ADVERTISEMENT

ದಕ್ಷಿಣ ಕನ್ನಡ: ಚಿಣ್ಣರ ಕೈಯಲ್ಲಿ ಡಿಜಿಟಲ್ ಸ್ಲೇಟ್; ಗಮನ ಸೆಳೆದ ಇ–ಸ್ಲೇಟ್ ಅಭಿಯಾನ

ಜಿಲ್ಲೆಯ ಗಡಿದಾಟಿದ ಪ್ರಾಧ್ಯಾಪಕರೊಬ್ಬರ ಇ–ಸ್ಲೇಟ್ ಅಭಿಯಾನ

ಸಂಧ್ಯಾ ಹೆಗಡೆ
Published 30 ಮಾರ್ಚ್ 2022, 1:32 IST
Last Updated 30 ಮಾರ್ಚ್ 2022, 1:32 IST
ಇ–ಸ್ಲೇಟ್ ಕೈಯಲ್ಲಿ ಹಿಡಿದ ಮಕ್ಕಳೊಂದಿಗೆ ಡಾ. ಅನಂತ ಪ್ರಭು
ಇ–ಸ್ಲೇಟ್ ಕೈಯಲ್ಲಿ ಹಿಡಿದ ಮಕ್ಕಳೊಂದಿಗೆ ಡಾ. ಅನಂತ ಪ್ರಭು   

ಮಂಗಳೂರು: ಬಡ ಮಕ್ಕಳ ಕೈಯಲ್ಲಿ ಡಿಜಿಟಲ್ ಕಲಿಕಾ ಸಾಮಗ್ರಿ ಕಾಣುವ ಕನಸಿನೊಂದಿಗೆ ಪ್ರಾಧ್ಯಾಪಕರೊಬ್ಬರು ಆರಂಭಿಸಿರುವ ಇ–ಸ್ಲೇಟ್ ಅಭಿಯಾನವು ದಕ್ಷಿಣ ಕನ್ನಡ ಜಿಲ್ಲೆಯ ಗಡಿದಾಟಿ ಹೊರ ಜಿಲ್ಲೆಯ ದಾನಿಗಳನ್ನು ಸೆಳೆದಿದೆ.

ಮಂಗಳೂರಿನ ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕರಾಗಿರುವ ಸೈಬರ್ ಕ್ರೈಂ ತಜ್ಞ ಡಾ. ಅನಂತ ಪ್ರಭು ಅವರು ನಾಲ್ಕು ತಿಂಗಳುಗಳ ಹಿಂದೆ ಪ್ರಾರಂಭಿಸಿರುವ ಇ– ಸ್ಲೇಟ್‌ ಅಭಿಯಾನದಿಂದ ಪ್ರೇರಿತರಾದ ದಾನಿಗಳು, ತಮ್ಮ ಊರಿನ ಅಂಗನವಾಡಿ ಚಿಣ್ಣರಿಗೆ ಇ–ಸ್ಲೇಟ್ ವಿತರಿಸಿ, ಸಂಭ್ರಮಿಸುತ್ತಿದ್ದಾರೆ. ಈ ಸಂಖ್ಯೆ ಈಗ 5,000 ದಾಟಿದೆ.

ಏನಿದು ಇ–ಸ್ಲೇಟ್?: ಟ್ಯಾಬ್ಲೆಟ್ ಅಳತೆಯಲ್ಲಿರುವ ಇ–ಸ್ಲೇಟ್‌ನಲ್ಲಿ ಪೆನ್ ಮಾದರಿಯ ಬಳಪವಿದೆ. ಮಕ್ಕಳು ಪಾಠಿಯ ಎಲ್‌ಸಿಡಿ ಪರದೆಯಲ್ಲಿ ಬರೆದಿದ್ದನ್ನು ಡಿಲೀಟ್ ಬಟನ್ ಮೂಲಕ ಅಳಿಸಬಹುದು. ಅಗತ್ಯ ಇದ್ದಿದ್ದನ್ನು ಲಾಕ್ ಮಾಡಿಯೂ ಇಟ್ಟುಕೊಳ್ಳಬಹುದು.

