ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ಅಪರಾಧ ಪ್ರಕರಣಗಳ ಮೃತದೇಹಗಳನ್ನು ಹೂತು ಹಾಕಲಾಗಿದೆ ಎಂದು ಆರೋಪಿಸಲಾದ ಪ್ರಕರಣದ ಸಾಕ್ಷಿ ದೂರುದಾರ ತೋರಿಸಿದ್ದ 13ನೇ ಜಾಗದಲ್ಲಿ ಅಗೆಯುವ ಮುನ್ನ ಗ್ರೌಂಡ್ ಪೆನೆಟ್ರೇಟಿಂಗ್ ರಾಡಾರ್ (ಜಿಪಿಆರ್) ಸಾಧನ ಬಳಸಿ ಮೃತದೇಹದ ಕುರುಹು ಆ ಸ್ಥಳದಲ್ಲಿದೆಯೇ ಎಂದು ಪರಿಶೀಲಿಸುತ್ತಿರುವುದು ಏಕೆ?
13ನೇ ಜಾಗದಲ್ಲಿ ಅನೇಕ ಜಾಗಗಳನ್ನು ಹೂತಿರುವುದಾಗಿ ಸಾಕ್ಷಿ ದೂರುದಾರ ಎಸ್‌ಐಟಿಗೆ ಮಾಹಿತಿ ನೀಡಿದ್ದಾರೆ. ಅದೇ ಜಾಗದಲ್ಲಿ ವಿದ್ಯುತ್ ಮಾರ್ಗ ಹಾದುಹೋಗಿದೆ. ಅಲ್ಲಿ ಮೂರು ವಿದ್ಯುತ್ ಕಂಬಗಳೂ ಇವೆ. ಆ ಜಾಗವು ಈ ಜಾಗದ ಸಮೀಪದಲ್ಲಿ ಕಿರು ಅಣೆಕಟ್ಟೆ ಇದೆ. ಹಾಗಾಗಿ ಅಲ್ಲಿ ಅಗೆಯುವ ಕಾರ್ಯ ಆರಂಭಿಸುವ ಮುನ್ನ ಎಸ್ಐಟಿ ಮುನ್ನೆಚ್ಚರಿಕೆ ವಹಿಸಿದೆ.
ಜಿಪಿಆರ್ ಬಳಸಿ ಶೋಧ ನಡೆಸಿದ ವೇಳೆ ಆ ಜಾಗದಲ್ಲಿ ಮೃತದೇಹದ ಅವಶೇಷಗಳಿರುವ ಕುರುಹು ಸಿಗದೇ ಹೋದರೆ ಆ ಜಾಗವನ್ನು ಅಗೆಯುವುದು ಅನುಮಾನ ಎನ್ನುತ್ತವೆ ಎಸ್‌ಐಟಿ ಮೂಲಗಳು.
‘ಜಿಪಿಆರ್ ಸಾಧನವನ್ನು ಸ್ಥಳಕ್ಕೆ ತರಿಸಿಕೊಂಡಿದ್ದೇವೆ. ಅದನ್ನು ಬಳಸಿ ಮೃತದೇಹಗಳನ್ನು ಹೂಳಲಾದ ಕುರುಹುಗಳು ಇವೆಯೇ ಎಂದು ಪರಿಶೀಲಿಸುತ್ತೇವೆ. ಅಲ್ಲಿ ಮೃತದೇಹಗಳ ಅವಶೇಷ ಇರುವುದು ಖಚಿತವಾದರೆ ಮಾತ್ರ ಅಗೆಯುತ್ತೇವೆ’ ಎಂದು ಎಸ್ಐಟಿ ಮೂಲಗಳು ತಿಳಿಸಿವೆ.
ಸಾಕ್ಷಿ ದೂರುದಾರ ತೋರಿಸಿದ್ದ ಜಾಗದಲ್ಲಿದ್ದ ಕಳೆಗಳನ್ನು ಹುಲ್ಲು ಕತ್ತರಿಸುವ ಯಂತ್ರದ ಮೂಲಕ ಕಾರ್ಮಿಕರು ಸೋಮವಾರ ಸ್ವಚ್ಛಗೊಳಿಸಿದರು. ಡ್ರೋನ್ ಮೂಲಕ ಆ ಜಾಗದ ಜಿಪಿಎಸ್ ಲೊಕೇಷನ್ ವಿವರಗಳನ್ನು ಕೊಳ್ಳಲಾಯಿತು. ಅಲ್ಲಿ ಜಿಪಿಆರ್ ಬಳಕೆಯ ಕಾರ್ಯಸಾಧ್ಯತೆಯನ್ನು ಪರಿಶೀಲಿಸಲಾಯಿತು.
ಸಾಕ್ಷಿ ದೂರುದಾರ ಮೃತದೇಹಗಳನ್ನು ಹೂತಿರುವುದಾಗಿ ಹೇಳಿ, ಧರ್ಮಸ್ಥಳ ಗ್ರಾಮದಲ್ಲಿ ಒಟ್ಟು 16 ಕಡೆ ಜಾಗಗಳನ್ನು ತೋರಿಸಿದ್ದಾನೆ. ಅವುಗಳಲ್ಲಿ 15 ಜಾಗಗಳ ಎಸ್‌ಐಟಿ ಶೋಧಕಾರ್ಯವನ್ನು ಈಗಾಗಲೇ ಪೂರ್ಣಗೊಳಿಸಿದೆ. ಇವುಗಳಲ್ಲಿ ಎರಡು ಕಡೆ ಮಾತ್ರ ಮೃತದೇಹಗಳ ಅವಶೇಷ ಸಿಕ್ಕಿದೆ. ಸಾಕ್ಷಿ ದೂರುದಾರ ಮೃತದೇಹಗಳನ್ನು ಹೂತಿರುವ ಇನ್ನಷ್ಟು ಜಾಗಗಳನ್ನು ತೋರಿಸಲು ಬಾಕಿ ಇದೆ. ಹಾಗಾಗಿ ಆತ ಇನ್ನು ತೋರಿಸಲಿರುವ ಜಾಗವನ್ನು ಅಗೆಯುವ ಮುನ್ನ ಜಿಪಿಆರ್ ಬಳಸುವ ಸಾಧ್ಯತೆಯೂ ಇದೆ.
‘ಸದ್ಯಕ್ಕೆ ಸಾಕ್ಷಿ ದೂರುದಾರ ತೋರಿಸಿದ 13ನೇ ಜಾಗದಲ್ಲಿ ಮಾತ್ರ ಜಿಪಿಆರ್ ಸಾಧನ ಬಳಸಿ ಶೋಧ ನಡೆಸುತ್ತೇವೆ’ ಆತ ಮುಂದೆ ತೋರಿಸಲಿರುವ ಜಾಗಗಳಲ್ಲೂ ಜಿಪಿಆರ್ ಸಾಧನ ಬಳಸುವ ಬಗ್ಗೆ ಇನ್ನೂ ನಿರ್ಧರಿಸಿಲ್ಲ. ಈಗಾಗಲೇ ಶೋಧ ಕಾರ್ಯ ಪೂರ್ಣಗೊಂಡಿರುವ ಕಡೆ ಮತ್ತೆ ಜಿಪಿಆರ್ ಬಳಸುವ ಪ್ರಮೇಯ ಎದುರಾಗದು ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.