
ನೆಲ್ಯಾಡಿ (ಉಪ್ಪಿನಂಗಡಿ): ಮಂಗಳೂರು-ಬೆಂಗಳೂರು ಸಂಪರ್ಕದ ರಾಷ್ಟ್ರೀಯ ಹೆದ್ದಾರಿ 75ರಲ್ಲಿ, ನೆಲ್ಯಾಡಿ-ಹೊಸಮಜಲು ಸಮೀಪದ ಮಣ್ಣಗುಂಡಿಯಿಂದ ಗುಂಡ್ಯ ವರೆಗಿನ ಹೆದ್ದಾರಿಯ ಎರಡೂ ಕಡೆಯಲ್ಲಿರುವ ಮೀಸಲು ರಕ್ಷಿತಾರಣ್ಯವಿರುವಲ್ಲಿ ಮಂಜೂರಾಗಿರುವ ಮೂರು ಆನೆದಾಟು ಯೋಜನೆಗಳಲ್ಲಿ ಪೆರಿಯಶಾಂತಿ ಮತ್ತು ಅಡ್ಡಹೊಳೆಯಲ್ಲಿ ಕಾಮಗಾರಿ ಪೂರ್ಣಗೊಂಡಿದೆ.
ಪೆರಿಯಶಾಂತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ರಸ್ತೆ ಮೇಲ್ಸೇತುವೆ ಮೇಲೆ ಹಾದು ಹೋಗುತ್ತದೆ. ಇದರ ಬದಿಯಲ್ಲಿ ನೆಲದ ಅಂತರದಲ್ಲಿ ಧರ್ಮಸ್ಥಳ-ಕುಕ್ಕೆ ಸುಬ್ರಹ್ಮಣ್ಯ ಸಂಪರ್ಕ ರಸ್ತೆ ಕವಲೊಡೆದು ಹಾದು ಹೋಗುತ್ತದೆ. ಇದರಿಂದ ಸುಮಾರು 300 ಮೀಟರ್ ದೂರಲ್ಲಿ ಹೆದ್ದಾರಿಯ ಎರಡೂ ಕಡೆ ಮೀಸಲು ರಕ್ಷಿತಾರಣ್ಯದ ಮಧ್ಯೆ ತೋಡು ಹರಿದು ಹೋಗುತ್ತಿದೆ. ಆನೆಗಳಿಗೆ ನೀರು ಕುಡಿಯಲು ಈ ತೋಡು ಉಪಯೋಗ ಆಗುವ ರೀತಿಯಲ್ಲಿ ಅಂಡರ್ ಪಾಸ್ ರೀತಿ ಆನೆ ದಾಟು ನಿರ್ಮಿಸಲಾಗಿದೆ. ಅಡ್ಡಹೊಳೆಯಲ್ಲಿಯೂ ಇದೇ ರೀತಿ ಆನೆ ದಾಟು ನಿರ್ಮಿಸಲಾಗಿದೆ.
12 ಅಡಿ ಎತ್ತರ, 70 ಮೀ ಅಗಲ: ಪೆರಿಯಶಾಂತಿಯಲ್ಲಿ ನಿರ್ಮಾಣವಾಗಿರುವ ಆನೆ ದಾಟು 12 ಅಡಿ ಎತ್ತರ ಮತ್ತು ಸುಮಾರು 70 ಮೀ ಅಗಲವಿದೆ. 3 ಕಡೆ ಪರಸ್ಪರ 15 ಮೀ ಅಂತರದಲ್ಲಿ ಪಿಲ್ಲರ್ ಅಳವಡಿಸಿ 3 ಹಂತಗಳಲ್ಲಿ ದಾಟು ನಿರ್ಮಿಸಲಾಗಿದೆ. ಆನೆಗಳು ಹಿಂಡುಗಳಾಗಿ ಸಹಜವಾಗಿ ಹಾದುಹೋಗುವುದಕ್ಕೂ ಇದು ಅನುಕೂಲಕರವಾಗಿದೆ ಎಂದು ಕಾಮಗಾರಿ ನಿರ್ವಹಿಸಿರುವ ಔತಾಡೆ ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದರು.
‘ಈ ಹಿಂದೆ ಮಣ್ಣಗುಂಡಿಯಿಂದ ಶಿರಾಡಿಯ ಅಡ್ಡಹೊಳೆವರೆಗೆ ಹತ್ತಾರು ಕಡೆ ಆನೆಗಳು ಅವುಗಳ ಪಾಡಿಗೆ ರಸ್ತೆ ದಾಟುತಿದ್ದವು. ಹೆದ್ದಾರಿ ಚತುಷ್ಪಥ ಕಾಮಗಾರಿ ಬಳಿಕ ಆನೆಗಳಿಗೆ ಮೊದಲಿನಂತೆ ನಿರಾತಂಕವಾಗಿ ರಸ್ತೆ ದಾಟಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಆನೆಗಳು ನೀರು, ಆಹಾರ ಸಿಗದ ಕಾರಣಕ್ಕಾಗಿ ಕೃಷಿ ತೋಟದೊಳಗೆ ನುಗ್ಗುತ್ತಿವೆ. ಇದು ಮಾನವ– ವನ್ಯಜೀವಿ ಸಂಘರ್ಷಕ್ಕೆ ಕಾರಣವಾಗುತ್ತಿದೆ. ಇದನ್ನು ತಪ್ಪಿಸಲು ಆನೆ ದಾಟು ಯೋಜನೆಯಿಂದ ಮಾತ್ರ ಸಾಧ್ಯ’ ಎಂಬುದು ಪರಿಸರ ಕಾರ್ಯಕರ್ತರ ಅಂಬೋಣ.
