದಕ್ಕಾಗಿ ಜಿಲ್ಲಾಡಳಿತ ಕೆಲವೇ ದಿನಗಳಲ್ಲಿ ಆಯ್ದ ಶಾಲೆಗಳಿಗೆ ಭೇಟಿ ನೀಡಲಿದೆ ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್‌.ವಿ ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರ ಜೊತೆಯಲ್ಲಿ ತಾವು ಶಾಲೆಗಳಿಗೆ ಭೇಟಿ ನೀಡಲಿರುವುದಾಗಿ ತಿಳಿಸಿದರು.   

ಆತಂಕ, ಖಿನ್ನತೆ ಇರುವವರ ಜೊತೆ ಆಪ್ತ ಸಮಾಲೋಚನೆ ನಡೆಸಲು ಮತ್ತು ಸಲಹೆ ನೀಡಲು ಟೆಲಿಮಾನಸ ಯೋಜನೆ ಜಾರಿಯಲ್ಲಿದೆ. ರಾಜ್ಯ ಮಟ್ಟದಲ್ಲಿ 14416 ಸಂಖ್ಯೆ ಡಯಲ್ ಮಾಡಿದರೆ ನೆರವು ಸಿಗುತ್ತದೆ. ಜಿಲ್ಲಾ ಮಟ್ಟದಲ್ಲಿ ಪ್ರತ್ಯೇಕವಾಗಿ ಕರೆ ಮಾಡುವ ವ್ಯವಸ್ಥೆ ಜಾರಿಗೆ ತರಲು ಪ್ರಯತ್ನ ನಡೆಯುತ್ತಿದೆ. ಜಿಲ್ಲೆಯಲ್ಲಿ ತಜ್ಞರನ್ನು ಗುರುತಿಸಲು ವೆನ್‌ಲಾಕ್ ಡಿಎಂಒ ಮತ್ತು ಡಿಎಚ್‌ಒ ಅವರಿಗೆ ಸೂಚಿಸಲಾಗಿದೆ ಎಂದರು. 

ADVERTISEMENT

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮಾ.18ರಿಂದ ಏ.2ರ ವರೆಗೆ ನಡೆಯಲಿದೆ. ಅಕ್ರಮ ತಡೆಯಲು ವೆಬ್‌ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ. ಪರೀಕ್ಷೆ ಮುಂದೂಡಿಕೆ ಮತ್ತಿತರ ವಿಷಯಗಳಿಗೆ ಸಂಬಂಧಿಸಿ ತಪ್ಪು ಮಾಹಿತಿಯನ್ನು ನಂಬಬಾರದು. ಜಿಲ್ಲಾಡಳಿತ ಅಥವಾ ರಾಜ್ಯ ಸರ್ಕಾರ ಹೊರಡಿಸುವ ಮಾಹಿತಿಯನ್ನಷ್ಟೇ ಗಮನಿಸಬೇಕು ಎಂದು ಅವರು ಹೇಳಿದರು. ಮೊದಲ ಪೂರ್ವಸಿದ್ಧತಾ ಪರೀಕ್ಷೆಯಲ್ಲಿ ಶೇಕಡ 52 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು ಎರಡನೇ ಸಿದ್ಧತಾ ಪರೀಕ್ಷೆಯ ಫಲಿತಾಂಶ ಶೇ 68.24 ಆಗಿತ್ತು. ಫೆ.23ರಂದು ಮೂರನೇ ಪರೀಕ್ಷೆ ನಡೆಯಲಿದೆ.   

ಫೆ.28ರಂದು ಆರಂಭವಾಗಲಿರುವ ಪಿಯುಸಿ ಪರೀಕ್ಷೆ ಮಾ.17ರಂದು ಮುಕ್ತಾಯಗೊಳ್ಳಲಿದೆ. 59 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಎರಡು ಪೂರ್ವಸಿದ್ಧತಾ ಪರೀಕ್ಷೆಗಳಲ್ಲಿ ಕ್ರಮವಾಗಿ ಶೇ 78 ಮತ್ತು ಶೇ 85ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ ಎಂದು ಅವರು ತಿಳಿಸಿದರು. 

ಜಿಲ್ಲಾ ಪಂಚಾಯಿತಿ ಸಿಇಒ ನರ್ವಡೆ ವಿನಾಯಕ ಕರ್ಭಾರಿ, ಎಸ್‌ಪಿ ಅರುಣ್ ಕೆ ಮತ್ತು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಶಿಧರ ಜಿ.ಎನ್ ಪಾಲ್ಗೊಂಡಿದ್ದರು.

ದರ್ಶನ್ ಎಚ್‌.ವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.