ADVERTISEMENT

ಕುಡುಪು ಗುಂಪು ಹಲ್ಲೆಯಿಂದ ಸಾವು ಪ್ರಕರಣ: ಮತ್ತೆ ಐವರ ಬಂಧನ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2025, 14:04 IST
Last Updated 30 ಏಪ್ರಿಲ್ 2025, 14:04 IST
ಮೊಹಮ್ಮದ್‌ ಅಶ್ರಫ್
ಮೊಹಮ್ಮದ್‌ ಅಶ್ರಫ್   

ಮಂಗಳೂರು: ನಗರದ ಹೊರವಲಯದ ಕುಡುಪುವಿನಲ್ಲಿ ಕೇರಳದ ವಯನಾಡ್ ಜಿಲ್ಲೆಯ ಮೊಹಮ್ಮದ್‌ ಅಶ್ರಫ್‌ (34) ಎಂಬವರ ಮೇಲೆ ಗುಂಪು ಹಲ್ಲೆ ನಡೆಸಿ ಕೊಲೆ ಮಾಡಿದ ಆರೋಪದಲ್ಲಿ ಮತ್ತೆ ಐವರನ್ನು ಬಂಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಬಂಧಿತರ ಸಂಖ್ಯೆ 20 ಆಗಿದೆ.

ಕೈಕಂಬದ ಪದವು ಮೇಗಿನ ಮನೆಯ ಯತಿರಾಜ್‌, ವಾಮಂಜೂರು ತಿರುವೈಲ್‌ನ ಸಚಿನ್, ಕುಲಶೇಖರ ಪದವು ಕೋಟಿಮುರದ ಅನಿಲ್‌, ಕುಡುಪು ಮಹಾಲಕ್ಷ್ಮಿ ನಿವಾಸದ ಸುಶಾಂತ್‌ ಮತ್ತು ಕುಡುಪು ದೇವಸ್ಥಾನ ಬಳಿಯ ಆದರ್ಶ ಬಂಧಿತರು ಎಂದು ಮಂಗಳೂರು ಪೊಲೀಸ್‌ ಕಮಿಷನರ್‌ ಅನುಪಮ್‌ ಅಗ್ರವಾಲ್‌ ತಿಳಿಸಿದ್ದಾರೆ. 

ಏ.27ರಂದು ಕುಡುಪು ಭಟ್ರ ಕಲ್ಲುರ್ಟಿ ದೈವಸ್ಥಾನದ ಸಮೀಪ ಮೈದಾನದಲ್ಲಿ ಕ್ರಿಕೆಟ್ ಪಂದ್ಯ ನಡೆದಿತ್ತು. ಅಲ್ಲಿ ಆರೋಪಿಗಳಿಗೂ ಅಶ್ರಫ್‌ಗೂ ಜಗಳವಾಗಿತ್ತು. ನಂತರ ಗುಂಪು ಅಶ್ರಫ್‌ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿತ್ತು. ಅವರ ಶವ ದೇವಸ್ಥಾನದ ಸಮೀಪದಲ್ಲಿ ಪತ್ತೆಯಾಗಿತ್ತು. 

ADVERTISEMENT

ಅಂತ್ಯಸಂಸ್ಕಾರ: ಮೊಹಮ್ಮದ್‌ ಅಶ್ರಫ್ ಅವರ ಸಹೋದರ ಅಬ್ದುಲ್ ಜಬ್ಬಾರ್ ಮತ್ತು ಸಂಬಂಧಿಕರು ಮಂಗಳವಾರ ತಡರಾತ್ರಿ ಮಂಗಳೂರು ತಲುಪಿದ್ದರು. ಮಹಜರು ನಂತರ ಮೃತಶರೀರವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಯಿತು. ನಂತರ ಬಂದರು ಸಮೀಪದ ಕೇಂದ್ರ ಜುಮಾ ಮಸೀದಿಯಲ್ಲಿ ಮೃತದೇಹದ ಸ್ನಾನ ಮಾಡಿಸಿ ಕಫನ್ ಬಟ್ಟೆ ತೊಡಿಸಿದ ನಂತರ ನಮಾಜ್ ನೆರವೇರಿಸಲಾಯಿತು.

