ADVERTISEMENT

ಕರಾವಳಿಯಲ್ಲಿ ಕಪ್ಪೆಗಳ ಶೋಧ ಚುರುಕು

ವಿಕ್ರಂ ಕಾಂತಿಕೆರೆ
Published 27 ಅಕ್ಟೋಬರ್ 2025, 5:55 IST
Last Updated 27 ಅಕ್ಟೋಬರ್ 2025, 5:55 IST
ರೆಡಿಷ್ ನ್ಯಾರೊ ಮೌತ್ಡ್‌ ಕಪ್ಪೆ
ರೆಡಿಷ್ ನ್ಯಾರೊ ಮೌತ್ಡ್‌ ಕಪ್ಪೆ   

ಮಂಗಳೂರು: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗ ಕಪ್ಪೆಗಳ ಪ್ರಬೇಧಗಳ ಬಗ್ಗೆ ಮಾಹಿತಿ ಕಲೆ ಹಾಕುವ ಕಾರ್ಯಕ್ಕೆ ಒತ್ತು ನೀಡಲಾಗುತ್ತಿದೆ. ಇದರ ಪರಿಣಾಮ, ಪಶ್ಚಿಮ ಘಟ್ಟದಲ್ಲಿ ಕಾಣಸಿಗುವ ಕಪ್ಪೆಗಳೂ ಸೇರಿದಂತೆ ಅನೇಕ ಪ್ರಬೇಧಗಳು ಸಂಶೋಧಕರ ಕಣ್ಣಿಗೆ ಬಿದ್ದಿವೆ.

ಮೂಡುಬಿದಿರೆ ಸಮೀಪದ ಬೆಳುವಾಯಿಯ ಸಮ್ಮಿಲನ ಶೆಟ್ಟಿ ಚಿಟ್ಟೆ ಪಾರ್ಕ್ ಮತ್ತು ಕಾರ್ಕಳ ಸಮೀಪದ ಕಾಂತಾವರ ವನದಲ್ಲಿ ಆಯೋಜಿಸಿದ್ದ ಅಧ್ಯಯನ ಕಾರ್ಯಾಗಾರಗಳಲ್ಲಿ ಒಟ್ಟಾರೆ 15ಕ್ಕೂ ಅಧಿಕ ಪ್ರಬೇಧದ ಕಪ್ಪೆಗಳನ್ನು ಗುರುತಿಸಲಾಗಿದ್ದು ಭವಿಷ್ಯದ ಅಧ್ಯಯನಕ್ಕೆ ಇದು ನೆರವಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಜಲಮೂಲಗಳನ್ನು ಮುಚ್ಚುವುದು ಸೇರಿದಂತೆ ಅನೇಕ ಕಾಮಗಾರಿಗಳು ಕಪ್ಪೆಗಳ ಸಂತತಿಗೆ ತೀವ್ರ ಸಂಕಷ್ಟ ಉಂಟುಮಾಡುತ್ತಿವೆ ಎಂಬ ಎಚ್ಚರಿಕೆಯ ಧ್ವನಿಯೂ ಮೊಳಗಿದೆ.  

ಕಾಂತಾವರದಲ್ಲಿ ಈಚೆಗೆ ವನ ಚಾರಿಟಬಲ್‌ ಟ್ರಸ್ಟ್‌ ಏರ್ಪಡಿಸಿದ್ದ ಎರಡು ದಿನಗಳ ಕಾರ್ಯಾಗಾರದಲ್ಲಿ 12 ಪ್ರಬೇಧಗಳು ಪತ್ತೆಯಾಗಿವೆ. ಇವುಗಳಲ್ಲಿ ಬಹುತೇಕ ಪಶ್ಚಿಮ ಘಟ್ಟದಲ್ಲಿ ಕಾಣಸಿಗುವಂತವು. ಆದರೆ ಸಣ್ಣ ವ್ಯಾಪ್ತಿಯಲ್ಲಿ ಇಷ್ಟು ದೊಡ್ಡ ಸಂಖ್ಯೆಯ ಪ್ರಬೇಧಗಳು ಕಾಣಲು ಸಿಕ್ಕಿದ್ದು ವಿಶೇಷ ಎಂಬುದು ಪಾಲ್ಗೊಂಡವರ ಅಂಬೋಣ. ಇಲ್ಲಿ ರೆಡಿಷ್‌ ನ್ಯಾರೊ ಮೌತ್ಡ್‌, ವೆಸ್ಟರ್ನ್‌ ಟ್ರೀ, ಮಂಗಳೂರು ಬರೋವಿಂಗ್‌, ನಾಗರ್‌ಕೋಯಿಲ್ ವೈಪಿಂಗ್‌, ಇಂಡಿಯನ್‌ ಡಾಟ್, ಇಂಡಿಯನ್ ಸ್ಕಿಟರಿಂಗ್‌ ಮುಂತಾದ ಪ್ರಬೇಧಗಳು ಕಾಣಸಿಕ್ಕಿವೆ. ಬೆಳುವಾಯಿಯಲ್ಲಿ ಗೋಲ್ಡನ್ ಬ್ಯಾಕ್ಟ್‌, ಹವರ್ ಗ್ಲಾಸ್ ಟ್ರೀ, ಬರೋವಿಂಗ್‌, ಕ್ರಿಕೆಟ್, ಇಂಡಿಯನ್ ಬುಲ್ ಮತ್ತಿತರ ‍ಪ್ರಬೇಧಗಳು ಪತ್ತೆಯಾಗಿವೆ. 

