ಮಂಗಳೂರು: ಸೌಜನ್ಯಾ ಹತ್ಯೆ ಪ್ರಕರಣದ ವಿಷಯವನ್ನು ಮುಂದಿಟ್ಟು, ಧಾರ್ಮಿಕ ಶ್ರದ್ಧಾಕೇಂದ್ರವಾಗಿರುವ ಧರ್ಮಸ್ಥಳದ ಬಗ್ಗೆ ಇರುವ ಜನರ ಭಾವನೆಯನ್ನು ಘಾಸಿಗೊಳಿಸುವ ಪ್ರಯತ್ನವನ್ನು ಸಹಿಸಲು ಸಾಧ್ಯವಿಲ್ಲ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದರು.
ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸೌಜನ್ಯಾ ಹತ್ಯೆ ಪ್ರಕರಣದ ಮರು ತನಿಖೆ ನಡೆಸುವಂತೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ವಿಧಾನಸಭೆ ಅಧಿವೇಶನದಲ್ಲೇ ಪ್ರಸ್ತಾಪ ಮಾಡಿದ್ದಾರೆ. ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ಪ್ರಕರಣಗಳಿಗೆ ಸಂಬಂಧಿಸಿ ಆರೋಪಗಳ ತನಿಖೆಗೆ ವಿಶೇಷ ತನಿಖಾದಳ ರಚನೆಯಾದಾಗ ನಾವೇ ಅದನ್ನು ಮೊದಲು ಸ್ವಾಗತಿಸಿದ್ದೇವೆ. ಎಲ್ಲ ಆರೋಪಗಳ ಬಗ್ಗೆ ಕೂಲಂಕಷ ತನಿಖೆ ನಡೆಸು, ಸತ್ಯ, ಅಸತ್ಯ ಹೊರಗೆ ಬರಲಿ’ ಎಂದರು.
ಆದರೆ, ಸೌಜನ್ಯಾ ಪ್ರಕರಣವನ್ನು ತಳಕು ಹಾಕಿ ಶ್ರದ್ಧಾಕೇಂದ್ರವನ್ನು ಅಪಮಾನ ಮಾಡುವುದು, ಜನರ ಭಾವನೆ ಘಾಸಿಗೊಳಿಸುವುದನ್ನು ಬಿಜೆಪಿ ಸಹಿಸುವುದಿಲ್ಲ. ಮೊತ್ತಮೊದಲಿಗೆ ನಾನು ಮತ್ತು ಬೆಳ್ತಂಗಡಿ ಶಾಸಕರು ಧರ್ಮಸ್ಥಳಕ್ಕೆ ಹೋಗಿ ಶ್ರದ್ಧಾಕೇಂದ್ರದ ಜೊತೆ ನಾವು ಇದ್ದೇವೆ ಎಂಬುದನ್ನು ತೋರಿಸಿಕೊಟ್ಟಿದ್ದೇವೆ. ಬಿಜೆಪಿ ಪ್ರಮುಖರೂ ಭೇಟಿ ನೀಡಿದ್ದಾರೆ. ತನಿಖೆ ಹಂತದಲ್ಲಿ ಮಧ್ಯ ಪ್ರವೇಶಿಸುವ ಅಥವಾ ತನಿಖೆ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವುದು ಸರಿಯಲ್ಲ ಎಂದು ಹೇಳಿದರು.
‘ಸಂಸತ್ ಅಧಿವೇಶನದಲ್ಲಿ ಈ ಭಾಗದ ವಿಷಯಕ್ಕೆ ಸಂಬಂಧಿಸಿ 34 ಪ್ರಶ್ನೆಗಳನ್ನು ಎತ್ತಲು ಸಾಧ್ಯವಾಗಿದೆ. ಮಂಗಳೂರಿನಲ್ಲಿರುವ ಕುದುರೆಮುಖ ಕಬ್ಬಿಣದ ಅದಿರು ಕಂಪನಿಯು (ಕೆಐಒಸಿಎಲ್) ಕಬ್ಬಿಣದ ಅದಿರು ಕೊರತೆಯಿಂದ ಸಮಸ್ಯೆ ಎದುರಿಸುತ್ತಿದೆ. ಅದಿರು ಗಣಿಗಾರಿಕೆಗೆ ರಾಜ್ಯ ಸರ್ಕಾರಕ್ಕೆ ಹಣ ಸಂದಾಯ ಮಾಡಿದ್ದರೂ, ರಾಜಕೀಯ ಕಾರಣಕ್ಕೆ ರಾಜ್ಯ ಸರ್ಕಾರ ಇದಕ್ಕೆ ಸಹಕಾರ ನೀಡುತ್ತಿಲ್ಲ ಎಂದರು.
ಮಂಗಳೂರಿನಲ್ಲಿ ಡೇಟಾ ಸೆಂಟರ್, ಕೇಬಲ್ ಫೈನಿಂಗ್ ಸೆಷನ್ ವ್ಯವಸ್ಥೆ ಮಾಡಿದರೆ, ಇಲ್ಲಿನ ಐಟಿ ಕ್ಷೇತ್ರ ಬೆಳವಣಿಗೆಗೆ ಅನುಕೂಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಯನ್ನು ಭೇಟಿ ಮಾಡಿದ್ದು, ಪೂರಕ ಪ್ರತಿಕ್ರಿಯೆ ದೊರೆತಿದೆ. ಅಡಿಕೆ ಕ್ಯಾನ್ಸರ್ ಕಾರಕ ಅಲ್ಲ ಎಂಬುದನ್ನು ಸಾಬೀತುಪಡಿಸಲು ಸಮಯ ಮಿತಿಯಲ್ಲಿ ಅಧ್ಯಯನ ನಡೆಸಿ, ವರದಿ ಸಲ್ಲಿಸಬೇಕು ಎಂದು ಕೇಂದ್ರ ಸಚಿವರನ್ನು ಭೇಟಿ ಮಾಡಿ ವಿನಂತಿಸಲಾಗಿದೆ. ಹಳದಿ ರೋಗ ಬಾಧಿತ ತೋಟಗಳಲ್ಲಿ ಪರ್ಯಾಯ ಬೆಳೆಯ ಬಗ್ಗೆಯೂ ಪ್ರಸ್ತಾಪಿಸಲಾಗಿದೆ. ವಿದೇಶಿ ಅಡಿಕೆ ಅಕ್ರಮ ನುಸುಳುವಿಕೆ ತಡೆಗೆ ಕಠಿಣ ಕ್ರಮಕ್ಕೆ ವಿನಂತಿಸಲಾಗಿದೆ ಎಂದು ಹೇಳಿದರು.
ಬಿಜೆಪಿ ಪ್ರಮುಖರಾದ ಪೂಜಾ ಪೈ, ಸತೀಶ್ ಪ್ರಭು, ನಂದನ್ ಮಲ್ಯ, ಸಂಜಯ್ ಪ್ರಭು, ಮನೋಹರ ಶೆಟ್ಟಿ ಕದ್ರಿ, ರವೀಂದ್ರ ಉಳದೊಟ್ಟು, ವಸಂತ ಪೂಜಾರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.