ADVERTISEMENT

ಧರ್ಮಸ್ಥಳ | ಧರ್ಮಸಂರಕ್ಷಣಾ ಸಮಾವೇಶ: ಧರ್ಮಾಧಿಕಾರಿ ಪರ ಜೈನ ಭಟ್ಟಾರಕರ ಒಗ್ಗಟ್ಟು

ಧರ್ಮಸ್ಥಳದಲ್ಲಿ ಧರ್ಮಸಂರಕ್ಷಣಾ ಸಮಾವೇಶ * ಜೈನರ ದನಿ ವಿಧಾನಸೌಧಕ್ಕೆ ಮುಟ್ಟಿಸಲು ಪಣ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2025, 18:40 IST
Last Updated 29 ಆಗಸ್ಟ್ 2025, 18:40 IST
ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ಧರ್ಮಸಂರಕ್ಷಣಾ ಸಮಾವೇಶದಲ್ಲಿ ಭಟ್ಟಾರಕರು ಗೌರವಿಸಿದರು
ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ಧರ್ಮಸಂರಕ್ಷಣಾ ಸಮಾವೇಶದಲ್ಲಿ ಭಟ್ಟಾರಕರು ಗೌರವಿಸಿದರು   

ಉಜಿರೆ (ದಕ್ಷಿಣ ಕನ್ನಡ): ’ಧರ್ಮಸ್ಥಳ ಕ್ಷೇತ್ರ ಮತ್ತು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಕುಟುಂಬದ ಬಗ್ಗೆ ಅವಹೇಳನ ಮುಂದುವರಿದರೆ ಜೈನರ ಧ್ವನಿಯು ವಿಧಾನಸೌಧದ ಮುಂದೆ ಮೊಳಗಲಿದೆ’ ಎಂದು ಶುಕ್ರವಾರ ಇಲ್ಲಿ ನಡೆದ ಧರ್ಮಸಂರಕ್ಷಣಾ ಸಮಾವೇಶವು ಎಚ್ಚರಿಕೆ ನೀಡಿದೆ.

ಧರ್ಮಸ್ಥಳ ಮುಖ್ಯದ್ವಾರದ ಗೋಪುರದ ಬಳಿ ನಡೆದ ‘ಕರ್ನಾಟಕ, ತಮಿಳುನಾಡು ಮತ್ತು ಮಹಾರಾಷ್ಟ್ರದ ಜೈನ ಕ್ಷೇತ್ರಗಳ ಭಟ್ಟಾರಕರು, ಶ್ರಾವಕ–ಶ್ರಾವಕಿಯರು ಮತ್ತು ಸ್ಥಳೀಯರ ಸಮಾವೇಶ’ದಲ್ಲಿ ವೀರೇಂದ್ರ ಹೆಗ್ಗಡೆಯವರನ್ನು ಸನ್ಮಾನಿಸಿ ‘ನಿಮ್ಮೊಂದಿಗೆ ನಾವಿದ್ದೇವೆ’ ಎಂಬ ಭರವಸೆ ನೀಡಲಾಯಿತು.

ಪ್ರಾಸ್ತಾವಿಕವಾಗಿ ಮಾತನಾಡಿದ ಚೆನ್ನೈನ ಅರಿಹಂತಗಿರಿ ಜೈನಮಠದ ಧವಳಕೀರ್ತಿ ಭಟ್ಟಾರಕ ಸ್ವಾಮೀಜಿ, ‘ಧರ್ಮಸ್ಥಳದ ಹೆಸರಿಗೆ ಚ್ಯುತಿಯುಂಟುಮಾಡಲು ಹೊಟ್ಟೆಕಿಚ್ಚಿನ ಅಧರ್ಮಿಗಳು ಕುತಂತ್ರ ಮಾಡಿದ್ದಾರೆ. ಈ ಅನ್ಯಾಯವನ್ನು ಸರ್ಕಾರ ಹಿಮ್ಮೆಟ್ಟಿಸದೇ ಇದ್ದರೆ ವಿಧಾನಸೌಧಕ್ಕೆ ಹೋಗುವುದು ಖಚಿತ’ ಎಂದರು.

ADVERTISEMENT

‘ಧರ್ಮಸ್ಥಳಕ್ಕೆ ಸಂಬಂಧಿಸಿದ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಲಾಗುತ್ತಿದೆ. ಇದು ಶಮನ ಆಗದೇ ಇದ್ದರೆ ಜೈನಧರ್ಮೀಯರಿಗೆ ಶೀಘ್ರದಲ್ಲಿಯೇ ಕರೆ ನೀಡಲಾಗುವುದು. ಅದಕ್ಕೆ ಓಗೊಟ್ಟು ಎಲ್ಲರೂ ವಿಧಾನಸೌಧದ ಬಳಿ ಬರಬೇಕು’ ಎಂದು ಕರೆ ನೀಡಿದರು.

