ADVERTISEMENT

ದೇರಳಕಟ್ಟೆ: ವಿದ್ಯಾರ್ಥಿಯ ಹಾಸ್ಯಭರಿತ ಭಾಷಣ ವೈರಲ್

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2022, 14:46 IST
Last Updated 26 ಆಗಸ್ಟ್ 2022, 14:46 IST
ಮಹಮ್ಮದ್ ಅಫ್ವಾನ್
ಮಹಮ್ಮದ್ ಅಫ್ವಾನ್   

ಉಳ್ಳಾಲ: ಇಲ್ಲಿನ ದೇರಳಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಯೊಬ್ಬ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಮಾಡಿದ ಭಾಷಣದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆತನ ಹಾಸ್ಯಭರಿತ ಮಾತುಗಳು ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಆ.23ರಂದು ದೇರಳಕಟ್ಟೆ ಪಬ್ಲಿಕ್ ಸ್ಕೂಲ್‌ನಲ್ಲಿ ದೇರಳಕಟ್ಟೆ ವಲಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ದೇರಳಕಟ್ಟೆ ಶಾಲೆಯ 7ನೇ ತರಗತಿ ವಿದ್ಯಾರ್ಥಿ ಮಹಮ್ಮದ್ ಅಫ್ವಾನ್ ಮಾಡಿದ ಹಾಸ್ಯಭರಿತ ಭಾಷಣ ವೈರಲ್ ಆಗುತ್ತಿದೆ.

ತರಗತಿಯಲ್ಲಿ ಕುಳಿತು ಮಾತನಾಡುತ್ತಿದ್ದಾಗ ಕೈ ಹಿಡಿದು ಎಬ್ಬಿಸಿದ ಶಿಕ್ಷಕಿ ಮುಂದೆ ನಿಂತು ಮಾತನಾಡುವಂತೆ ಹೇಳಿದ್ದಾರೆ. ಕುಳಿತು ಮಾತನಾಡಿದರೆ ಕೇಳೋದಿಲ್ಲ, ನಿಂತು ಮಾತನಾಡು ಅಂದಿದ್ದಾರೆ. ಅದಕ್ಕಾಗಿ ಪ್ರತಿಭಾ ಕಾರಂಜಿಯ ಭಾಷಣದಲ್ಲಿ ಮಾತನಾಡುತ್ತಿದ್ದೇನೆ. ಶಾಲೆಯಲ್ಲಿ ಚಿಕ್ಕಿ ತಿಂದೆ ಎಂದು ಶಾಲೆಯಲ್ಲಿ ನೀಡುವ ಬಾಳೆಹಣ್ಣನ್ನೇ ನೀಡಲಿಲ್ಲ. ಕುರಿಮರಿ ಯಾರದ್ದೆಂದು ಪ್ರಶ್ನಿಸಿದ ಶಿಕ್ಷಕಿಗೇ ಕುರಿಯದ್ದೇ ಮರಿ ಅಂದಾಗ ಕಣ್ಣು ದೊಡ್ಡದಾಗಿ ನೋಡಿದ ಸನ್ನಿವೇಶ, ಎಲ್ಲ ವಿಚಾರಗಳನ್ನು ಹಾಸ್ಯಭರಿತವಾಗಿ ಹೇಳಿದ್ದಾನೆ. ಅಫ್ವಾನ್ ಮಾತಿಗೆ ಇಡೀ ಸಭೆ ನಗೆಗಡಲಲ್ಲಿ ತೇಲಿತ್ತು. ಈತನ ಮಾತುಗಳನ್ನು ಶಿಕ್ಷಕಿಯೊಬ್ಬರು ಮೊಬೈಲ್ ಮೂಲಕ ಚಿತ್ರೀಕರಿಸಿದ್ದರು.

ADVERTISEMENT

‘ಸರ್ಕಾರಿ ಶಾಲೆಯ ಮಕ್ಕಳು ಪ್ರತಿಭಾವಂತರು. ವೇದಿಕೆಗೆ ಅಂಜದೆ ಮಾತನಾಡಬೇಕೆಂದು ಎಲ್ಲಾ ವಿದ್ಯಾರ್ಥಿಗಳಿಗೆ ಹೇಳುತ್ತಾ ಬಂದಿದ್ದೇನೆ. ಯಾವುದೇ ವಿಷಯದ ಮೇಲಿನ ಭಾಷಣ ಅವರೊಳಗಿನ ಪ್ರತಿಭೆಯನ್ನು ಹೊರತರುವುದಿಲ್ಲ. ಅವರೊಳಗಿನ ಮಾತುಗಳು ಅಂಜಿಕೆಯಿಲ್ಲದೆ ಹೊರಬಂದಾಗ ಪ್ರತಿಭೆ ಅನ್ವೇಷಣೆ ಸಾಧ್ಯ. ಅದಕ್ಕಾಗಿ ಮೂವರು ವಿದ್ಯಾರ್ಥಿಗಳಿಗೆ ಅವಕಾಶ ಕೊಟ್ಟಿದ್ದೆವು. ಅದರಲ್ಲಿ ಅಫ್ವಾನ್ ದ್ವಿತೀಯ ಸ್ಥಾನವನ್ನು ಗಳಿಸಿದ್ದಾನೆ’ ಎಂದುದೇರಳಕಟ್ಟೆಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಆಲಿಸ ವಿಮಲಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.