15ಪಿಟಿಆರ್1 : ಪುತ್ತೂರಿನ ತೆಂಕಿಲದ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಬುಧವಾರ ಗಾಂಧೀ ಜಯಂತಿ ಸಂಭ್ರಮಾಚರಣೆಯ ಪ್ರಯುಕ್ತ ನಡೆದ `ಗಾಂಧಿಸ್ಮೃತಿ ಮತ್ತು ಬೃಹತ್ ಜನಜಾಗೃತಿ ಸಮಾವೇಶ' ವನ್ನು ಧರ್ಮಸ್ಥಳ ಕ್ಷೇತ್ರದ ಧಮರ್ಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ಉದ್ಘಾಟಿಸಿದರು.
ಪುತ್ತೂರು: ಬದುಕಿನಲ್ಲಿ ಎದುರಾಗುವ ಮಾನಸಿಕ ಒತ್ತಡಗಳ ನಿವಾರಣೆಗೆ ಮದ್ಯಪಾನ ಮಾಡುವುದು ಪರಿಹಾರವಲ್ಲ. ಪಂಚೇಂದ್ರಿಗಳನ್ನು ಹತೋಟಿಯಲ್ಲಿ ಇಡುವ ಕಾರ್ಯ ಮಾಡಬೇಕು. ವ್ಯಸನ ಮುಕ್ತ ಆಗುವುದರಿಂದ ಸಂಸಾರಿಕ ನೆಮ್ಮದಿ ಸಿಗುತ್ತದೆ’ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹೇಳಿದರು.
ನಗರದ ತೆಂಕಿಲದ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಬುಧವಾರ ಧರ್ಮಸ್ಥಳ ಗ್ರಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ವತಿಯಿಂದ ಗಾಂಧಿ ಜಯಂತಿ ಪ್ರಯುಕ್ತ ನಡೆದ ಜಿಲ್ಲಾ ಮಟ್ಟದ ‘ಗಾಂಧಿಸ್ಮೃತಿ ಮತ್ತು ಬೃಹತ್ ಜನಜಾಗೃತಿ ಸಮಾವೇಶ' ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿನ ಮದ್ಯವ್ಯಸನಿಗಳನ್ನು ವ್ಯಸನದಿಂದ ದೂರ ಮಾಡುವುದು ಪುಣ್ಯದ ಕಾರ್ಯ. ಇದರಿಂದ ಲಕ್ಷಾಂತರ ಮಂದಿ ಉತ್ತಮ ಬದುಕು ಕಟ್ಟಿಕೊಂಡಿದ್ದಾರೆ. ಸಿನಿಮಾ, ನಾಟಕಗಳ ಹಾಸ್ಯ ಪಾತ್ರಗಳಲ್ಲಿ ಕುಡುಕರೇ ಅಪಹಾಸ್ಯಕ್ಕೊಳಗಾಗುತ್ತಿದ್ದು, ಎಚ್ಚೆತ್ತುಕೊಳ್ಳದಿದ್ದರೆ ಬದುಕೇ ಹಾಸ್ಯಾಸ್ಪದವಾಗುತ್ತದೆ. ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ದುಶ್ಚಟಗಳ ವಿರುದ್ಧ ಜಾಗೃತಿಯ ಎಚ್ಚರಿಕೆ ನೀಡಿದವರು ರಾಷ್ಟ್ರಪಿತ ಮಹಾತ್ಮಾಗಾಂಧಿ. ಯೋಜನೆಯ ಎಲ್ಲಾ ಕಲ್ಪನೆಗಳಿಗೆ ಗಾಂಧೀಜಿಯವರ ಕನಸುಗಳೇ ಪ್ರೇರಣೆ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಎಸ್.ಎಸ್., ಗಾಂಧಿ ಅವರ ಕಲ್ಪನೆ, ಕನಸುಗಳನ್ನು ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಅವರು ಸಮಾಜದಲ್ಲಿ ಸಾಕ್ಷೀಕರಿಸಿದ್ದಾರೆ. ಗ್ರಾಮೀಣ ಬದುಕಿನ ಸರ್ವಾಂಗೀಣ ಅಭಿವೃದ್ಧಿಗೆ ಮುನ್ನುಡಿ ಬರೆದಿದ್ದಾರೆ. ಮಹಿಳಾ ಸಬಲೀಕರಣದ ಗಾಂಧಿ ಚಿಂತನೆ, ಸ್ವಉದ್ಯೋಗ ಕಲ್ಪನೆ, ಭಜನಾ ಸಂಸ್ಕೃತಿ, ಶಿಕ್ಷಣದ ಕನಸುಗಳನ್ನು ಅವರು ಸಾಕಾರಗೊಳಿಸಿದ್ದಾರೆ. ಆ ಮೂಲಕ ಧರ್ಮಸ್ಥಳ ಒಂದು ಪ್ರಯೋಗಶಾಲೆಯಾಗಿ ಬದಲಾಗಿದೆ ಎಂದರು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ಪದ್ಮನಾಭ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ಮಾಜಿ ಶಾಸಕ ಸಂಜೀವ ಮಠಂದೂರು, ಜನಜಾಗೃತಿ ವೇದಿಕೆಯ ರಾಜ್ಯ ಸಂಘಟನಾಧ್ಯಕ್ಷ ನಟರಾಜ ಬಾದಾಮಿ ಮಾತನಾಡಿದರು. ಪಾನಮುಕ್ತ ನವಜೀವನ ಸಮಿತಿಯ ಕೆ.ಭಾಸ್ಕರ ಮೂಲ್ಯ ಕೆದಿಲ, ಶೈಲಜಾ ವಸಂತ ಬನ್ನೂರು ಅನಿಸಿಕೆ ವ್ಯಕ್ತಪಡಿಸಿದರು.