ಹೊಂಬುಜ ಜೈನಮಠದ ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯರು ಅವರು, ‘ಧರ್ಮಸ್ಥಳದ ಮೇಲೆ ಮಾಡಿರುವ ಆರೋಪಗಳೆಲ್ಲ ಇಲ್ಲಿ ತೋಡಿರುವ ಗುಂಡಿಗಳಲ್ಲಿ ಮುಚ್ಚಿಹೋಗಿದೆ. ಆಪಕೀರ್ತಿ ತರಲು ಬಯಸುವವರು ತೋಡುವ ಗುಂಡಿಗಳಲ್ಲಿ ಮತ್ತೆ ಯಾರೂ ಬೀಳಬಾರದು. ಅಲ್ಲಿ ಗಿಡಗಳನ್ನು ನೆಟ್ಟು ಹಣ್ಣುಗಳನ್ನು ಬೆಳೆದು ತಿಂದು ಒಳ್ಳೆಯವರಾಗಲು ಪ್ರಯತ್ನಿಸಿ’ ಎಂದು ಸಲಹೆ ಮಾಡಿದರು. 

ಸಾಹಿತಿ ಹಂಪ ನಾಗರಾಜಯ್ಯ ಅವರು, ‘ಧರ್ಮಸ್ಥಳಕ್ಕೆ ಈಗ ಆಗಿರುವ ನೋವು ಇಡೀ ಸಮಾಜದ ನೋವು. ನಾವೆಲ್ಲ ಈ ಕ್ಷೇತ್ರದ ಜೊತೆ ಇರುವುದಾಗಿ ತಿಳಿಸಲು ಬಂದಿದ್ದೇವೆ. ಅಗಾಧ ಸಂಯಮದ ವೀರೇಂದ್ರ ಹೆಗ್ಗಡೆಯವರು ಭಗವದ್ಗೀತೆಯಲ್ಲಿ ಹೇಳಿರುವ ಸ್ಥಿತಪ್ರಜ್ಞರ ಲಕ್ಷಣಗಳ ಮನುಷ್ಯ ರೂಪ. ಮೌನಕ್ಕೆ ಮಹಾಶಕ್ತಿ ಇದೆ ಎಂದು  ಪ್ರಕರಣದಲ್ಲಿ ತೋರಿಸಿಕೊಟ್ಟಿದ್ದಾರೆ. ಆ ಮೌನಕ್ಕೆ ಈಗ ಕರ್ನಾಟಕವೇ ಧನಿಯಾಗಿದೆ’ ಎಂದರು.

ವರೂರು ಜೈನಮಠದ ಧರ್ಮಸೇನ ಭಟ್ಟಾರಕ ಪಟ್ಟಾಚಾರ್ಯ, ಆರತಿಪುರದ ಸಿದ್ಧಾಂತಕೀರ್ತಿ ಭಟ್ಟಾರಕ ಪಟ್ಟಾಚಾರ್ಯ, ಕಾರ್ಕಳದ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯ, ಸೋಂದ ಮಠದ ಭಟ್ಟಾಕಲಂಕ ಭಟ್ಟಾರಕ ಪಟ್ಟಾಚಾರ್ಯ, ನರಸಿಂಹರಾಜಪುರ ಜೈನಮಠ ಲಕ್ಷ್ಮಿಸೇನ ಭಟ್ಟಾರಕ ಪಟ್ಟಾಚಾರ್ಯ, ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಹೇಮಾವತಿ ಹೆಗ್ಗಡೆ, ಡಿ.ಸುರೇಂದ್ರ ಕುಮಾರ್, ಡಿ.ಹರ್ಷೇಂದ್ರ ಕುಮಾರ್‌ ಅವರು ಪಾಲ್ಗೊಂಡಿದ್ದರು.

ಜಾತಿ ಧರ್ಮದ ಬೇಧವಿಲ್ಲದೆ ಸೇವೆ ಮಾಡುತ್ತಿರುವ ವೀರೇಂದ್ರ ಹೆಗ್ಗಡೆ ಅವರ ಮನಸ್ಸು ನೋಯಿಸಿದವರ ಸಂಸಾರ ನಾಶ ಆಗಲಿದೆ
ಧವಳಕೀರ್ತಿ ಭಟ್ಟಾರಕ ಸ್ವಾಮೀಜಿ ಅರಿಹಂತಗಿರಿ ಜೈನಮಠ ಚೆನ್ನೈ
ದುಃಖ ದುಮ್ಮಾನ ಮರೆಯಲು ಬರುವ ಪವಿತ್ರವಾದ ಜಾಗ ಧರ್ಮಸ್ಥಳವನ್ನು ಅಗೆದಾಗಲೇ ಕುತಂತ್ರಿಗಳಿಗೆ ಕೇಡುಗಾಲ ಶುರುವಾಗಿದೆ
ಭುವನಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ಕನಕಗಿರಿ
ವೀರೇಂದ್ರ ಹೆಗ್ಗಡೆ ಅವರು ದೊಡ್ಡ ಪರೀಕ್ಷೆ ಎದುರಿಸಿ ಅದರಲ್ಲಿ ರ‍್ಯಾಂಕ್‌ನೊಂದಿಗೆ ತೇರ್ಗಡೆ ಹೊಂದಿದ್ದಾರೆ. ಇನ್ನು ಆತಂಕಪಡುವಂಥಾದ್ದು ಏನೂ ಇಲ್ಲ
ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಶ್ರವಣಬೆಳಗೊಳ ಜೈನಮಠ