ಅಶ್ರಫ್‌ ಜನಿಸಿದ ಊರು ಮಲಪ್ಪುರಂ ಜಿಲ್ಲೆಯ ಕೋಟಕ್ಕಲ್‌ನ ಪಾರಾಪ್ಪುರ್ ಚೋಲಕ್ಕುಂಡ್‌ ಜುಮಾ ಮಸೀದಿಯ ಕಬರಸ್ತಾನದಲ್ಲಿ ಬುಧವಾರ ಬೆಳಿಗ್ಗೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು ಎಂದು ಜಬ್ಬಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಎಸ್‌ಡಿಪಿಐ ಪ್ರತಿಭಟನೆ: ಹತ್ಯೆ ಪ್ರಕರಣ ಖಂಡಿಸಿ, ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ)ದವರು ಬುಧವಾರ ಇಲ್ಲಿ ಪ್ರತಿಭಟನೆ ನಡೆಸಿದರು. 

‘ಹತ್ಯೆ ಪ್ರಕರಣದಲ್ಲಿ ಮಾಜಿ ಕಾರ್ಪೊರೇಟರ್ ಪತಿ‌ ಭಾಗಿಯಾಗಿರುವ ಆರೋಪ ಇದ್ದು, ಆತನನ್ನು ಬಂಧಿಸಬೇಕು. ಮೃತನ ಕುಟುಂಬಕ್ಕೆ ರಾಜ್ಯ ಸರ್ಕಾರ ಪರಿಹಾರ ನೀಡಬೇಕು’ ಎಂದು ಎಸ್‌ಡಿಪಿಐ ಮಂಗಳೂರು ಘಟಕದ ಅಧ್ಯಕ್ಷ ಅಬ್ದುಲ್ ಜಲೀಲ್‌ ಆಗ್ರಹಿಸಿದರು.

ಮಂಗಳೂರಿನ ಕುಡುಪುವಿನಲ್ಲಿ ಗುಂಪು ಹಲ್ಲೆಯಿಂದ ಯುವಕ ಮೊಹಮ್ಮದ್‌ ಅಶ್ರಫ್ ಮೃತಪಟ್ಟಿರುವ ಪ್ರಕರಣ ಖಂಡಿಸಿ ತಪ್ಪಿತಸ್ಥರ  ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಮಂಗಳೂರು ಘಟಕದವರು ಬುಧವಾರ ಮಂಗಳೂರಿನ ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆಸಿದರು: ಪ್ರಜಾವಾಣಿ ಚಿತ್ರ
ಅಶ್ರಫ್ ಕುಟುಂಬಕ್ಕೆ ₹ 50 ಲಕ್ಷ ಪರಿಹಾರ ನೀಡಬೇಕು ಗ್ರಾಮಾಂತರ ಠಾಣೆಯ ಅಧಿಕಾರಿ ಸಿಬ್ಬಂದಿಯನ್ನು ಅಮಾನತು ಮಾಡಬೇಕು. ಗುಪ್ತಚರ ವಿಭಾಗದ ವೈಫಲ್ಯದ ಬಗ್ಗೆ ತನಿಖೆ ನಡೆಸಬೇಕು.
ಟಿ.ಎಂ ಶಾಹಿದ್ ತೆಕ್ಕಿಲ್ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ
ಣ್ಣನನ್ನು ಯಾಕೆ ಕೊಂದಿದ್ದಾರೆ ಗೊತ್ತಿಲ್ಲ. ಉದ್ವೇಗಕ್ಕೆ ಒಳಗಾಗಿ ಹೀಗಾಗಿರಬೇಕು. ಇಂಥ ಘಟನೆಗಳಿಂದ ಹೊರರಾಷ್ಟ್ರದಲ್ಲಿ ಭಾರತಕ್ಕೆ ಕೆಟ್ಟ ಹೆಸರು ಬರುತ್ತದೆ ಎಂಬುದನ್ನು ಎಲ್ಲರೂ ತಿಳಿದುಕೊಳ್ಳಬೇಕು.
ಅಬ್ದುಲ್ ಜಬ್ಬಾರ್ ಕೊಲೆಯಾದ ಅಶ್ರಫ್ ಸಹೋದರ