ಪುತ್ತೂರು ನಗರಸಭೆಯ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ಮಾಜಿ ಶಾಸಕ ರುಕ್ಮಯ ಪೂಜಾರಿ, ಜನಜಾಗೃತಿ ವೇದಿಕೆಯ ಮಾಜಿ ಜಿಲ್ಲಾಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಪ್ರಮುಖರಾದ ಎ.ಸಿ ಭಂಡಾರಿ, ಶಶಿಕುಮಾರ್ ಬಾಲ್ಯೊಟ್ಟು, ರವಿ ಮುಂಗ್ಲಿಮನೆ, ವಸಂತ ಸಾಲಿಯಾನ್, ಜನಜಾಗೃತಿ ವೇದಿಕೆಯ ವಿವಿಧ ತಾಲ್ಲೂಕು ಘಟಕಗಳ ಅಧ್ಯಕ್ಷರಾದ ಲೋಕೇಶ್ ಹೆಗ್ಡೆ, ಮಹೇಶ್ ಸವಣೂರು, ಲೋಕನಾಥ್, ಖಾಸಿಂ, ರೊನಾಲ್ಡ್, ಅಖಿಲೇಶ್, ಜಯಪ್ರಕಾಶ್, ಸುಭಾಶ್ಚಂದ್ರ, ಮಹಮ್ಮದ್ ಇಸ್ಮಾಯಿಲ್, ಎನ್.ಎ.ರಾಮಚಂದ್ರ, ಶಾರದಾ ಉಪಸ್ಥಿತರಿದ್ದರು.
ನವ್ಯಾ ಆಚಾರ್ಯ ಪ್ರಾರ್ಥಿಸಿದರು. ಯೋಜನೆಯ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ಸ್ವಾಗತಿಸಿದರು. ಜಿಲ್ಲಾ ನಿರ್ದೇಶಕ ಬಾಬು ನಾಯ್ಕ ವಂದಿಸಿದರು. ಉಡುಪಿ ಕರಾವಳಿ ಪ್ರಾದೇಶಿಕ ಕಚೇರಿಯ ಯೋಜನಾಧಿಕಾರಿ ಗಣೇಶ್ ಆಚಾರ್ಯ, ಬಾಲಕೃಷ್ಣ ಅಳ್ವ ಮಾಣಿ ನಿರೂಪಿಸಿದರು.
ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಅನೇಕ ಜನಪರ ಕಾರ್ಯಕ್ರಮ ನಡೆಸಲಾಗುತ್ತಿದ್ದು ಅದರಲ್ಲಿ ಮದ್ಯವರ್ಜನಾ ಶಿಬಿರ ಆಯೋಜನೆ ನನಗೆ ಅತ್ಯಂತ ತೃಪ್ತಿ ತಂದ ಕೆಲಸವಾಗಿದೆ. ವ್ಯಸನಮುಕ್ತರಾದ 1 ಸಾವಿರ ಜನರಿಗೆ ಸ್ವಉದ್ಯೋಗ ತರಬೇತಿಯನ್ನೂ ನೀಡಲಾಗಿದೆ.ವೀರೇಂದ್ರ ಹೆಗ್ಗಡೆ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ
ವಿವಿಧ ಸವಲತ್ತು ವಿತರಣೆ
ಠರಾವು ಮಂಡನೆ ಬನ್ನೂರು ಶಾಲಾ ಆವರಣ ಗೋಡೆ ನಿರ್ಮಾಣಕ್ಕೆ ಅನುದಾನ ಆರ್ಯಾಪು ಸುಶೀಲ ಅವರಿಗೆ ಮಾಸಾಶನ ಪ್ರತೀಕ್ಷಾ ಅವರಿಗೆ ಶಿಷ್ಯವೇತನ ಅಝ್ವಿನಾ ಸಮೀಕ್ಷಾ ಅವರಿಗೆ ಸುಜ್ಞಾನ ನಿಧಿ ಸಂಕಮ್ಮ ಅವರ ಕುಟುಂಬಕ್ಕೆ ಸಲಕರಣೆ ವಿತರಣೆ ಮಾಡಲಾಯಿತು. ರಾಜ್ಯದಲ್ಲಿ ಪಾನ ನಿಷೇಧ ಜಾರಿಗೊಳಿಸಬೇಕು. ಮದ್ಯಪಾನದ ಕುರಿತು ಮಕ್ಕಳಿಗೆ ಜಾಗೃತಿ ಶಿಕ್ಷಣ ನೀಡಬೇಕು. ಗ್ರಾಮಾಂತರ ಪ್ರದೇಶಗಳಲ್ಲಿ ಹೊಸತಾಗಿ ಬಾರ್ ಹಾಗೂ ಮದ್ಯದಂಗಡಿ ತೆರೆಯಲು ಹಾಗೂ ನಗರ ಪ್ರದೇಶದ ಮದ್ಯದಂಗಡಿಗಳನ್ನು ಗ್ರಾಮಾಂತರ ಪ್ರದೇಶಕ್ಕೆ ಸ್ಥಳಾಂತರ ಮಾಡಲು ಅವಕಾಶ ನೀಡಬಾರದು ಎಂದು ಠರಾವು ಮಂಡಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.