
ಪ್ರಜಾವಾಣಿ ವಾರ್ತೆ
ಪುತ್ತೂರು (ದಕ್ಷಿಣ ಕನ್ನಡ): ‘ಧರ್ಮಸ್ಥಳ ಗ್ರಾಮದ ಬೆಳವಣಿಗೆ ಕುರಿತು ಸಾಕ್ಷಿ ದೂರುದಾರ ಚಿನ್ನಯ್ಯ ಆದಿಚುಂಚನಗಿರಿ ಮಠದ ಸ್ವಾಮೀಜಿ ಅವರಿಗೆ ಬಿಡಿಸಿ ಹೇಳಿದ್ದ’ ಎಂದು ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಅಧ್ಯಕ್ಷ ಮಹೇಶ ಶೆಟ್ಟಿ ತಿಮರೋಡಿ ಇಲ್ಲಿ ತಿಳಿಸಿದರು.
ತಮ್ಮ ವಿರುದ್ಧದ ಗಡಿಪಾರು ಆದೇಶ ಕುರಿತ ವಿಚಾರಣೆಗೆ ಇಲ್ಲಿಗೆ ಸೋಮವಾರ ಬಂದಿದ್ದ ಅವರು ಸುದ್ದಿಗಾರರ ಜೊತೆ ಮಾತನಾಡಿದರು. ‘ಸ್ವಾಮೀಜಿ ಅವರಿಗೆ ವಿವರ ತಿಳಿಸಿದಾಗ ಸಾಕ್ಷಿ ದೂರುದಾರನ ಜೊತೆಗೆ ಸೌಜನ್ಯಾ ಕುಟುಂಬದವರು ಹಾಗೂ ನಾನು ಇದ್ದೆ’ ಎಂದು ತಿಳಿಸಿದರು.
‘ನಾನು ಹೆಣ್ಣುಮಕ್ಕಳ ಪರ ಹೋರಾಟ ಮಾಡುತ್ತಿರುವವ. ನನ್ನ ಮೇಲೆ ಗಡೀಪಾರಿಗೆ ಸಂಬಂಧಿಸಿ ಸುಳ್ಳು ವರದಿ ತಯಾರಿಸಿದ್ದಾರೆ. ಕಾನೂನು ಹೋರಾಟ ಮಾಡುತ್ತೇವೆ. ದೇಶದ ಕಾನೂನಿನ ಹೊರತಾಗಿ ಯಾರ ಮೇಲೂ ನಂಬಿಕೆ ಇಲ್ಲ’ ಎಂದು ಹೇಳಿದರು.
ತಿಮರೋಡಿ ಹೇಳಿಕೆ ಕುರಿತು ಪ್ರತಿಕ್ರಿಯೆಗೆ ಸ್ವಾಮೀಜಿ ಅವರನ್ನು ಸಂಪರ್ಕಿಸಲಾಯಿತು. ಆದರೆ, ಅವರು ಪ್ರತಿಕ್ರಿಯೆಗೆ ಲಭ್ಯರಾಗಲಿಲ್ಲ.