ADVERTISEMENT

ಭಕ್ತರು– ದೇವರ ನಡುವೆ ರಾಜಕಾರಣಿ ಬೇಡ: ಘಂಟಿ

15ನೇ ವರ್ಷದ ಆಳ್ವಾಸ್‌ ನುಡಿಸಿರಿಗೆ ತೆರೆ–ಅಚ್ಚುಕಟ್ಟುತನಕ್ಕೆ ಸರ್ವಾಧ್ಯಕ್ಷರ ಶ್ಲಾಘನೆ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2018, 20:15 IST
Last Updated 18 ನವೆಂಬರ್ 2018, 20:15 IST
ನುಡಿಸಿರಿಯ ಸಮಾರೋಪದಲ್ಲಿ ಸರ್ವಾಧ್ಯಕ್ಷೆ ಡಾ.ಮಲ್ಲಿಕಾ ಎಸ್‌.ಘಂಟಿ ಅವರನ್ನು ಸನ್ಮಾನಿಸಲಾಯಿತು. ಡಾ.ಷ.ಶೆಟ್ಟರ್‌, ಡಾ.ಚಂದ್ರಶೇಖರ ಕಂಬಾರ, ಡಾ.ಎಂ.ಮೋಹನ ಆಳ್ವ, ಕ್ಯಾಪ್ಟನ್‌ ಗಣೇಶ್‌ ಕಾರ್ಣಿಕ್‌ ಇದ್ದರು. ಪ್ರಜಾವಾಣಿ ಚಿತ್ರ
ನುಡಿಸಿರಿಯ ಸಮಾರೋಪದಲ್ಲಿ ಸರ್ವಾಧ್ಯಕ್ಷೆ ಡಾ.ಮಲ್ಲಿಕಾ ಎಸ್‌.ಘಂಟಿ ಅವರನ್ನು ಸನ್ಮಾನಿಸಲಾಯಿತು. ಡಾ.ಷ.ಶೆಟ್ಟರ್‌, ಡಾ.ಚಂದ್ರಶೇಖರ ಕಂಬಾರ, ಡಾ.ಎಂ.ಮೋಹನ ಆಳ್ವ, ಕ್ಯಾಪ್ಟನ್‌ ಗಣೇಶ್‌ ಕಾರ್ಣಿಕ್‌ ಇದ್ದರು. ಪ್ರಜಾವಾಣಿ ಚಿತ್ರ   

ಮೂಡುಬಿದಿರೆ: 'ಭಕ್ತರು ಮತ್ತು ಭಗವಂತನ ನಡುವೆ ರಾಜಕಾರಣಿಗಳು ಮಧ್ಯವರ್ತಿಯ ಕೆಲಸ ಮಾಡುತ್ತಿರುವುದರಿಂದಲೇ ಧಾರ್ಮಿಕ ಅಸಮಾನತೆ ಇನ್ನೂ ಉಳಿದಿದೆ. ಭಕ್ತರು ಮತ್ತು ಭಗವಂತನ ಸಂಬಂಧದ ನಡುವೆ ರಾಜಕಾರಣಿಗಳು ಗೋಡೆ ಕಟ್ಟುವುದನ್ನು ನಿಲ್ಲಿಸಬೇಕು' ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಮಲ್ಲಿಕಾ ಎಸ್.ಘಂಟಿ ಹೇಳಿದರು.

