ADVERTISEMENT

Dharmasthala Laksha Deepotsava: ದೀಪದ ಬೆಳಕಿನಲ್ಲಿ ಕಂಗೊಳಿಸಿದ ಧರ್ಮಸ್ಥಳ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2024, 1:10 IST
Last Updated 1 ಡಿಸೆಂಬರ್ 2024, 1:10 IST
   

ಧರ್ಮಸ್ಥಳ (ದಕ್ಷಿಣ ಕನ್ನಡ): ಸಾಲು ಸಾಲು ದೀಪಗಳ ಬೆಳಕಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳವು ಕಂಗೊಳಿಸುತ್ತಿದ್ದಂತೆಯೇ ಶ್ರೀ ಮಂಜುನಾಥ ಸ್ವಾಮಿಯ ಭಕ್ತರು ಈ ನಯನ ಮನೋಹರ ದೃಶ್ಯ ಕಣ್ತುಂಬಿಕೊಂಡರು.

ಶನಿವಾರ ರಾತ್ರಿ ನೆರವೇರಿದ ಲಕ್ಷದೀಪೋತ್ಸವದಲ್ಲಿ, ನಾಡಿನ ವಿವಿಧೆಡೆ ಯಿಂದ ಬಂದಿರುವ ಭಕ್ತರು ದೇವಸ್ಥಾನದ ಎದುರಿನ ಬೀದಿಯಲ್ಲಿ ಹಣತೆ ಗಳನ್ನು ಹೊತ್ತಿಸಿ, ಪೂಜೆ ಸಲ್ಲಿಸಿದರು.

ಈ ಜಾತ್ರೆಯ ಅಂಗವಾಗಿ ಕಲೆ, ಸಾಹಿತ್ಯ, ಸಾಂಸ್ಕೃತಿಕ ಲೋಕಗಳು ಕ್ಷೇತ್ರದಲ್ಲಿ ಮೇಳೈಸಿದ್ದವು. ಬಗೆ ಬಗೆಯ ಕಲೆ ಹಾಗೂ ಸಾಂಸ್ಕೃತಿಕ ಪ್ರದರ್ಶನಗಳು ಭಕ್ತರು ಭಾವ ಪರವಶವಾಗುವಂತೆ ಮಾಡಿದವು.

ADVERTISEMENT

ಕಲಾವೈಭವ: ನಾಡಿನ ಬೇರೆ ಬೇರೆ ಊರುಗಳಿಂದ ಬಂದಿದ್ದ ಡೊಳ್ಳು ಕುಣಿತ, ಕೋಲಾಟ, ಕೊಂಬು, ಕಹಳೆ, ಜಾಗಟೆ, ಶಂಖ, ಸಣ್ಣಾಟ, ವೀರಗಾಸೆ ಮೊದಲಾದ 4,330 ಜಾನಪದ ಕಲಾವಿದರು 1,002 ತಂಡಗಳಲ್ಲಿ ಅಹೋರಾತ್ರಿ ಕಲಾ ಸೇವೆ ನೀಡಿದರು. ವಿವಿಧ ಕಲಾ ತಂಡಗಳು ಧರ್ಮಸ್ಥಳದ ಬೀದಿ ಬೀದಿಗಳಲ್ಲಿ ಪ್ರದರ್ಶನ ನೀಡುತ್ತಿದ್ದಂತೆಯೇ ಮೋಹಕ ಕಲಾ ಲೋಕವೇ ಇಲ್ಲಿ ಮೈದಳೆದಿತ್ತು.

ಭಕ್ತರಿಂದ ಅನ್ನದಾಸೋಹ: ಧರ್ಮಸ್ಥಳ ದಲ್ಲಿ ಲಕ್ಷ ದೀಪೋತ್ಸವದಂದು ಕ್ಷೇತ್ರದ ವತಿಯಿಂದ ರಾತ್ರಿ ಅನ್ನದಾಸೋಹ ಇರುವುದಿಲ್ಲ. ಬೇರೆ ಬೇರೆ ಊರುಗಳಿಂದ ಬಂದ ಭಕ್ತರೇ ಬಗೆ ಬಗೆಯ ತಿಂಡಿ ತಿನಿಸುಗಳನ್ನು ಕ್ಷೇತ್ರದಲ್ಲಿ ತಯಾರಿಸಿ ಭಕ್ತರಿಗೆ ಉಚಿತವಾಗಿ ಕೊಡುವುದು ಇಲ್ಲಿ ವಾಡಿಕೆ.

ಸಂಜೆ 4 ರಿಂದ ಆರಂಭವಾದ ಈ ದಾಸೋಹದಲ್ಲಿ ಸಾವಿರಾರು ಸ್ವಯಂ ಸೇವಕರು ಸಮರ್ಪಣಾ ಭಾವದಿಂದ ತೊಡಗಿಸಿಕೊಂಡರು.‌ ಅನ್ನ ಸಾಂಬಾರ್, ವಾಂಗಿ ಬಾತ್, ಟೊಮೆಟೊ ಬಾತ್, ರಾಗಿಮುದ್ದೆ, ರುಮಾಲ್‌ ರೋಟಿ, ಚಪಾತಿ, ಒಬ್ಬಟ್ಟು, ಪಾಯಸ ಮೊದಲಾದ ಸವಿಯೂಟ ಉಣಬಡಿಸಿದರು.

ಸಾಹಿತ್ಯ ಸಮ್ಮೇಳನ: ಇಲ್ಲಿನ ಅಮೃತ ವರ್ಷಿಣಿ‌ ಸಭಾಂಗಣದಲ್ಲಿ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ 92 ನೇ ಧರ್ಮಸ್ಥಳ ಸಾಹಿತ್ಯ ಸಮ್ಮೇಳನ ನಡೆಯಿತು. ವಿದ್ವಾಂಸ ಶತಾವಧಾನಿ ಆರ್. ಗಣೇಶ್ ಉದ್ಘಾಟಿಸಿದರು. ವಿದ್ವಾಂಸ ಪಾದೆಕಲ್ಲು ವಿಷ್ಣು ಭಟ್ಟ ಅಧ್ಯಕ್ಷತೆ ವಹಿಸಿದ್ದರು. ಕನ್ನಡದ ನಿವೃತ್ತ ಪ್ರಾಧ್ಯಾಪಕಿ ಬೆಂಗಳೂರಿನ ಪ್ರಮೀಳಾ ಮಾಧವ, ಮೈಸೂರಿನ ಬಿ.ವಿ.ವಸಂತಕುಮಾರ್, ಪ್ರೊ.ಮೊರಬದ ಮಲ್ಲಿಕಾರ್ಜುನ ಉಪನ್ಯಾಸ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.