ಕಾಸರಗೋಡಿನ ಪೆರಿಯದಲ್ಲಿ ನಡೆದ ಶರತ್ ಲಾಲ್ ಮತ್ತು ಕೃಪೇಶ್ ಸ್ಮರಣೆ ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಜನರತ್ತ ಕೈಬೀಸಿದರು.
ಕಾಸರಗೋಡು: ಉತ್ತಮ ರಾಜಕೀಯ ಇತಿಹಾಸವಿರುವ ಕಮ್ಯುನಿಸ್ಟರು ಕೇರಳದಲ್ಲಿ ಹೀನ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ. ಅವರಿಂದಾಗಿ ಇಲ್ಲಿನ ಜನರು ನೆಮ್ಮದಿ ಕಳೆದುಕೊಂಡಿದ್ದಾರೆ. ಇದರಿಂದಾಗಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರಲಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಭಿಪ್ರಾಯಪಟ್ಟರು.
ಇಲ್ಲಿನ ಪೆರಿಯದ ಕಲ್ಯೋತ್‌ನಲ್ಲಿ ರಾಜಕೀಯ ವಿರೋಧಿಗಳಿಂದ ಕೊಲೆಯಾದ ಶರತ್‌ಲಾಲ್ ಮತ್ತು ಕೃಪೇಶ್ ಅವರ ಸ್ಮರಣೆ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದ ಅವರು ಸಿಪಿಐ ಮತ್ತು ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿರುವುದರಿಂದ ಜನರು ತೊಂದರೆಗೆ ಒಳಗಾಗಿದ್ದಾರೆ ಎಂದರು.
ಈಗ ಆಡಳಿತದಲ್ಲಿರುವ ಪಕ್ಷಕ್ಕೆ ಮುಂದಿನ ಚುನಾವಣೆಯಲ್ಲಿ ಜನರು ಪಾಠ ಕಲಿಸಲಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಕುಕೃತ್ಯಗಳು ಇರುವುದಿಲ್ಲ ಎಂದು ಶಿವಕುಮಾರ್ ನುಡಿದರು.
ಕೃಪೇಶ್ ಮತ್ತು ಶರತ್ ಲಾಲ್ ಅವರನ್ನು ಕಮ್ಯುನಿಸ್ಟ್ ಪಕ್ಷದವರು ಕೊಲೆ ಮಾಡಿದ್ದರು ಎಂದು ನಂಬಲು ಸಾಧ್ಯವಾಗಿರಲಿಲ್ಲ. ಆ ಪಕ್ಷ ಇಂಥ ಹೀನ ಕೃತ್ಯದಲ್ಲಿ ಭಾಗಿಯಾದದ್ದು ಬೇಸರದ ಸಂಗತಿ. ಇದು ಭಾರತದ ಪ್ರಜಾತಂತ್ರಕ್ಕೆ ಬಿದ್ದ ಪೆಟ್ಟು. ಎಲ್ಲರೂ ಒಂದು ಎಂದು ಪರಿಗಣಿಸುವ ಭಾರತದ ಸಂಸ್ಕೃತಿಗೂ ಆ ಪಕ್ಷ ಧಕ್ಕೆ ಉಂಟುಮಾಡಿದೆ ಎಂದ ಶಿವಕುಮಾರ್ ‘ಬಲಿಯಾದ ಯುವಕರ ಪಾಲಕರು ಮತ್ತು ಸ್ನೇಹಿತರ ಜೊತೆ ಪಕ್ಷ ಇದೆ’ ಎಂದರು.
‘ಕೇರಳದ ಮತದಾರರನ್ನು ಕಾಂಗ್ರೆಸ್ ಮರೆಯಲು ಸಾಧ್ಯವಿಲ್ಲ. ಹಿಂದಿನ ಎರಡು ಲೋಕಸಭೆ ಚುನಾವಣೆಯಲ್ಲಿ ಇಲ್ಲಿನ ಮತದಾರರು ಪಕ್ಷದ ಕೈ ಹಿಡಿದಿದ್ದಾರೆ. ಬೆಂಗಳೂರಿನಲ್ಲಿರುವ ಮಲಯಾಳಿಗಳ ಪೈಕಿ ಅನೇಕರು ಕಾಂಗ್ರೆಸ್ ಮತದಾರರಾಗಿದ್ದು ಅವರೆಲ್ಲರೂ ಈಗಿನ ಆಡಳಿತದ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಮುಂದಿನ ಬಾರಿ ಇಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬರುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅವರ ನಂಬಿಕೆ ಸುಳ್ಳಾಗದಿರಲಿ’ ಎಂದರು.
ಉಪಮುಖ್ಯಮಂತ್ರಿಯಾಗಿ ಇಲ್ಲಿಗೆ ಬಂದಿಲ್ಲ. ಯುವ ಕಾಂಗ್ರೆಸ್ ಕಾರ್ಯಕರ್ತನಾಗಿ ಬಂದಿದ್ದೇನೆ. ಎನ್‌ಎಸ್‌ಯುಐ ಜಿಲ್ಲಾ ಘಟಕದ ಅಧ್ಯಕ್ಷ ಮತ್ತು ತಾಲ್ಲೂಕು ಯುವ ಕಾಂಗ್ರೆಸ್ ಅಧ್ಯಕ್ಷನಾಗಿದ್ದು ಪಕ್ಷದಲ್ಲಿ ಬೆಳೆದವನು ನಾನು. ಈ ಬೆಳವಣಿಗೆಗೆ ಪಕ್ಷಕ್ಕಾಗಿದ್ದ ಅರ್ಪಣಾ ಮನೋಭಾವ ಮತ್ತು ಗಾಂಧಿ ಕುಟುಂಬದ ಮೇಲೆ ನನಗಿದ್ದ ನಿಷ್ಠೆಯೇ ಕಾರಣ. ಇಂದಿಗೂ ಪಕ್ಷದ ಬೆಳವಣಿಗೆಗಾಗಿ ಕೆಲಸ ಮಾಡುತ್ತಿದ್ದೇನೆ. ಕಾಂಗ್ರೆಸ್ ಇತಿಹಾಸವೆಂದರೆ ದೇಶದ ಇತಿಹಾಸ. ಇಂದಿರಾಗಾಂಧಿ ಮತ್ತು ರಾಜೀವಗಾಂಧಿ ಪಕ್ಷಕ್ಕಾಗಿ ಬದುಕಿದ್ದರು. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಿಗೆ ಪ್ರಧಾನಮಂತ್ರಿಯಾಗಲು ಅವಕಾಶವಿದ್ದರೂ ಪಕ್ಷಕ್ಕಾಗಿ ಅವರು ತ್ಯಾಗ ಮಾಡಿದರು ಎಂದು ಶಿವಕುಮಾರ್ ಹೇಳಿದರು.
ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುಧಾಕರನ್, ಸಂಸದರಾದ ರಾಜ್‌ಗೋಪಾಲ್ ಉಣ್ಣಿತ್ತಾನ್, ಸೋನಿ ಸೆಬಾಸ್ಟ್ಯನ್ ಮತ್ತಿತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.