ADVERTISEMENT

‘ರಾಜ್ಯದ ವಿವಿಧ ಕಡೆಗಳಲ್ಲಿ ಕಪ್ಪೆಗಳ ಅಧ್ಯಯನ ನಡೆಯುತ್ತಿದೆ. ಬಿಸಿಲೆ ಘಾಟ್‌ನಲ್ಲಿ ಬಿಸಿಲೆ ಕಪ್ಪೆ ಟೀಂ ಎಂಬ ತಂಡವಿರುವಂತೆ ಬೇರೆ ಬೇರೆ ಕಡೆಗಳಲ್ಲಿ ಬೇರೆ ಬೇರೆ ಹೆಸರುಗಳ ಸಂಘ–ಸಂಸ್ಥೆಗಳು ಇವೆ. ಆದರೆ ದಕ್ಷಿಣ ಕನ್ನಡ–ಉಡುಪಿ ಭಾಗದಲ್ಲಿ ಕಪ್ಪೆಗಳ ಅಧ್ಯಯನಕ್ಕೆ ಹೆಚ್ಚು ಒತ್ತು ಕೊಡದ ಕಾರಣ ಸ್ಥಳೀಯವಾಗಿ ಕಂಡುಬರುವ ಕಪ್ಪೆಗಳ ಅಂಕಿಅಂಶಗಳ ಲಭ್ಯತೆ ಕಡಿಮೆ. ಈಗ ಮಾಹಿತಿ ಕಲೆ ಹಾಕುತ್ತಿರುವುದರಿಂದ ಮುಂದಿನ ಅಧ್ಯಯನಕ್ಕೆ ಅನುಕೂಲ ಆಗಲಿದೆ’ ಎನ್ನುತ್ತಾರೆ ಬೆಂಗಳೂರಿನ ಕ್ರೈಸ್ಟ್‌ ಕಾಲೇಜಿನ ಸಂಶೋಧಕಿ ಅರ್ಪಿತಾ ಜಾಯ್‌. 

‘ಈಚೆಗೆ ಎರಡು ದಶಕಗಳಿಂದ ದಕ್ಷಿಣ ಕನ್ನಡ–ಉಡುಪಿ ಭಾಗದಲ್ಲಿ ಕಪ್ಪೆಗಳ ಅಧ್ಯಯನ ಸ್ವಲ್ಪ ಮಟ್ಟಿಗೆ ನಡೆದಿದೆ. ಈಗ ಅದು ಇನ್ನೂ ಚುರುಕು ಪಡೆದಿದೆ. ಕಾರ್ಕಳದ ‘ಮಣ್ಣಪಾಪು’ ಮನೆ ಅಧ್ಯಯನಕ್ಕೆ ಆಸರೆಯಾಗಿದೆ. ಈ ಭಾಗದ್ದೇ ವಿಶೇಷವಾದ ಸಣ್ಣಬಾಯಿ ಕಪ್ಪೆ, ಮುರಕಲ್ಲು ಸಣ್ಣಬಾಯಿ ಕಪ್ಪೆ, ಸೇಂಟ್ ಅಲೋಶಿಯಸ್ ಕಪ್ಪೆ ಮತ್ತು ಕರಾವಳಿ ಚಿಮ್ಮುವ ಕಪ್ಪೆಗಳು ಕಾಣಸಿಕ್ಕಿವೆ. ಅಧ್ಯಯನ ನಡೆಸುವುದರಿಂದ ಸಾರ್ವಜನಿಕರಲ್ಲಿ ಕಪ್ಪೆಗಳ ಬಗ್ಗೆ ಇರುವ ತಪ್ಪು ಅಭಿಪ್ರಾಯ ಮತ್ತು ಮೌಢ್ಯ ಇಲ್ಲದಾಗಬಹುದು’ ಎಂದು ತಜ್ಞ ಗುರುರಾಜ್ ಹೇಳಿದರು. 

