ಪುತ್ತೂರು: ತಾಲ್ಲೂಕಿನ ಇರ್ದ ಗ್ರಾಮದ ದೂಮಡ್ಕ-ಚಾಕೋಟೆ- ಮದಕದ ಪರಿಶಿಷ್ಟ ಪಂಗಡಕ್ಕೆ ಸೇರಿದ 13 ಮನೆಗಳಿಗೆ ರಸ್ತೆ ಸಂಪರ್ಕವಿಲ್ಲದೇ ಇಲ್ಲಿನ ನಿವಾಸಿಗಳು ತೀವ್ರ ಸಂಕಷ್ಟ ಎದುರಿಸುತ್ತಿದ್ದು, 15 ದಿನದ ಒಳಗೆ ರಸ್ತೆ ನಿರ್ಮಾಣ ಆಗದಿದ್ದರೆ ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆ ವತಿಯಿಂದ ರಸ್ತೆ ನಿರ್ಮಾಣ ಮಾಡಲಾಗುವುದು ಎಂದು ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಗಿರಿಧರ ನಾಯ್ಕ ಹೇಳಿದರು.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 90 ವರ್ಷದಿಂದ ಕಾಲು ದಾರಿ ಇದ್ದರೂ ರಸ್ತೆಗೆ ಜಾಗ ಬಿಡದೆ ಈ ಜಾಗವನ್ನು ಅಕ್ರಮ ಸಕ್ರಮದಡಿ ಸ್ಥಳೀಯರೊಬ್ಬರಿಗೆ ಮಂಜೂರು ಮಾಡಲಾಗಿದೆ. ಹಿಂದಿನ ಸಂಪರ್ಕ ದಾರಿಯಲ್ಲಿ ದುರುದ್ದೇಶದಿಂದ ಗುಡಿಸಲು ನಿರ್ಮಿಸಿ, ದಾರಿಯನ್ನು ಬೇರೆ ಕಡೆಗೆ ಬದಲಾಯಿಸಿದ್ದಾರೆ. ಅಲ್ಲದೇ ಹಿಂದೆ ಇದ್ದ ಕಾಲು ದಾರಿಯನ್ನು ಕಿರಿದಾಗಿಸಿದ್ದಾರೆ. ರಸ್ತೆ ವ್ಯವಸ್ಥೆ ಇಲ್ಲದೆ ಇಲ್ಲಿನ ಮಂದಿ ಸಮಸ್ಯೆ ಅನುಭವಿಸುವಂತಾಗಿದೆ ಎಂದು ಹೇಳಿದರು.
15 ದಿನಗಳ ತನಕ ಕಾದು ನೋಡುತ್ತೇವೆ. ವ್ಯವಸ್ಥೆ ಮಾಡದಿದ್ದರೆ ಸಂಘಟನೆಯ ವತಿಯಿಂದಲೇ ರಸ್ತೆ ನಿರ್ಮಿಸುತ್ತೇವೆ. ಸಮಸ್ಯೆ ತಿಳಿಯ ಸ್ಥಳಕ್ಕೆ ಹೋಗಿದ್ದ ಏಳು ಜನರ ಮೇಲೆ ಸಂಪರ್ಕ ರಸ್ತೆಗೆ ಅಡ್ಡಿ ಮಾಡಿದವರೇ ಹಲ್ಲೆ ಆರೋಪ ಹೊರಿಸಿ ದೂರು ನೀಡಿದ್ದಾರೆ. ಆದರೆ ಈ ವಿಚಾರದಲ್ಲಿ ನಾನು ಜೈಲಿಗೆ ಹೋದರೂ ಪರವಾಗಿಲ್ಲ, ರಸ್ತೆ ನಿರ್ಮಿಸಿಯೇ ಸಿದ್ಧ ಎಂದರು.
ವೇದಿಕೆಯ ರಾಜ್ಯ ಕಾರ್ಯದರ್ಶಿ ಪ್ರಮೋದ್, ಕಾಲೊನಿಯ ನಿವಾಸಿಗಳಾದ ಚಂದ್ರಶೇಖರ್, ಆಶಾ ಕಾರ್ಯಕರ್ತೆ ದೇವತಿ, ಪ್ರತಿಮಾ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.