‘ಇನ್ನಷ್ಟು ಧೈರ್ಯ ಬಂದಿದೆ...’

‘ಸತ್ಯ ಇರುವುದು ಒಂದೇ. ಅದಕ್ಕೆ ಒಂದೇ ಮುಖವಿದೆ. ಆದ್ದರಿಂದ ಎಲ್ಲವನ್ನು ಸ್ವಾಮಿಯ (ಮಂಜುನಾಥ) ಮೇಲೆ ಬಿಟ್ಟಿದ್ದೇನೆ. ಸ್ವಾಮೀಜಿಗಳು ಬಂದು ಬೆಂಬಲ ಸೂಚಿಸಿದ್ದರಿಂದ ಇನ್ನಷ್ಟು ಧೈರ್ಯ ಬಂದಿದೆ’ ಎಂದು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹೇಳಿದರು.  ‘ಧರ್ಮಸ್ಥಳಕ್ಕೆ ಜನರು ಸ್ವಾಮೀಜಿಗಳ ಬೆಂಬಲವಿದೆ. ಸಂಜ್ಞೆ ಮೂಲಕವೇ ಸಾವಿರಾರು ಜನರ ಸೇರಿಸುವ ತಾಕತ್ತು ತಮಿಳುನಾಡಿನ ಧವಳಕೀರ್ತಿ ಭಟ್ಟಾರಕ ಸ್ವಾಮೀಜಿ ಅಂಥವರಿಗೆ ಇದೆ. ಧರ್ಮಸ್ಥಳದ ಅವಹೇಳನದ ವಿರುದ್ಧ ಹೋರಾಡುವುದಾಗಿ ಅನೇಕ ಮಹಿಳೆಯರು ಹೇಳಿದ್ದಾರೆ. ಆದರೆ ಈಗ ಯಾರೂ ಸಂಯಮ ಕಳೆದುಕೊಳ್ಳಬಾರದು’ ಎಂದು ಹೇಳಿದರು. ‘ದಶಲಕ್ಷಣದಲ್ಲಿ ಹೇಳಿರುವ ಸಂಯಮವನ್ನು ಎಲ್ಲರೂ ಪಾಲಿಸಬೇಕು’ ಎಂದು ಸಲಹೆ ಮಾಡಿದರು.

ಬಿಜೆಪಿ ವಿರೋಧ ಏಕೆ: ಲಾಡ್‌ ಪ್ರಶ್ನೆ

‘ಧರ್ಮಸ್ಥಳ ಪ್ರಕರಣದ ತನಿಖೆಯನ್ನು ಎಸ್‌ಐಟಿಗೆ ಒಪ್ಪಿಸಿದ್ದನ್ನು ಬಿಜೆಪಿ ಆರಂಭದಲ್ಲಿ ಸ್ವಾಗತಿಸಿತ್ತು. ಈಗ ವಿರೋಧಿಸುತ್ತಿರುವುದು ಏಕೆ’ ಎಂದು ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಪ್ರಶ್ನಿಸಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಬಿಜೆಪಿಯವರು ರಾಜಕೀಯ ಲಾಭಕ್ಕಾಗಿ ಹೋರಾಡುತ್ತಿದ್ದಾರೆ. ಇದು, ಅಂತರರಾಷ್ಟ್ರೀಯ ವಿಷಯವಾಗಿದೆ. ತನಿಖೆಯಿಂದ ಸತ್ಯ ಹೊರಬರಲಿದೆ’ ಎಂದರು.

‘ಜಡ್ಜ್‌ ಆಗುವುದು ಬೇಡ’

‘ಎಸ್ಐಟಿ ತನಿಖಾ ವರದಿ ಬರುವವರೆಗೆ ಯಾರೂ ನ್ಯಾಯಾಧೀಶರಾಗು

ವುದು ಬೇಡ. ಶಿಕ್ಷಣ ಸಂಸ್ಥೆಯನ್ನು ಕಟ್ಟುವುದು ಕಷ್ಟ. ಕಪ್ಪು ಚುಕ್ಕೆ ಇಡುವುದು ಸುಲಭ’ ಎಂದು ಸ್ಪೀಕರ್ ಯು.ಟಿ.ಖಾದರ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.