ಜಯಂತ್ ಟಿ.
ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನಡೆದ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದ ಮೃತದೇಹಗಳನ್ನು ಹೂತು ಹಾಕಲಾಗಿದೆ ಎಂದು ಆರೋಪಿಸಲಾದ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು (ಎಸ್‌ಐಟಿ) ಸಾಕ್ಷಿ ದೂರುದಾರನಿಗೆ ಆಶ್ರಯ ನೀಡಿದ್ದ ಜಯಂತ್ ಟಿ. ಹಾಗೂ ಆತನ ಹೇಳಿಕೆಯ ವಿಡಿಯೊ ಚಿತ್ರೀಕರಿಸಿದ್ದ ಯೂಟ್ಯೂಬರ್ ಅಭಿಷೇಕ್ ಎಂಬುವರನ್ನು ಗುರುವಾರ ವಿಚಾರಣೆಗೆ ಒಳಪಡಿಸಿತು.
ಸಾಕ್ಷಿ ದೂರುದಾರನು ಜಯಂತ್ ಟಿ. ವಾಸವಿದ್ದ ಬೆಂಗಳೂರಿನ ಪೀಣ್ಯದ ಬಾಡಿಗೆ ಮನೆಯಲ್ಲಿ ಕೆಲ ದಿನ ಉಳಿದುಕೊಂಡಿದ್ದ. ಎಸ್‌ಐಟಿ ಅಧಿಕಾರಿಗಳು ಸಾಕ್ಷಿ ದೂರುದಾರನನ್ನು ಈಚೆಗೆ ಆ ಮನೆಗೆ ಕರೆದೊಯ್ದು ಮಹಜರು ನಡೆಸಿದ್ದರು. ಆತನಿಗೆ ಆಶ್ರಯ ನೀಡಿದ ಕುರಿತು ಜಯಂತ್ ಟಿ. ಅವರನ್ನು ಬೆಳ್ತಂಗಡಿ ಕಚೇರಿಗೆ ಕರೆಸಿಕೊಂಡು ಹೇಳಿಕೆ ದಾಖಲಿಸಿಕೊಂಡರು. ಮಧ್ಯಾಹ್ನ 3 ಗಂಟೆ ಸುಮಾರಿಗೆ ಕಚೇರಿಗೆ ತೆರಳಿದ್ದ ಜಯಂತ್ ರಾತ್ರಿವರೆಗೂ ಹೊರಗೆ ಬಂದಿರಲಿಲ್ಲ.
‘ಯುನೈಟೆಡ್ ಮೀಡಿಯಾ ಯೂಟ್ಯೂಬ್’ ಚಾನೆಲ್‌ನ ಅಭಿಷೇಕ್ ಎಂಬುವರನ್ನು ಬುಧವಾರ ತಡ ರಾತ್ರಿವರೆಗೂ ವಿಚಾರಣೆ ನಡೆಸಿದ್ದ ಅಧಿಕಾರಿಗಳು ಗುರುವಾರ ಮತ್ತೆ ವಿಚಾರಣೆಗೆ ಕರೆದಿದ್ದಾರೆ. ಎಸ್‌ಐಟಿ ಕಚೇರಿಗೆ ತೆರಳಿದ್ದ ಆತ, ರಾತ್ರಿವರೆಗೂ ಹೊರಗೆ ಬಂದಿರಲಿಲ್ಲ. ಸಾಕ್ಷಿ ದೂರುದಾರ ಈ ಹಿಂದೆ ನೀಡಿದ್ದ ಸಂದರ್ಶನಗಳು, ಆತನ ಬಂಧನವಾದ ಬಳಿಕ ಕೆಲ ಯೂಟ್ಯೂಬ್ ವಾಹಿನಿಗಳಲ್ಲಿ ಪ್ರಸಾರವಾಗಿವೆ. ಆತ ಹೇಳಿಕೆ ನೀಡುವ ವಿಡಿಯೊವೊಂದನ್ನು ಅಭಿಷೇಕ್ ಚಿತ್ರೀಕರಿಸಿದ್ದರು ಎಂದು ಮೂಲಗಳು ತಿಳಿಸಿವೆ.
ಧರ್ಮಸ್ಥಳ ಗ್ರಾಮದ 10ಕ್ಕೂ ಅಧಿಕ ಮಂದಿ ಎಸ್‌ಐಟಿ ಕಚೇರಿಗೆ ತೆರಳಿ ಹೇಳಿಕೆ ದಾಖಲಿಸಿದರು. ಹೇಳಿಕೆ ನೀಡುವ ವೇಳೆ ಸಾಕ್ಷಿ ದೂರುದಾರ ಕೆಲವು ಸ್ಥಳೀಯರ ಹೆಸರುಗಳನ್ನು ಉಲ್ಲೇಖಿಸಿದ್ದ. ಅವರನ್ನೆಲ್ಲ ಕರೆಸಿ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.