
ಮಂಗಳೂರು: ‘ಬಿಜೆಪಿ ಜೊತೆ ಗುರುತಿಸಿಕೊಂಡಿರುವ ಆರ್‌ಎಸ್ಎಸ್ ಕೂಡ ರಾಜಕೀಯ ಸಂಘಟನೆ. ಅವರದು ಕೋಮುವಾದಿ ಸಂಘಟನೆ. ಅವರ ಇತಿಹಾಸ ನಮಗೆಲ್ಲ ಗೊತ್ತಿದೆ. ಅವರ ಕಾರ್ಯಕ್ರಮಗಳ ಉದ್ದೇಶದ ಬಗ್ಗೆ ಸಹಜವಾಗಿ ಅನುಮಾನ ಬಂದೇ ಬರುತ್ತದೆ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಇಲ್ಲಿ ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ‘ಆರ್‌ಎಸ್‌ಎಸ್ ಕಾನೂನಿಗಿಂತ ಮೇಲೇನಿಲ್ಲ. ಅವರೂ ದೇಶದ ಕಾನೂನು ಅಡಿಯಲ್ಲೇ ಕೆಲಸ ಮಾಡಬೇಕು. ಯಾವುದೇ ಕಾರ್ಯಕ್ರಮ ಮಾಡಬೇಕಾದರೂ, ಯಾರಿಗೂ ತೊಂದರೆ ಆಗದಂತೆ, ಕಾನೂನಿನ ಚೌಕಟ್ಟಿನಲ್ಲೇ ಮಾಡಬೇಕಾಗುತ್ತದೆ’ ಎಂದರು.
‘ಧರ್ಮಸ್ಥಳ ಪ್ರಕರಣದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ತನ್ನ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿದೆ. ಎಸ್‌ಐಟಿ ತನಿಖೆಗೆ ತಡೆಯಾಜ್ಞೆ ನೀಡಿರುವುದು ನ್ಯಾಯಾಲಯದ ತೀರ್ಮಾನ. ಇದು ನನಗೂ ಆಶ್ಚರ್ಯ ಆಗಿದೆ. ನ್ಯಾಯಾಲಯವು ಎಸ್‌ಐಟಿ ತನಿಖೆಯನ್ನು ರದ್ದು ಗೊಳಿಸಿಲ್ಲ. ತಡೆಯಾಜ್ಞೆ ನೀಡಿದೆ ಅಷ್ಟೆ. ಎಸ್‌ಐಟಿ ತನಿಖೆ ಮುಂದುವರಿಸಲು ಅವಕಾಶ ನೀಡಬೇಕು ಎಂದೇ ಸರ್ಕಾರದ ವಕೀಲರು ವಾದಿಸಿದ್ದರು. ನ್ಯಾಯಾಲಯದ ಆದೇಶವನ್ನು ಪ್ರಶ್ನೆ ಮಾಡಲಾಗದು. ತಡೆಯಾಜ್ಞೆ ತೆರವುಗೊಳಿಸಲು ಪ್ರಯತ್ನ ನಡೆಯಲಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ಎಸ್‌ಐಟಿ ತನಿಖೆಯಲ್ಲಿ ಸರ್ಕಾರ ಯಾವುದೇ ಹಸ್ತಕ್ಷೇಪ ಮಾಡಿಲ್ಲ. ಸಾಕ್ಷಿಗಳ ಆಧಾರದ ಮೇಲೆ ತನಿಖೆ ಮಾಡಬೇಕು. ಯಾರೇ ತಪ್ಪಿತಸ್ಥರಿದ್ದರೂ ಕ್ರಮವಹಿಸಬೇಕು ಎಂದು ಎಸ್‌ಐಟಿಗೆ ಸೂಚನೆ ನೀಡಿತ್ತು. ಯಾವುದೇ ಒಂದು ಮಾಹಿತಿ ಸಿಕ್ಕರೂ ಅವರು ತನಿಖೆ ಮಾಡಬಹುದು’ ಎಂದರು.
'ವಿಶ್ವೇಶ್ವರ ಹೆಗಡೆ ಕಾಗೇರಿ ವಿಧಾನಸಭೆಯ ಸಭಾಧ್ಯಕ್ಷರಾಗಿ ಕೆಲಸ ಮಾಡಿದವರು. ಜವಾಬ್ದಾರಿಯುತ ಸ್ಥಾನದಲ್ಲಿದ್ದ ಅವರು, ಆ ಸಾಂವಿಧಾನಿಕ ಪೀಠದ ಬಗ್ಗೆ ಆಧಾರ ಇಟ್ಟುಕೊಂಡು ಮಾತನಾಡಬೇಕಿತ್ತು. ವಿಧಾನ ಸಭಾಧ್ಯಕ್ಷರಾಗಿದ್ದಾಗ ಕಾಗೇರಿ ಅವರೂ ಸಾಕಷ್ಟು ಭ್ರಷ್ಟಾಚಾರ ಮಾಡಿದ್ದಾರೆ ಎಂದು ನಾವೂ ಹೇಳಬಹುದು’ ಎಂದರು.
‘ಶಾಸಕರ ಭವನಕ್ಕೆ ಪರಿಕರ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ’ ಎಂದು ಶಾಸಕ ಡಾ.ವೈ.ಭರತ್ ಶೆಟ್ಟಿ ಮಾಡಿರುವ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ‘ಭರತ್ ಶೆಟ್ಟಿ ಅವರು ವಿಧಾನಸಭಾ ಅಧಿವೇಶನದಲ್ಲೇ ಈ ಬಗ್ಗೆ ಪ್ರಶ್ನೆ ಮಾಡಲಿ. ಅನೇಕ ಸದನ ಸಮಿತಿಗಳಿವೆ. ಅಲ್ಲೂ ಪ್ರಶ್ನೆ ಕೇಳಬಹುದು. ಬೀದಿಯಲ್ಲಿ ನಿಂತು ಸುಮ್ಮನೆ ಹೇಳಿದರೆ ಹೇಗೆ’ ಎಂದು ಪ್ರಶ್ನಿಸಿದರು.
‘ಕಾಗೇರಿ ಹಾಗೂ ಭರತ್ ಶೆಟ್ಟಿ ಸುಮ್ಮನೆ ಪ್ರಚಾರಕ್ಕಾಗಿ ವಿಧಾನಸಭಾಧ್ಯಕ್ಷರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಕೀಳು ಮಟ್ಟದ ರಾಜಕಾರಣವನ್ನು ಅವರು ಮಾಡಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.