ಮೂಲ್ಕಿ (ದಕ್ಷಿಣ ಕನ್ನಡ): ದಸರೆಯ ಸಂಭ್ರಮದಲ್ಲಿರುವ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಭಕ್ತ ಮಹಿಳೆಯರು ಪ್ರಸಾದ ರೂಪದಲ್ಲಿ ‘ಅಮ್ಮ’ನ ಸೀರೆ ಪಡೆದು ಧನ್ಯರಾದರು.
‘ಅಮ್ಮ’ನ ಸೀರೆ ಪ್ರಸಾದಕ್ಕಾಗಿ ಮಹಿಳೆಯರು ಮಧ್ಯಾಹ್ನ 3 ಗಂಟೆಗೇ ಸರತಿ ಸಾಲಿನಲ್ಲಿ ನಿಂತಿದ್ದರು. ತಡರಾತ್ರಿಯ ವರೆಗೂ ಸೀರೆಗಳನ್ನು ವಿತರಿಸಲಾಯಿತು.
ಪ್ರತಿ ವರ್ಷ ದಸರೆ ಸಂದರ್ಭದಲ್ಲಿ ಲಲಿತ ಪಂಚಮಿಯ ದಿನ ಸೀರೆಗಳ ವಿತರಣೆ ನಡೆಯುತ್ತದೆ. ಇದಕ್ಕಾಗಿ ನಾನಾ ಕಡೆಗಳಿಂದ ಭಕ್ತರು ಬರುತ್ತಾರೆ. ಈ ಬಾರಿಯೂ ಭಕ್ತರ ಪ್ರವಾಹ ಹರಿದು ಬಂತು.
ಮೊದಲು ಅನ್ನಪ್ರಸಾದ ನೀಡಿ, ಅದನ್ನು ಸ್ವೀಕರಿಸಿ ಹೋಗುವಾಗ ಸೀರೆಗಳನ್ನು ವಿತರಿಸಲಾಯಿತು. ನೂಕುನುಗ್ಗಲು ಆಗದಂತೆ ದೇವಸ್ಥಾನದ ಮುಂಭಾಗದಲ್ಲಿ ಅಟ್ಟಳಿಗೆ ಅಳವಡಿಸಲಾಗಿತ್ತು. ಅದರ ಮೂಲಕ ಭಕ್ತರು ನೇರವಾಗಿ ಅನ್ನದಾನದ ಛತ್ರದತ್ತ ತೆರಳಿದರು.
‘ಹಿಂದೆ, ಹರಕೆ ರೂಪದಲ್ಲಿ ಬಂದ ಸೀರೆಗಳನ್ನು ಕೊಡಲಾಗುತ್ತಿತ್ತು. ಈಗ ಸಮಾನತೆ ಇರಬೇಕು ಎಂದು ಹೊಸದಾಗಿ ಖರೀದಿಸಿ ವಿತರಿಸಲಾಗುತ್ತಿದೆ. ಈ ಬಾರಿ 25 ಸಾವಿರ ಸೀರೆ ಖರೀದಿಸಲಾಗಿದೆ. ಸೀರೆಯನ್ನು ಎರಡು ಭಾಗ ಮಾಡಿ ರವಿಕೆ ಕಣ ಎಂದು ಕೊಡುವ ಪದ್ಧತಿ ಈಗ ಕೈಬಿಡಲಾಗಿದೆ’ ಎಂದು ದೇವಸ್ಥಾನದ ಆನುವಂಶಿಕ ಪ್ರಧಾನ ಅರ್ಚಕ ಹರಿನಾರಾಯಣ ಅಸ್ರಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.