ADVERTISEMENT

ವಂಚನೆ ಆರೋಪಿ ಜಾಮೀನು ರದ್ದತಿ ಕೋರಿ ಅರ್ಜಿ

ಕಲ್ಲಡ್ಕದಲ್ಲಿ ಜ.24ರಂದು ಮಗುವಿಗೆ ನಾಮಕರಣ: ಪ್ರತಿಭಾ ಕುಳಾಯಿ

​ಪ್ರಜಾವಾಣಿ ವಾರ್ತೆ
Published 3 ಜನವರಿ 2026, 6:06 IST
Last Updated 3 ಜನವರಿ 2026, 6:06 IST
ಪ್ರತಿಭಾ ಕುಳಾಯಿ 
ಪ್ರತಿಭಾ ಕುಳಾಯಿ    

ಮಂಗಳೂರು: ಸಹಪಾಠಿ‌ ಯುವತಿಯೊಂದಿಗೆ ಸ್ನೇಹ ಬೆಳೆಸಿ, ಆಕೆ ತಾಯಿಯಾಗುವಂತೆ ಮಾಡಿ, ವಂಚಿಸಿದ ಆರೋಪಿ ಪುತ್ತೂರು ಬಪ್ಪಳಿಗೆಯ ಕೃಷ್ಣ ಜೆ.‌ ರಾವ್‌ಗೆ ನ್ಯಾಯಾಲಯ ನೀಡಿರುವ ಜಾಮೀನು ರದ್ದುಗೊಳಿಸುವಂತೆ ಕೋರಿ ಅರ್ಜಿ ಸಲ್ಲಿಸಲಾಗುವುದು. ಸಂಧಾನದ ಬಾಗಿಲು ಮುಚ್ಚಿದ್ದು, ಪೂರಕ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸದಸ್ಯೆ ಪ್ರತಿಭಾ ಕುಳಾಯಿ ಹೇಳಿದರು. 

ಸಂತ್ರಸ್ತ ಯುವತಿ ಹಾಗೂ ಅವರ ಕುಟುಂಬಸ್ಥರೊಡಗೂಡಿ ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಂಚಿಸಿರುವ ಆರೋಪಿ, ಸಂತ್ರಸ್ತ ಯುವತಿಯನ್ನು ಮದುವೆಯಾಗಲು ಒಪ್ಪುತ್ತಿಲ್ಲ. ಹಿಂದುತ್ವದ ಬಗ್ಗೆ ಮಾತನಾಡುವ ಹಿಂದುತ್ವವಾದಿ ಮುಖಂಡರೂ ಸಂತ್ರಸ್ತ ಯುವತಿಯ ನೆರವಿಗೆ ಬರುತ್ತಿಲ್ಲ. ಮಗುವಿಗೆ ಆರು ತಿಂಗಳು ಕಳೆದಿದ್ದು, ಈ ಮಗುವಿನ ನಾಮಕರಣ ಶಾಸ್ತ್ರವನ್ನು ಜ.24ರಂದು ಕಲ್ಲಡ್ಕದಲ್ಲಿ ನಡೆಸಲಾಗುವುದು. ಎಲ್ಲ ಸಮುದಾಯದವರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುವುದು’ ಎಂದರು. 

‘ಮಗುವಿನ ತಂದೆ ಕೃಷ್ಣ ಜೆ. ರಾವ್ ಎಂಬುದು ಡಿಎನ್‌ಎ ಪರೀಕ್ಷೆಯಿಂದ ಸಾಬೀತಾಗಿದೆ. ಆತ ಜೈಲ್‌ನಿಂದ ಹೊರ ಬಂದ ಮೇಲೆ ಮದುವೆಯಾಗುವ ನಿರ್ಧಾರ ಕೈಗೊಳ್ಳಬಹುದೆಂದು ಕೆಲಕಾಲ ಕಾದೆವು. ಆದರೆ, ಸಕಾರಾತ್ಮಕ ಫಲಿತಾಂಶ ದೊರೆತಿಲ್ಲ. ಮದುವೆಯಾಗುವ ಬದಲಾಗಿ, ಸಂತ್ರಸ್ತ ಯುವತಿಯ ಕುಟುಂಬಕ್ಕೆ ₹50 ಲಕ್ಷ ಪರಿಹಾರ ನೀಡುವ ಆಮಿಷವೊಡ್ಡಿ ಸಂಧಾನ ಮಾತುಕತೆಗೆ ಮುಂದಾಗಿದ್ದಾರೆ. ಮಗುವನ್ನು ಸಾಂತ್ವನ ಕೇಂದ್ರಕ್ಕೆ ನೀಡಬೇಕು, ಆತನ ವಿರುದ್ಧ ದಾಖಲಿಸಿರುವ ಪ್ರಕರಣ ವಾಪಸ್‌ ಪಡೆಯಬೇಕು. ಆಗ ಮಾತ್ರ ಕೃಷ್ಣ ರಾವ್ ಆಕೆಯನ್ನು ಮದುವೆಯಾಗಿ ನಂತರ ವಿಚ್ಛೇದನ ಪಡೆದುಕೊಳ್ಳಬಹುದು ಎಂಬ ಷರತ್ತು ಮುಂದಿಟ್ಟಿದ್ದಾರೆ. ಇದಕ್ಕೆ ಸಂತ್ರಸ್ತ ಯುವತಿ ಮತ್ತು ಅವರ ಕುಟುಂಬದವರ ಒಪ್ಪಿಗೆ ನೀಡಿಲ್ಲ’ ಎಂದರು.

