ADVERTISEMENT

ಧರ್ಮಸ್ಥಳ: ಲಕ್ಷದೀಪೋತ್ಸವ ಸಂಭ್ರಮ

ಸರ್ವಧರ್ಮ ಸಮ್ಮೇಳನ: ರಾಜ್ಯಪಾಲ ಥಾವರಚಂದ್ ಗೆಹಲೋತ್ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2021, 15:38 IST
Last Updated 30 ನವೆಂಬರ್ 2021, 15:38 IST
ಲಕ್ಷದೀಪೊತ್ಸವದ ಅಂಗವಾಗಿ ವಿದ್ಯುತ್‌ ದೀಪಾಲಂಕಾರದಲ್ಲಿ ಕಂಗೊಳಿಸುತ್ತಿರುವ ಧರ್ಮಸ್ಥಳ ಕ್ಷೇತ್ರ
ಲಕ್ಷದೀಪೊತ್ಸವದ ಅಂಗವಾಗಿ ವಿದ್ಯುತ್‌ ದೀಪಾಲಂಕಾರದಲ್ಲಿ ಕಂಗೊಳಿಸುತ್ತಿರುವ ಧರ್ಮಸ್ಥಳ ಕ್ಷೇತ್ರ   

ಉಜಿರೆ: ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವದ ಅಂಗವಾಗಿ ಡಿ.2ರಂದು ಸಂಜೆ 5 ಗಂಟೆಗೆ ಅಮೃತವರ್ಷಿಣಿ ಸಭಾ ಭವನದಲ್ಲಿ ಸರ್ವಧರ್ಮ ಸಮ್ಮೇಳನದ 89ನೇ ಅಧಿವೇಶನ ನಡೆಯಲಿದ್ದು, ರಾಜ್ಯಪಾಲ ಥಾವರಚಂದ್ ಗೆಹಲೋತ್ ಕಾರ್ಯಕ್ರಮ ಉದ್ಘಾಟಿಸುವರು.

ಬೆಂಗಳೂರಿನ ಎಸ್. ವ್ಯಾಸ ಯೋಗ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ರಾಮಚಂದ್ರ ಭಟ್ ಅಧ್ಯಕ್ಷತೆ ವಹಿಸುವರು.

ಸಾಗರದ ಡಾ. ಸರ್ಫ್ರಾಜ್ ಚಂದ್ರಗುತ್ತಿ, ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕಿ ಡಾ. ಎಂ.ಎಸ್. ಪದ್ಮಾ ಮತ್ತು ಶಿವಮೊಗ್ಗದ ಫಾ. ವೀರೇಶ್ ಮೊರಾಸ್ ಅವರು ಧಾರ್ಮಿಕ ಉಪನ್ಯಾಸ ನೀಡುವರು.

ADVERTISEMENT

ಡಿ.3ರಂದು ನಡೆಯಲಿರುವ ಸಾಹಿತ್ಯ ಸಮ್ಮೇಳನವನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಉದ್ಘಾಟಿಸುವರು. ಕರ್ನಾಟಕ ಸಂಸ್ಕೃತ ವಿ.ವಿ ವಿಶ್ರಾಂತ ಕುಲಪತಿ ಡಾ. ಮಲ್ಲೇಪುರಂ ಜಿ. ವೆಂಕಟೇಶ್ ಅಧ್ಯಕ್ಷತೆ ವಹಿಸುವರು.

ಭಕ್ತರಿಂದ ವೈವಿಧ್ಯಮಯ ಸೇವೆ: ಲಕ್ಷದೀಪೋತ್ಸವ ಸಂದರ್ಭದಲ್ಲಿ ಸಾವಿರಾರು ಭಕ್ತರು ಪಾದಯಾತ್ರೆಯಲ್ಲಿ ಧರ್ಮಸ್ಥಳಕ್ಕೆ ಬರುತ್ತಾರೆ. ಹಲವು ಮಂದಿ ಸೈಕಲ್ ಹಾಗೂ ದ್ವಿಚಕ್ರ ವಾಹನಗಳಲ್ಲಿ ಬರುತ್ತಾರೆ. ಭಕ್ತರು ತಾವು ತಂದಿರುವ ತರಕಾರಿ, ಹೂವು, ಹಣ್ಣು-ಹಂಪಲು, ಅಕ್ಕಿ, ರಾಗಿ, ಜೋಳ ಹಾಗೂ ಕೃಷಿ ಉತ್ಪನ್ನಗಳನ್ನು ಕಾಣಿಕೆಯಾಗಿ ಅರ್ಪಿಸುತ್ತಾರೆ.

ಲಕ್ಷದೀಪೋತ್ಸವಕ್ಕಾಗಿ ದೇವಸ್ಥಾನ ಬೀಡು, ವಸತಿ ಛತ್ರಗಳು ಹಾಗೂ ಇತರ ಕಟ್ಟಡಗಳನ್ನು ಸುಣ್ಣ - ಬಣ್ಣದಿಂದ ಅಂದಗೊಳಿಸಲಾಗಿದೆ. ವಿದ್ಯುತ್‌ ದೀಪಾಲಂಕಾರಲದಲ್ಲಿ ಧರ್ಮಸ್ಥಳದ ಕಟ್ಟಡಗಳು ಕಣ್ಮನ ಸೆಳೆಯುತ್ತಿವೆ. ಭಕ್ತರು ನೇತ್ರಾವತಿ ನದಿಯಲ್ಲಿ ಮಿಂದು ಬಳಿಕ, ನಡೆದುಕೊಂಡು ಬಂದು ದೇವರ ದರ್ಶನ ಪಡೆಯುತ್ತಾರೆ.

ವಿಶಿಷ್ಟ ಸಂಪ್ರದಾಯ: ಸರ್ವಧರ್ಮ ಮತ್ತು ಸಾಹಿತ್ಯ ಸಮ್ಮೇಳನದಲ್ಲಿ ಧರ್ಮಾಧಿಕಾರಿ ಹೆಗ್ಗಡೆ ಅವರು ಸ್ವಾಗತ ಭಾಷಣ ಮಾಡುವುದು ಸಂಪ್ರದಾಯ. ಉದ್ಘಾಟಕರು, ಅಧ್ಯಕ್ಷರು, ಅತಿಥಿಗಳು ಹೆಗ್ಗಡೆಯವರ ಬೀಡಿನಲ್ಲಿ (ನಿವಾಸದಲ್ಲಿ) ಸೇರಿ ಭವ್ಯ ಮೆರವಣಿಗೆಯಲ್ಲಿ ಅಮೃತವರ್ಷಿಣಿ ಸಭಾಭವನಕ್ಕೆ ಹೋಗುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.