ಮಂಗಳೂರು: ಪವಿತ್ರ ರಂಜಾನ್ ಮಾಸದ ವ್ರತಾಚರಣೆ ನಡೆಸಿದ ಮುಸ್ಲಿಮರು ಸೋಮವಾರ ಶ್ರದ್ಧೆ, ಭಕ್ತಿಯಿಂದ ಈದ್ ಉಲ್ ಫಿತ್ರ್ ಆಚರಿಸಿದರು.
ಬೆಳಗಿನಿಂದಲೇ ಜುಮ್ಮಾ ಮಸೀದಿ, ಈದ್ಗಾಗಳಲ್ಲಿ ಸಾಮೂಹಿಕ ಪ್ರಾರ್ಥನೆಗಳು, ವಿಶೇಷ ಪ್ರವಚನಗಳು ನೆರವೇರಿದವು.
ಮಕ್ಕಳು, ಹಿರಿಯರು ಹೊಸ ವಸ್ತ್ರ ಧರಿಸಿ ಪರಸ್ಪರ ಆಲಿಂಗನದ ಮೂಲಕ ಶುಭಾಶಯ ವಿನಿಮಯ ಮಾಡಿಕೊಂಡರು. ಸಂಬಂಧಿಕರು, ಸ್ನೇಹಿತರ ಮನೆಗೆ ತೆರಳಿ ಶುಭ ಕೋರಿದರು. ಎಲ್ಲೆಲ್ಲೂ ಹಬ್ಬದ ಸಂಭ್ರಮ ಮನೆಮಾಡಿತ್ತು.
ನಗರದ ಬಾವುಟಗುಡ್ಡೆಯ ಈದ್ಗಾ ಜುಮ್ಮಾ ಮಸೀದಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಅಲ್ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ಖುತ್ಬಾ ಪಾರಾಯಣ ನಡೆಸಿದರು.
ವಿಧಾನಸಭೆ ಅಧ್ಯಕ್ಷ ಯು.ಟಿ. ಖಾದರ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಈದ್ಗಾ ಮಸೀದಿಗೆ ಭೇಟಿ ನೀಡಿ ಶುಭಾಶಯ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.