‘ಮರ, ಗಿಡ, ಬಳ್ಳಿ, ನೀರು, ಕಲ್ಲು ಇತ್ಯಾದಿಗಳೆಲ್ಲವೂ ಕಪ್ಪೆಗಳ ಆವಾಸಕ್ಕೆ ಅಗತ್ಯ. ಅಭಿವೃದ್ಧಿಯ ಹೆಸರಿನಲ್ಲಿ ಇವುಗಳನ್ನು ನಾಶ ಮಾಡುವುದರಿಂದ ಕಪ್ಪೆ ಸಂತತಿ ನಶಿಸುತ್ತಿದೆ. ಚಿಟ್ಟೆ ಪಾರ್ಕ್‌ನಲ್ಲಿರುವ ಹಳೆಯ ಜಲಾಗಾರದಲ್ಲಿ ಮಲಬಾರ್ ಗ್ಲೈಡಿಂಗ್ ಕಪ್ಪೆಗಳು ವರ್ಷಪೂರ್ತಿ ಕಾಣಸಿಗುತ್ತವೆ. ಆಸರೆಗಳನ್ನು ಉಳಿಸದೇ ಇದ್ದರೆ ಕಪ್ಪೆಗಳು ಉಳಿಯುವುದು ಕಷ್ಟ. ಈಗ ನಡೆಯುತ್ತಿರುವ ಕಾರ್ಯಾಗಾರ ಮತ್ತು ಅಧ್ಯಯನಗಳಿಂದ ಭರವಸೆ ಮೂಡಿದೆ’ ಎನ್ನುತ್ತಾರೆ ಚಿಟ್ಟೆ ಪಾರ್ಕ್ ಸ್ಥಾಪಕ ಸಮ್ಮಿಲನ್ ಶೆಟ್ಟಿ. 

ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಅನೇಕ ದಶಕಗಳಿಂದ ಕಪ್ಪೆಗಳ ಕುರಿತ ಅಧ್ಯಯನ ನಡೆಯುತ್ತಿದೆ. ಘಟ್ಟದ ಹೊರಗೆ ವಿಶೇಷವಾಗಿ ಕರಾವಳಿಯಲ್ಲಿ ಒತ್ತು ಸಿಕ್ಕಿರುವುದು ಕಡಿಮೆ. ಆದ್ದರಿಂದ ಈಗಿನ ಬೆಳವಣಿಗೆ ಆಶಾದಾಯಕ.
ಅರ್ಪಿತಾ ಜಾಯ್‌, ಸಂಶೋಧಕಿ
ಕೆರೆ ಜೀರ್ಣೋದ್ಧಾರದ ಹೆಸರಿನಲ್ಲಿ ಒಳಗಿನದ್ದೆಲ್ಲವನ್ನು ತೆಗೆದು ಸ್ವಚ್ಛ ಮಾಡಿ ಬದಿಗೆ ಕಲ್ಲು ಕಟ್ಟಿ ಸುಂದರಗೊಳಿಸುತ್ತಾರೆ. ಇದು ಅಲ್ಲಿನ ಸ್ಥಳೀಯ ಪ್ರಬೇಧಗಳಿಗೆ ಮಾರಕವಾಗುತ್ತದೆ. ಇಂಥ ಅಂಶಗಳನ್ನು ಗಮನಿಸಬೇಕಾದ ತುರ್ತು ಇದೆ.
ಸಮ್ಮಿಲನ್ ಶೆಟ್ಟಿ, ಬೆಳುವಾಯಿಯ ಚಿಟ್ಟೆ ಪಾರ್ಕ್ ಸ್ಥಾಪಕ
ವೆಸ್ಟರ್ನ್ ಟ್ರೀ ಕಪ್ಪೆ
ಇಂಡಿಯನ್ ಸ್ಕಿಟರಿಂಗ್ ಕಪ್ಪೆ
ಇಂಡಿಯನ್ ಬುಲ್ ಫ್ರಾಗ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.