ADVERTISEMENT

‘ಕೃಷ್ಣ ರಾವ್ ಸಂತ್ರಸ್ತ ಯುವತಿಯನ್ನು ಮದುವೆಯಾಗಿ ಮನೆ ಅಳಿಯನಾದರೆ ನಾನೇ ಆತನಿಗೆ ₹50 ಲಕ್ಷ ಕೊಡುತ್ತೇನೆ’ ಎಂದು ಪ್ರತಿಭಾ ಕುಳಾಯಿ ಹೇಳಿದರು. 

‘ಸಂತ್ರಸ್ತ ಯುವತಿ ಮತ್ತು ಕೃಷ್ಣ ರಾವ್ ಎಂಟು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಈಗ ಯಾವ ಕಾರಣಕ್ಕೆ ಆತ ಮದುವೆಯಾಗುತ್ತಿಲ್ಲ ಎಂದು ಹೇಳುತ್ತಿದ್ದಾನೆ ಗೊತ್ತಿಲ್ಲ. ಈವರೆಗೂ ಮಾತುಕತೆಗೆ ಆತನ ಪಾಲಕರು ಬಂದಿದ್ದಾರೆಯೇ ವಿನಾ, ಆತ ಒಮ್ಮೆಯೂ ಬಂದಿಲ್ಲ. ಜೀವನದಲ್ಲಿ ತೀರಾ ನೊಂದಿರುವ ಸಂತ್ರಸ್ತ ಯುವತಿ ಇತ್ತೀಚೆಗೆ ಆತ್ಮಹತ್ಯೆಗೆ ಯತ್ನಿಸಿದ್ದಳು. ಆಕೆಗೆ ನಾವೆಲ್ಲ ನೈತಿಕ ಬೆಂಬಲ ನೀಡಿ, ಧೈರ್ಯ ತುಂಬಿದ್ದೇವೆ’ ಎಂದು ಹೇಳಿದರು. 

ಅರುಣ್ ಕುಮಾರ್ ಪುತ್ತಿಲ ಇತ್ತೀಚೆಗೆ ಅದ್ಧೂರಿಯಾಗಿ ಶ್ರೀನಿವಾಸ ಕಲ್ಯಾಣ ಕಾರ್ಯಕ್ರಮ ನಡೆಸಿದ್ದಾರೆ. ಪುತ್ತಿಲ ಮುಂಚೂಣಿಯಲ್ಲಿದ್ದು ಸಂತ್ರಸ್ತ ಯುವತಿ ಮತ್ತು ಆರೋಪಿಯ ಮದುವೆ ಮಾಡಿಲಿ ಎಂದರು. 

ನಾನು ತಪ್ಪು ಮಾಡಿರುವುದು ಅರಿವಾಗಿದೆ. ಈಗ ಮಗುವಿನ ತಂದೆ ಯಾರೆಂದು ಕೇಳಿದರೆ ಏನು ಹೇಳಬೇಕು. ನಾವಿಬ್ಬರು ಪರಸ್ಪರ ಪ್ರೀತಿಸಿದ್ದು ಆತ ಮದುವೆಯಾಗಬೇಕು.
– ಸಂತ್ರಸ್ತ ಯುವತಿ
ನನ್ನ ಮಗಳಿಂದ ತಪ್ಪಾಗಿದೆ. ಆದರೆ ಡಿಎನ್‌ಎ ಪರೀಕ್ಷೆಯಲ್ಲಿ ಮಗು ಯಾರದೆಂದು ಸಾಬೀತಾಗಿದೆ. ಆತ ನನ್ನ ಮಗಳನ್ನು ಮದುವೆಯಾಗಿ ಸಂಸಾರ ನಡೆಸಬೇಕು. ನಮಗೆ ನ್ಯಾಯ ಬೇಕು.
– ಸಂತ್ರಸ್ತ ಯುವತಿಯ ತಾಯಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.