‘ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಹುನ್ನಾರ’

‘ಕೋಮು ಸಂಘರ್ಷ ಹುಟ್ಟು ಹಾಕುವ ಮೂಲಕ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಪಟ್ಟಭದ್ರ ಹಿತಾಸಕ್ತಿಗಳು ಮುಂದಾಗಿವೆ. ಈ ಹುನ್ನಾರದ ಬಗ್ಗೆ ಜನರು ಎಚ್ಚೆತ್ತುಕೊಳ್ಳಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಎಕ್ಸ್‌ನಲ್ಲಿ ಪೋಸ್ಟ್ ಹಾಕಿರುವ ಅವರು ‘ಅಶ್ರಫ್ ಹತ್ಯೆ ಸಮಾಜದ ಶಾಂತಿ ಕದಡುವ ದುಷ್ಟಶಕ್ತಿಗಳ ಕೃತ್ಯ. ಸಾಮರಸ್ಯ ಮತ್ತು ಭಾವೈಕ್ಯದ ನೆಲೆಯಾಗಿದ್ದ ದಕ್ಷಿಣ ಕನ್ನಡದ ಕೋಮು ಸೌರ್ಹಾದಕ್ಕೆ ಕೊಳ್ಳಿ ಇಡಲು ಯತ್ನಿಸಿದ ದುಷ್ಕರ್ಮಿಗಳ ಹೆಡೆಮುರಿ ಕಟ್ಟಲಾಗುವುದು’ ಎಂದು ಹೇಳಿದ್ದಾರೆ. 

ಬಿಜೆಪಿಯವರ ಕೋಮು ಪ್ರಚೋದನೆಯೇ ಕಾರಣ: ಕಾಂಗ್ರೆಸ್

‘ಬಿಜೆಪಿಯವರ ಕೋಮು ಪ್ರಚೋದನೆಯಿಂದಾಗಿ ಜಿಲ್ಲೆಯಲ್ಲಿ ಯುವಜನರು ತಪ್ಪುದಾರಿ ತುಳಿಯುತ್ತಿದ್ದಾರೆ. ಈ ಪ್ರಕರಣವೂ ಬಿಜೆಪಿ ಕಾರ್ಯಕರ್ತನ ಪ್ರಚೋದನೆಯಿಂದಲೇ ನಡೆದಿದೆ. ಇದರಲ್ಲಿ ಪೊಲೀಸ್ ಇಲಾಖೆಯ ವೈಫಲ್ಯವೂ ಇದೆ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ  ಹರೀಶ್‌ಕುಮಾರ್ ಕೆ. ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಇಲ್ಲಿ ಮಾತನಾಡಿದ ಅವರು ‘ಹಿಂದುಳಿದ ವರ್ಗದ ಯುವಕರನ್ನು ಪ್ರಚೋದಿಸುವ ಕೆಲಸ ಈ ಹಿಂದಿನಿಂದಲೂ ಬಿಜೆಪಿಯಿಂದ ನಡೆಯುತ್ತಿದೆ. ಅವರಿಗೆ ಬಜರಂಗದಳ ಮತ್ತಿತರ ವ್ಯವಸ್ಥೆ ಅಡಿಯಲ್ಲಿ ತರಬೇತಿ ನೀಡಲಾಗುತ್ತಿದೆ. ಪರಿಣಾಮವಾಗಿ ಹಲವಾರು ಯುವಕರು ಈಗಲೂ ಜೈಲಿನಲ್ಲಿದ್ದಾರೆ. ಕಾನೂನು ಕುಣಿಕೆಯಲ್ಲಿ ಸಿಲುಕಿಕೊಂಡು ಜೀವನ ಹಾಳು ಮಾಡಿಕೊಂಡಿದ್ದಾರೆ. ಅವರನ್ನೇ ಅವಲಂಬಿಸಿರುವ ಕುಟುಂಬಗಳು ಕಷ್ಟಕ್ಕೆ ಸಿಲುಕಿವೆ. ಬಿಜೆಪಿಯ ಈ ನಡೆ ಅಕ್ಷಮ್ಯ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.