ADVERTISEMENT

‘ಅನಾಥ ಮಕ್ಕಳು, ಬಡ ಕುಟುಂಬದ ಪುಟಾಣಿಗಳಿಗೆ ‘ಗಿಫ್ಟ್‌ ಎ ಟಾಯ್’ ಆಟಿಕೆ ಸಾಮಗ್ರಿ ನೀಡುವ ಕಾರ್ಯಕ್ರಮ ಹಮ್ಮಿಕೊಂಡು, ವಾಟ್ಸ್‌ಆ್ಯಪ್ ಸ್ಟೇಟಸ್ ಹಾಕಿದ್ದೆ. ಇದನ್ನು ಗಮನಿಸಿದ ಹಲವರು, ಮಕ್ಕಳನ್ನು ಕಳೆದುಕೊಂಡವರು, ಮಕ್ಕಳಿಲ್ಲದವರು ತಮ್ಮ ಮನೆಯಲ್ಲಿದ್ದ ಆಟಿಕೆಗಳನ್ನು ಪುಟಾಣಿಗಳಿಗೆ ನೀಡಿ, ಆತ್ಮಾನಂದ ಅನುಭವಿಸಿದರು. ಒಮ್ಮೆ ಆಟಿಕೆ ಖರೀದಿಗೆ ಹೋದಾಗ ಇ–ಸ್ಲೇಟ್ ಕಣ್ಣಿಗೆ ಬಿತ್ತು. ಇದನ್ನು ಖರೀದಿಸಿ ಅಂಗನವಾಡಿ ಮಕ್ಕಳಿಗೆ ವಿತರಿಸಿದೆ. ಇದರಿಂದ ಪ್ರೇರಿತರಾದ ಅನೇಕ ಸ್ನೇಹಿತರು, ಅಭಿಯಾನಕ್ಕೆ ಕೈಜೋಡಿಸಿದರು’ ಎನ್ನುತ್ತಾರೆ ಅನಂತ ಪ್ರಭು.

ಅನಂತ ಪ್ರಭು ಅವರ ಇ–ಸ್ಲೇಟ್‌ ಅಭಿಯಾನವು ವೈರಲ್‌ ಆಗಿದ್ದು, ದಕ್ಷಿಣ ಕನ್ನಡ ಜಿಲ್ಲೆ ಜತೆಗೆ ಹಾವೇರಿ, ಗದಗ ಜಿಲ್ಲೆಗಳಲ್ಲೂ ಇದು ಆರಂಭವಾಗಿದೆ. ಅನಂತ ಪ್ರಭು ಅವರು ಈಗಾಗಲೇ 10ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಆನ್‌ಲೈನ್‌ನಲ್ಲಿ ಲಭ್ಯವಿರುವ ಇ–ಪುಸ್ತಕಗಳಿಂದ ಬರುವ ಶೇ 100ರಷ್ಟು ಆದಾಯವನ್ನು ಅವರು ಇಂತಹ ಸೇವಾ ಕಾರ್ಯಗಳಿಗೆ ಮೀಸಲಿಟ್ಟಿದ್ದಾರೆ.

ಪುಸ್ತಕದ ಆದಾಯ ಸೇವಾ ಕಾರ್ಯಕ್ಕೆ

‘ಇ– ಪ್ರಕಟಣೆಗೆ ಶೂನ್ಯ ವೆಚ್ಚವಾಗುವುದರಿಂದ ಪೂರ್ಣ ಆದಾಯವನ್ನು ಸೇವಾ ಕಾರ್ಯಕ್ಕೆ ಬಳಸಬಹುದು. ಹೀಗಾಗಿ ಮುದ್ರಣಕ್ಕಿಂತ ಇ–ಪುಸ್ತಕಗಳಿಗೆ ಆದ್ಯತೆ ನೀಡಿದ್ದೇನೆ. ಇ–ಸ್ಲೇಟ್ ಅಭಿಯಾನದ ಜತೆಗೆ ಬಡ ಮಕ್ಕಳಿಗೆ ಸ್ಲಿಪ್ಪರ್ (ಚಪ್ಪಲಿ) ವಿತರಣೆ ಕೂಡ ಆರಂಭಿಸಿದ್ದು, ಕಾರಿನಲ್ಲಿ ಇವುಗಳನ್ನು ಸಂಗ್ರಹಿಸಿಟ್ಟು, ಬರಿಗಾಲಲ್ಲಿ ಹೋಗುವ ಮಕ್ಕಳನ್ನು ಕಂಡರೆ ಒಂದು ಜೊತೆ ಚಪ್ಪಲಿ ಕೊಡುತ್ತೇನೆ. ಈಗ ಪೊಲೀಸ್ ಇಲಾಖೆಯ ಕೆಲವು ಅಧಿಕಾರಿಗಳು ತಮ್ಮ ವಾಹನದಲ್ಲಿಯೂ ಚಪ್ಪಲಿ ಇಟ್ಟುಕೊಂಡು, ಬರಿಗಾಲಲ್ಲಿ ಶಾಲೆಗೆ ಹೋಗುವ ಮಕ್ಕಳು ಕಂಡರೆ ವಿತರಿಸುತ್ತಾರೆ. ಎರಡು ತಿಂಗಳಲ್ಲಿ 1,000ಕ್ಕೂ ಹೆಚ್ಚು ಮಕ್ಕಳಿಗೆ ಚಪ್ಪಲಿ ನೀಡಿದ್ದು, ಸಮಾಧಾನ ತಂದಿದೆ’ ಎಂದು ಅನಂತ ಪ್ರಭು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.