ADVERTISEMENT

ಕೊಂಕಣಿ ಪುಸ್ತಕ ಅನುದಾನಕ್ಕೆ ಹಸ್ತಪ್ರತಿ ಆಹ್ವಾನ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2025, 14:20 IST
Last Updated 20 ಮಾರ್ಚ್ 2025, 14:20 IST

ಮಂಗಳೂರು: ಕೊಂಕಣಿ ಸಾಹಿತ್ಯ ಕೃತಿಗಳನ್ನು ಪ್ರಕಟಿಸುವವರಿಗೆ ಪುಸ್ತಕ ಮುದ್ರಣಕ್ಕಾಗಿ ಆರ್ಥಿಕ ನೆರವು ಒದಗಿಸುವ ‘ವಿಶನ್ ಕೊಂಕಣಿ ಪುಸ್ತಕ ಅನುದಾನ’ ಯೋಜನೆಯನ್ನು ವಿಶ್ವ ಕೊಂಕಣಿ ಕೇಂದ್ರ ಆರಂಭಿಸಿದ್ದು, ಆಸಕ್ತ ಲೇಖಕರಿಂದ ಹಸ್ತಪ್ರತಿಗಳನ್ನು ಆಹ್ವಾನಿಸಲಾಗಿದೆ.

ವಿಶ್ವ ಕೊಂಕಣಿ ಕೇಂದ್ರದಲ್ಲಿ ಇತ್ತೀಚೆಗೆ ನಡೆದ ರವೀಂದ್ರ– ಮನೋಹರ್ ದರ್ಶನ್ ಕಾರ್ಯಕ್ರಮದಲ್ಲಿ ವಿಶ್ವ ಕೊಂಕಣಿ ಮೈಕಲ್ ಡಿಸೊಜ ವಿಶನ್ ಕೊಂಕಣಿ ಪುಸ್ತಕ ಅನುದಾನ ಕುರಿತ ಮಾಹಿತಿ ಪುಸ್ತಕವನ್ನು ಕೇಂದ್ರದ ಅಧ್ಯಕ್ಷ ನಂದಗೋಪಾಲ ಶೆಣೈ ಬಿಡುಗಡೆಗೊಳಿಸಿದರು. ಕಾರ್ಯಕ್ರಮದ ಪ್ರಧಾನ ಸಂಪಾದಕ ಎಚ್.ಎಂ. ಪೆರ್ನಾಲ್ ಯೋಜನೆಯ ಬಗ್ಗೆ ಮಾಹಿತಿ ನೀಡಿದರು. 

ವಿಶ್ವ ಕೊಂಕಣಿ ಕೇಂದ್ರದ ಉಸ್ತುವಾರಿಯಲ್ಲಿ ನಡೆಯುವ ಈ ಯೋಜನೆಯಡಿ ಕೊಂಕಣಿ ಲೇಖಕರಿಗೆ ಪುಸ್ತಕ ಪ್ರಕಟಿಸಲು ತಲಾ ₹40,000 ಮುದ್ರಣವೆಚ್ಚ ನೀಡಲಾಗುವುದು. ಲೇಖಕರ ಸ್ವಂತ ಕೃತಿಯಾಗಿದ್ದು ಕವಿತೆ, ಸಣ್ಣ ಕತೆ, ಪ್ರಬಂಧ, ಪ್ರವಾಸ ಕಥನ, ಮಕ್ಕಳ ಸಾಹಿತ್ಯ, ನಾಟಕ, ಕಾದಂಬರಿ ಹೀಗೆ ಎಲ್ಲಾ ಪ್ರಕಾರಗಳಿಗೂ ಯೋಜನೆ ಅನ್ವಯವಾಗುತ್ತದೆ.

ADVERTISEMENT

ಪುಸ್ತಕ ದೇವನಾಗರಿ, ಕನ್ನಡ ಅಥವಾ ರೊಮಿ ಲಿಪಿಯಲ್ಲಿ ಇರಬೇಕು. ಮಕ್ಕಳ ಸಾಹಿತ್ಯ ಕೃತಿಯಾದರೆ ಕನಿಷ್ಠ 49 ಪುಟ ಹಾಗೂ ಇತರ ಕೃತಿ ಕನಿಷ್ಠ 80 ಪುಟ ಇರಬೇಕು. ಆಸಕ್ತರು ಮುದ್ರಣಕ್ಕೆ ಸಿದ್ಧವಿರುವ ಸಾಹಿತ್ಯ ಕೃತಿಯ ಹಸ್ತಪ್ರತಿಯನ್ನು ಸಂಪಾದಕರು, ಎಂಡಿವಿಕೆ, ರಾಹುಲ್ ಎಡ್ವಟೈಸರ್ಸ್, 405, ಕುನಿಲ್ ಕಾಂಪ್ಲೆಕ್ಸ್, ಎರಡನೇ ಮಹಡಿ, ಬೆಂದೂರ್‌ವೆಲ್, ಮಂಗಳೂರು- 575 002 ಇಲ್ಲಿಗೆ ಕಳುಹಿಸಬಹುದು. ಪಿಡಿಎಫ್ ಪ್ರತಿಯನ್ನು ಇಮೇಲ್‌ ವಿಳಾಸ visionkonkani@gmail.com ಗೆ ಕಳುಹಿಸಬಹುದು.

ಪುಸ್ತಕಕ್ಕೆ ಐಎಸ್‌ಬಿಎನ್ ಕ್ರಮಾಂಕ ಪಡೆಯುವುದು ಲೇಖಕರ ಜವಾಬ್ದಾರಿ. ಈ ಯೋಜನೆಯಡಿ ಈಗಾಗಲೇ 21 ಪುಸ್ತಕಗಳು ಪ್ರಕಟವಾಗಿದ್ದು, ₹40 ಲಕ್ಷ ವೆಚ್ಚದ ಈ ಯೋಜನೆ 100 ಪುಸ್ತಕಗಳು ಪ್ರಕಟವಾಗುವವರೆಗೆ ಚಾಲ್ತಿಯಲ್ಲಿರುತ್ತದೆ. ಹೆಚ್ಚಿನ ವಿವರಗಳಿಗೆ ಮೊಬೈಲ್‌ ಸಂ. 9449770629 ಮೂಲಕ ಯೋಜನೆಯ ಸಂಪಾದಕ ಎಚ್. ಎಂ. ಪೆರ್ನಾಲ್ ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.