ಆನೆ ನಡೆದದ್ದೇ ದಾರಿ: ‘ಆನೆಗಳಿಗೆ ವಾಸನೆ ಶಕ್ತಿ ಅಧಿಕ ಇರುತ್ತದೆ. ಸೊಂಡಿಲಿನ ಮೂಲಕ ನೆಲ ಸ್ಪರ್ಶಿಸಿ ನೀರು ಎಲ್ಲಿ ಇದೆ ಎಂದು ಗ್ರಹಿಸುವ ಸಾಮಥ್ಯವನ್ನು ಅದು ಹೊಂದಿದೆ. ನೀರು ಮತ್ತು ಆಹಾರಕ್ಕಾಗಿ ಅತಿ ಹತ್ತಿರದ ದಾರಿಯನ್ನು ಅದು ಹುಡುಕುತ್ತಿರುತ್ತದೆ. ಆನೆಗಳು ಒಮ್ಮೆ ನೀರು, ಆಹಾರ ಹುಡುಕಿ ಹೋದಾಗ ಅವೆರಡೂ ಸಿಕ್ಕರೆ ಅದು ಮತ್ತೆ 100 ವರ್ಷ ಕಳೆದರೂ ಬೇರೆಲ್ಲೂ ನೀರು ಆಹಾರ ಸಿಗದಿದ್ದಾಗ ಅದೇ ಆನೆ ಆಗಬೇಕೆಂದಿಲ್ಲ, ಅದರ ವಂಶದ ಕುಡಿಯೂ ಆ ಜಾಗಕ್ಕೆ ಬಂದು ನೀರು ಅಥವಾ ಆಹಾರ ತಿಂದು ಹೋಗುತ್ತದೆ. ಈ ರೀತಿಯಾಗಿ ಮಣ್ಣಗುಂಡಿಯಿಂದ ಸಕಲೇಶಪುರ ತನಕವೂ ಅಲ್ಲಲ್ಲಿ ಆನೆ ದಾಟು ಅಗತ್ಯ ಇದೆ. ಇದು ಕೇವಲ ಆನೆ ದಾಟುವುದಕ್ಕೆ ಮಾತ್ರ ಅಲ್ಲ, ಕಾಡು ಪ್ರಾಣಿಗಳಾದ ಜಿಂಕೆ, ಕಡವೆ, ಕಾಡುಕೋಣಗಳಿಗೂ ಪ್ರಯೋಜನವಾಗಲಿದೆ‘ ಎನ್ನುತ್ತಾರೆ ವನ್ಯಜೀವ ಪರಿಣತ ಭುವನೇಶ್ ಕೈಕಂಬ.
‘ಬೇಕಾಗಿವೆ ಇನ್ನಷ್ಟು ಆನೆ ದಾಟುಗಳು’
‘ಉಪ್ಪಿನಂಗಡಿ ವಲಯ ಅರಣ್ಯ ವ್ಯಾಪ್ತಿಯಲ್ಲಿ ಕಳೆಂಜ ಶಿಶಿಲ ರೆಖ್ಯ ಪೋರ್ಕಳ ಗುಂಡ್ಯ ಶಿರಾಡಿ ಅಡ್ಡಹೊಳೆ ಬಂದಾರು ಪ್ರದೇಶದಲ್ಲಿ 10ಕ್ಕೂ ಅಧಿಕ ಆನೆಗಳು ಇವೆ. ಸುಮಾರು 4 ಹಿಂಡುಗಳಲ್ಲಿ ಹಂಚಿಹೋಗಿವೆ. ಅವುಗಳ ಮೂಲ ಈ ಪ್ರದೇಶವಲ್ಲ. ಪಂಜ ಸುಬ್ರಹ್ಮಣ್ಯ ವಲಯ ಅರಣ್ಯ ವ್ಯಾಪ್ತಿಯಿಂದಲೂ ಇಲ್ಲಿಗೆ ಬಂದು ಹೋಗುತ್ತಿರುತ್ತವೆ. ಹೀಗಾಗಿ ಹೆದ್ದಾರಿಯಲ್ಲಿ 3 ಕಡೆ ಆನೆ ದಾಟು ಮಾಡಿರುವುದು ಏನೇನೂ ಸಾಲದು. ಇನ್ನೂ ಕನಿಷ್ಠ 3 ಕಡೆಯಾದರೂ ನಿರ್ಮಿಸಬೇಕಾಗಿದೆ’ ಎನ್ನುತ್ತಾರೆ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ರಾಘವೇಂದ್ರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.