
ಮಂಗಳೂರು: ‘ಯಾವುದೇ ಸರ್ಕಾರ ಅಧಿಕಾರದಲ್ಲಿದ್ದರೂ ಕೆಲವು ಕಡೆ ಬಿಲ್ ಪಾವತಿ ಬಾಕಿ ಇರುವುದು ಹಿಂದಿನಿಂದಲೂ ಇರುವಂತಹುದೇ. ಆದರೆ, ಗುತ್ತಿಗೆದಾರರ ಸಂಘದ ಅಧ್ಯಕ್ಷರು ಭ್ರಷ್ಟಾಚಾರ ನಡೆದಿದೆ ಎಂದು ವಿನಾಕಾರಣ ಬಿಂಬಿಸುತ್ತಿರುವುದನ್ನು ನೋಡಿದರೆ, ಬೇರೇನೋ ಉದ್ದೇಶ ಇದ್ದಂತೆ ಕಾಣುತ್ತದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದರು.
ಶನಿವಾರ ಇಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಅವರು, ‘ಗುತ್ತಿಗೆದಾರರ ಬಿಲ್ ಪಾವತಿ ಸಂಬಂಧ ಈಗಾಗಲೇ ಮುಖ್ಯಮಂತ್ರಿ ಪ್ರತಿಕ್ರಿಯಿಸಿದ್ದಾರೆ. ರಾಜ್ಯದಲ್ಲಿ ಸಾಕಷ್ಟು ಕಾಮಗಾರಿಗಳು ನಡೆಯುತ್ತಿವೆ. ಬಿಲ್ ಬಾಕಿ ಇದ್ದರೆ ಸರ್ಕಾರದ ಜೊತೆ ಚರ್ಚಿಸಿ ಇತ್ಯರ್ಥಪಡಿಸಿಕೊಳ್ಳಬೇಕು. ಅದು ಬಿಟ್ಟು, ಕಮಿಷನ್ ಅದೂ ಇದೂ ಅಂತ ಎಲ್ಲ ಕಡೆ ಸಾರ್ವಜನಿಕವಾಗಿ ಹೇಳುತ್ತಿರುವುದು ಸರಿಯಲ್ಲ. ದಾಖಲೆ ಇದ್ದರೆ ಅವರು ಆರೋಪ ಮಾಡಲಿ’ ಎಂದರು.
‘ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಸಾವಿರಾರು ಕೋಟಿ ರೂಪಾಯಿ ಅನುದಾನ ಬರುವುದು ಬಾಕಿ ಇದೆ. ಗುತ್ತಿಗೆದಾರರ ಬಿಲ್ ಪಾವತಿ ಹಾಗೂ ಕೇಂದ್ರ ಸರ್ಕಾರದಿಂದ ಅನುದಾನ ವಿಳಂಬಕ್ಕೆ ಸಂಬಂಧವಿದೆ’ ಎಂದರು.
‘ಅತಿಯಾದ ಸಾಮಾಜಿಕ ಜಾಲತಾಣಗಳ ಬಳಕೆ, ಮೊಬೈಲ್ ಫೋನ್ ಬಳಕೆಯಿಂದ ಯುವ ಪೀಳಿಗೆಯಲ್ಲಿ ಮಾನಸಿಕ ಖಿನ್ನತೆ, ಒತ್ತಡ ಕಂಡುಬರುತ್ತಿದೆ. ಜಾಲತಾಣಗಳ ಬಳಕೆ ನಿಯಂತ್ರಣದ ಬಗ್ಗೆ ರಾಷ್ಟ್ರಮಟ್ಟದಲ್ಲಿ ಚರ್ಚೆ ನಡೆದು, ಜನರು ಒಪ್ಪುವಂತಹ ನಿರ್ಧಾರ ಕೈಗೊಳ್ಳಬೇಕಾಗಿದೆ. ಕೇಂದ್ರ ಸಚಿವ ಜೆ.ಪಿ.ನಡ್ಡಾ ಅವರಿಗೆ ಪತ್ರ ಬರೆದು ಗಮನ ಸೆಳೆಯುತ್ತೇನೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.