ADVERTISEMENT

ಪೆಡ್ಲರ್‌ಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ

​ಪ್ರಜಾವಾಣಿ ವಾರ್ತೆ
Published 21 ಜನವರಿ 2026, 2:41 IST
Last Updated 21 ಜನವರಿ 2026, 2:41 IST
<div class="paragraphs"><p>ಸುಧೀರ್&nbsp;ಕುಮಾರ್ ರೆಡ್ಡಿ</p></div>

ಸುಧೀರ್ ಕುಮಾರ್ ರೆಡ್ಡಿ

   

ಮಂಗಳೂರು: ಗಾಂಜಾ ಮತ್ತಿತರ ಮಾದಕ ವಸ್ತುಗಳ ವಿರುದ್ಧ ಕಾರ್ಯಾಚರಣೆಯನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು. ಕೊನೆಯ ಪೆಡ್ಲರ್ ಬಂಧನವಾಗುವವರೆಗೂ ಕಾರ್ಯಾಚರಣೆ ಮುಂದುವರಿಯಲಿದ್ದು, ಡ್ರಗ್ಸ್ ಪೆಡ್ಲರ್‌ಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ವಹಿಸಲಾಗುವುದು ಎಂದು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಹೇಳಿದರು.‌

ಮಾದಕ ವಸ್ತುಗಳ ವಿರುದ್ಧದ ಜಾಗೃತಿ ಪ್ರಯುಕ್ತ ಮಂಗಳವಾರ ಇಲ್ಲಿ ನಡೆದ ಶಿಕ್ಷಣ ಸಂಸ್ಥೆಗಳ ಪ್ರಮುಖರೊಂದಿಗಿನ ಸಭೆಯಲ್ಲಿ ಅವರು ಮಾತನಾಡಿದರು. ಡ್ರಗ್ಸ್ ವಿತರಣಾ ಜಾಲ ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ನಿರಂತರ ಕಾರ್ಯಾಚರಣೆ ನಡೆಸುತ್ತಿದೆ. ಇತ್ತೀಚೆಗೆ ನಡೆಸಿದ ಕಾಲೇಜು ವಿದ್ಯಾರ್ಥಿಗಳ ತಪಾಸಣಾ ಕಾರ್ಯಾಚರಣೆಯಲ್ಲಿ ಡ್ರಗ್ಸ್‌ ಸೇವನೆಯ ಪ್ರಕರಣ ಕಂಡುಬಂದಿಲ್ಲ. ಇದರಿಂದಾಗಿ ನಶೆಮುಕ್ತ ಮಂಗಳೂರು ಅಭಿಯಾನ ಯಶಸ್ಸು ಕಾಣುವ ಭರವಸೆ ಮೂಡಿದೆ ಎಂದರು.

ADVERTISEMENT

ಎಲ್ಲ ಕಾಲೇಜುಗಳಲ್ಲಿ ಡ್ರಗ್ಸ್ ವಿರೋಧಿ ಸಮಿತಿ ಕ್ರಿಯಾಶೀಲಗೊಳಿಸಬೇಕು. ಮಾದಕ ವಸ್ತುಗಳ ಪ್ರಭಾವಕ್ಕೊಳಗಾದ ವಿದ್ಯಾರ್ಥಿಗಳನ್ನು ಗುರುತಿಸಿ, ಕೌನ್ಸೆಲಿಂಗ್ ಮೂಲಕ ಹೊರ ತರಬೇಕು. ಈ ನಿಟ್ಟಿನಲ್ಲಿ ಅಗತ್ಯ ನೆರವನ್ನು ಪೊಲೀಸ್ ಇಲಾಖೆ ನೀಡಲಿದೆ. ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್‌ ಅನ್ನು ಡ್ರಗ್ಸ್‌ ಮುಕ್ತ ಮಾಡುವ ಅಭಿಯಾನಕ್ಕೆ ಕಾಲೇಜುಗಳು ಕೈಜೋಡಿಸಬೇಕು. ಪೊಲೀಸ್ ಅಧಿಕಾರಿಗಳು ಆಗಾಗ ಕಾಲೇಜುಗಳಿಗೆ ಭೇಟಿ ನೀಡಲಿದ್ದಾರೆ ಎಂದು ಹೇಳಿದರು. 

2025 ಜೂನ್ 1ರಿಂದ 2026ರ ಜನವರಿ 17ರವರೆಗೆ ವಿವಿಧ ಕಾಲೇಜುಗಳಲ್ಲಿ 5,356 ಡ್ರಗ್ಸ್ ಪರೀಕ್ಷೆಗಳನ್ನು ಮಾಡಲಾಗಿದ್ದು, ಇದರಲ್ಲಿ ಕೇವಲ 14 ಪ್ರಕರಣಗಳು ಪಾಸಿಟಿವ್ ಕಂಡುಬಂದಿದೆ. ಇದು ಜಿಲ್ಲೆಯಲ್ಲಿ ಡ್ರಗ್ಸ್ ಚಟುವಟಿಕೆ ಕಡಿಮೆಯಾಗಿರುವ ಸಂಕೇತವಾಗಿದೆ ಎಂದು ಹೇಳಿದರು.

ಎಸ್‌ಪಿ ಅರುಣ್ ಕುಮಾರ್, ಡಿಸಿಪಿ ಮಿಥುನ್  ಎಚ್.ಎನ್, ಮಂಗಳೂರು ಉಪ ವಿಭಾಗಾಧಿಕಾರಿ ಮೀನಾಕ್ಷಿ ಆರ್ಯ, ಎಎಸ್‍ಪಿ ಅನಿಲ್ ಕುಮಾರ್  ಇದ್ದರು.

ಪಿಜಿ: ನಿರಾಕ್ಷೇಪಣಾ ಪತ್ರ ಪರಿಶೀಲನೆ

ನಗರದಲ್ಲಿ ಸಾಕಷ್ಟು ಪಿಜಿಗಳು (ಪೇಯಿಂಗ್ ಗೆಸ್ಟ್‌) ಇವೆ. ಪಿಜಿಗಳಿಗೆ ಪರವಾನಗಿ ನೀಡುವ ಮೊದಲು ಪೊಲೀಸ್ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ಪಡೆಯುವ ಬಗ್ಗೆ ನಿಯಮ ರೂಪಿಸಲು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಹೇಳಿದರು.  ಪಿಜಿಗಳಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದು ಯಾವುದೇ ನಿಯಮ ಪಾಲಿಸುತ್ತಿಲ್ಲ. ಕೆಲವು ಕಡೆ ಡ್ರಗ್ಸ್ ಸೇವನೆಗೆ ಪೂರಕ ವಾತಾವರಣ ಇರುತ್ತದೆ. ಪಿಜಿಗಳ ಕಾರ್ಯಾಚರಣೆ ಬಗ್ಗೆ ಪೊಲೀಸರಿಗೂ ಮಾಹಿತಿ ಇರುವುದಿಲ್ಲ ಎಂದು ಸಭೆಯಲ್ಲಿ ಇದ್ದವರು ಪೊಲೀಸರ ಗಮನಕ್ಕೆ ತಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.