ADVERTISEMENT

ಮಾಜಿ ಸಚಿವ ಅಮರನಾಥ ಶೆಟ್ಟಿ ನಿಧನ

​ಪ್ರಜಾವಾಣಿ ವಾರ್ತೆ
Published 27 ಜನವರಿ 2020, 4:07 IST
Last Updated 27 ಜನವರಿ 2020, 4:07 IST
   

ಮಂಗಳೂರು:ಹಿರಿಯ ಸಹಕಾರಿ, ಜೆಡಿಎಸ್ ನಾಯಕ,ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ (81) ಸೋಮವಾರ ಮುಂಜಾನೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅಮರನಾಥ ಶೆಟ್ಟಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಅಮರನಾಥ ಶೆಟ್ಟಿ ಅವರು ಹಲವು ದಶಕಗಳಿಂದ ಜನತಾ ಪರಿವಾರದಲ್ಲೇ ಸಕ್ರಿಯರಾಗಿದ್ದರು. ರಾಮಕೃಷ್ಣ ಹೆಗಡೆ ಮತ್ತು ಜೆ.ಎಚ್.ಪಟೇಲ್ ಅವರ ಸಂಪುಟಗಳಲ್ಲಿ ಸಚಿವರಾಗಿ ಕೆಲಸ ಮಾಡಿದ್ದರು. ಬೇರೆ ಪಕ್ಷಗಳಿಂದ ಆಹ್ವಾನ ಬಂದರೂ ಕೊನೆಯ ದಿನದವರೆಗೂ ಜೆಡಿಎಸ್ ಪಕ್ಷದಲ್ಲೇ ಉಳಿದುಕೊಂಡಿದ್ದರು.

ADVERTISEMENT

ಆಳ್ವಾಸ್ ಶಿಕ್ಷಣ ಸಂಸ್ಥೆಯಟ್ರಸ್ಟಿ ಆಗಿದ್ದಅಮರನಾಥ ಶೆಟ್ಟಿ 1965ರಲ್ಲಿ ರಾಜಕಾರಣ ಪ್ರವೇಶಿಸಿದರು. ಪಾಲಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದರು. ಮೂಡುಬಿದ್ರಿ ಕ್ಷೇತ್ರದಿಂದ 1983ರಲ್ಲಿ ಶಾಸಕರಾಗಿ ವಿಧಾನಸಭೆ ಪ್ರವೇಶಸಿದರು. 1987 ಮತ್ತು 1994ರಲ್ಲಿ ಅದೇ ಕ್ಷೇತ್ರದಿಂದ ಜಯಗಳಿಸಿದ್ದರು. ಪ್ರವಾಸೋದ್ಯಮ ಮತ್ತು ಕಾರ್ಮಿಕ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

‘ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯ ಅಮರನಾಥ ಶೆಟ್ಟಿ ಅವರು ನಮ್ಮನ್ನು ಅಗಲಿದ ವಿಚಾರ ಕೇಳಿ ತೀವ್ರ ದುಃಖವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬ ವರ್ಗಕ್ಕೆ ಭಗವಂತ ಈ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಜೆಡಿಎಸ್ ನಾಯಕ ಎಚ್.ಡಿ.ದೇವೇಗೌಡ ಟ್ವೀಟ್ ಮಾಡಿದ್ದಾರೆ.

‘ಮಾಜಿ ಸಚಿವರು ಹಾಗೂ ಮೃದು ಮನಸ್ಸಿನ ಸರಳ ರಾಜಕಾರಣಿಯಾಗಿರುವ ನಮ್ಮ ಪಕ್ಷದ ಹಿರಿಯ ಮುಖಂಡರಾದ ಅಮರನಾಥ ಶೆಟ್ಟಿಯವರು ವಿಧಿವಶರಾಗಿರುವುದು ತೀವ್ರ ದುಃಖ ತಂದಿದೆ’ ಎಂದು ಜೆಡಿಎಸ್ ನಾಯಕ ಎಚ್‌.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.