ಇಲ್ಲಿನ ವಿದ್ಯಾಗಿರಿಯಲ್ಲಿ ಭಾನುವಾರ ನಡೆದ ‘ಆಳ್ವಾಸ್ ನುಡಿಸಿರಿ 2018’ರ ಸಮಾರೋಪದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನದಿಂದ ಸಮಾಪನ ಭಾಷಣ ಮಾಡಿದ ಅವರು, ‘ರಾಜಕಾರಣಿಗಳಲ್ಲಿ ವೈಚಾರಿಕ ಪ್ರಜ್ಞೆ ಇಲ್ಲದಿರುವುದರಿಂದ ಭಾರತದಲ್ಲಿ ಮಹಿಳೆಯರು ಮತ್ತು ಕೆಲವು ವರ್ಗದ ಜನರ ದೇವಾಲಯ ಪ್ರವೇಶದ ವಿಚಾರ ಇಂದಿಗೂ ಚರ್ಚೆಯ ವಸ್ತುವಾಗಿ ಉಳಿದಿದೆ. ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ಎಲ್ಲ ವಯೋಮಾನದ ಮಹಿಳೆಯರಿಗೆ ಪ್ರವೇಶ ಅವಕಾಶ ಕಲ್ಪಿಸುವುದಕ್ಕೆ ವಿರೋಧ ವ್ಯಕ್ತವಾಗುತ್ತಿರುವುದೂ ಇದೇ ಕಾರಣಕ್ಕೆ' ಎಂದರು.

ಬಹುವರ್ಣದ ವಸ್ತ್ರ ಬೇಕು: ಮೂರು ದಿನಗಳ ಕಾಲ ನಡೆದ ಈ ಸಮ್ಮೇಳನ ಕರ್ನಾಟಕ ಮತ್ತು ಭಾರತದ ಬಹುರೂಪಿ ಪರಂಪರೆಗಳನ್ನು ತೆರೆದಿಟ್ಟಿತು. ಇಲ್ಲಿ ಬಹುವರ್ಣದ ವಸ್ತ್ರವೊಂದನ್ನು ಕಾಣಲು ಸಾಧ್ಯವಾಯಿತು. ಇಂತಹ ವಸ್ತ್ರವೇ ಈಗ ಕರ್ನಾಟಕ, ಭಾರತ ಮತ್ತು ಜಗತ್ತಿಗೆ ಬೇಕಿರುವುದು. ಜಗತ್ತು ಬಹುತ್ವವನ್ನು ಸದಾಕಾಲವೂ ಬಯಸುತ್ತದೆ ಎಂಬುದನ್ನು ಮತೀಯ ವಿಷ ಬೀಜ ಬಿತ್ತುವ ಸಾಹಿತಿಗಳು, ಕಲಾವಿದರು ಮತ್ತು ರಾಜಕಾರಣಿಗಳು ಅರ್ಥ ಮಾಡಿಕೊಳ್ಳಬೇಕು’ ಎಂದು ತಿಳಿಸಿದರು.

ADVERTISEMENT

ರಾಜಕಾರಣಿಗಳಹಾವಳಿಯಿಲ್ಲ

ಹಲವು ದಶಕಗಳಿಂದ ನಾನು ಅನೇಕ ಸಮ್ಮೇಳನ, ಸಮಾವೇಶಗಳಲ್ಲಿ ಪಾಲ್ಗೊಂಡಿದ್ದೇನೆ. ಹೆಚ್ಚಿನ ಕಡೆ ರಾಜಕಾರಣಿಗಳು, ಪೊಲೀಸರ ಹಾವಳಿಯಿಂದ ಅವಾಂತರ ಸೃಷ್ಟಿಯಾಗಿರುವುದು ಕಂಡಿದ್ದೇನೆ. ಇಲ್ಲಿ ಅಂತಹ ಹಾವಳಿ ಇರಲಿಲ್ಲ. ಆಳ್ವ ಅವರು ಒಂದು ಅಚ್ಚುಕಟ್ಟಾದ ಪ್ರೇಕ್ಷಕ ವರ್ಗವನ್ನು ಸಜ್ಜುಗೊಳಿಸಿರುವುದನ್ನು ಈ ಸಮ್ಮೇಳನ ನಿರೂಪಿಸಿತು ಎಂದು ಡಾ.ಮಲ್ಲಿಕಾ ಎಸ್. ಘಂಟಿ ಶ್ಲಾಘಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.