ADVERTISEMENT

ಪ್ರಾಥಮಿಕ ಹಂತದಲ್ಲೇ ಕೋವಿಡ್‌ಗೆ ಬ್ರೇಕ್‌

ಬೆಳ್ತಂಗಡಿ ತಹಶೀಲ್ದಾರ್‌ ಗಣಪತಿ ಶಾಸ್ತ್ರಿ

ಪ್ರದೀಶ್ ಎಚ್.ಮರೋಡಿ
Published 28 ಜೂನ್ 2020, 7:53 IST
Last Updated 28 ಜೂನ್ 2020, 7:53 IST
ಗಣಪತಿ ಶಾಸ್ತ್ರಿ
ಗಣಪತಿ ಶಾಸ್ತ್ರಿ   

ಮಂಗಳೂರು: ‘ಬೆಳ್ತಂಗಡಿ ತಾಲ್ಲೂಕಿನಲ್ಲಿ ಕೋವಿಡ್‌–19 ಸೋಂಕಿತರ ಪ್ರಾಥಮಿಕ ಸಂಪರ್ಕದಿಂದ ಈತನಕ ಯಾರಿಗೂ ಸೋಕು ಹರಡಿಲ್ಲ. ತಾಲ್ಲೂಕು ಆಡಳಿತವು ತಂಡವಾಗಿ ಕೆಲಸ ಮಾಡಿದ್ದರಿಂದ ಇದು ಸಾಧ್ಯವಾಯಿತು’ ಎನ್ನುತ್ತಾರೆ ಬೆಳ್ತಂಗಡಿ ತಹಶೀಲ್ದಾರ್‌ ಗಣಪತಿ ಶಾಸ್ತ್ರಿ.

‘ಮಾತು ಕಡಿಮೆ ದುಡಿಮೆ ಜಾಸ್ತಿ’ ಎಂಬ ಮಾತಿಗೆ ಅನ್ವರ್ಥವಾಗುವಂತೆ ಕರ್ತವ್ಯ ನಿರ್ವಹಿಸುತ್ತಿರುವ ಹೊನ್ನಾವರದ ಗಣಪತಿ ಶಾಸ್ತ್ರಿ ಅವರು ಕಾನೂನಿನ ಚೌಕಟ್ಟು ಮೀರುವವರಲ್ಲ. ನಿವೃತ್ತ ಯೋಧರೂ ಆಗಿರುವ ಅವರು ಶಿಸ್ತಿಗೆ ಹೆಸರುವಾಸಿ.ಒಂದು ವರ್ಷ ಐದು ತಿಂಗಳಿನಿಂದ ಬೆಳ್ತಂಗಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಬೆಳಿಗ್ಗೆ 7ರಿಂದ ರಾತ್ರಿ 11ರ ತನಕವೂ ಕಚೇರಿಯಲ್ಲಿ ಕಾರ್ಯ ನಿರ್ವಹಿಸಿದ ಉದಾಹರಣೆಗಳಿವೆ. ಕಳೆದ ವರ್ಷ ಅತಿವೃಷ್ಟಿಯ ಸಂದರ್ಭದಲ್ಲೂ ಜನ ಮೆಚ್ಚುವಂತೆ ಕೆಲಸ ನಿರ್ವಹಿಸಿದ್ದ ಅವರು, ಕೊರೊನಾ ತಲ್ಲಣ ವೇಳೆಯಲ್ಲೂ ತಾಲ್ಲೂಕು ಆಡಳಿತದ ನೇತೃತ್ವ ವಹಿಸಿಕೊಂಡು ಕೊರೊನಾ ವೈರಸ್‌ ತಡೆಗೆ ಕೆಲ ಪ್ರಯೋಗಗಳನ್ನು ಮಾಡಿ ಯಶಸ್ಸು ಕಂಡಿದ್ದಾರೆ. ‘ಪ್ರಜಾವಾಣಿ’ ಅವರನ್ನು ಮಾತಿಗೆಳೆದಾಗ ಪ್ರತಿಕ್ರಿಯಿಸಿದ್ದು ಹೀಗೆ.

‘ನಾನು ಸರ್ಕಾರಿ ಉದ್ಯೋಗಿ. ಸರ್ಕಾರದ ಕೆಲಸವನ್ನು ಪ್ರಾಮಾಣಿಕತೆಯಿಂದ ನಿರ್ವಹಿಸುವುದು ನನ್ನ ಕರ್ತವ್ಯ. ಈ ಸೇವೆಗೆ ಸೇರಿದ ನಂತರ ದಿನದ 24x7 ಅವಧಿಯಲ್ಲೂ ಜನಸೇವೆಗೆ ಸಿದ್ಧವಾಗಿರಬೇಕು. ನಾನು ಅದನ್ನು ಬಿಟ್ಟು ಹೆಚ್ಚೇನು ಮಾಡಿಲ್ಲ. ನಾನು ಮಾಡುವ ಕೆಲಸ ನನಗೆ ಆತ್ಮತೃಪ್ತಿ ಇರಬೇಕು ಎಂದು ಬಯಸುತ್ತೇನೆ’ ಎನ್ನುವುದು ಅವರ ಮೊದಲ ಪ್ರತಿಕ್ರಿಯೆ.

ADVERTISEMENT

‘ಕೊರೊನಾ ವೈರಸ್‌ ಸೋಂಕು ತಾಲ್ಲೂಕಿನಲ್ಲಿ ನಿಯಂತ್ರಣದಲ್ಲಿದೆ ಎಂದರೆ ಅದಕ್ಕೆ ಆರೋಗ್ಯ ಹಾಗೂ ಪೊಲೀಸ್‌ ಇಲಾಖೆ ಸಿಬ್ಬಂದಿ ಮುಖ್ಯ ಕಾರಣ. ‘ಯಥಾ ರಾಜ ತಥಾ ಪ್ರಜೆ’ ಎಂಬಂತೆ ನಾನು ನನ್ನ ಕರ್ತವ್ಯವನ್ನು ನಿಷ್ಠೆಯಿಂದ ಮಾಡಿದ್ದು, ಕೆಳ ಹಂತದ ಅಧಿಕಾರಿಗಳು ಕೂಡ ಪ್ರಾಮಾಣಿಕವಾಗಿ ನಿರ್ವಹಿಸಿದ್ದಾರೆ. ಹೀಗಾಗಿ, ತಾಲ್ಲೂಕಿನಲ್ಲಿ ಹಲವರಿಗೆ ಕೋವಿಡ್‌ ದೃಢಪಟ್ಟರೂ ಅವರಿಂದ ಇತರರಿಗೆ ಹರಡಲಿಲ್ಲ’.

‘ತಾಲ್ಲೂಕಿನ ಕಲ್ಲೇರಿಯಲ್ಲಿ ಮಾರ್ಚ್‌ 23ರಂದು ಮೊದಲ ಕೋವಿಡ್‌ ಪ್ರಕರಣ ಪತ್ತೆಯಾಗಿತ್ತು. ಆ ವೇಳೆಗೆ ಕ್ವಾರಂಟೈನ್‌ಗೆ ಸಂಬಂಧಿಸಿದ ಮಾರ್ಗಸೂಚಿ ಸರ್ಕಾರದಿಂದ ಬರದಿದ್ದರೂ ನಾವೇ ಒಂದು ಮಾರ್ಗಸೂಚಿ ಮಾಡಿಕೊಂಡು, ಮುನ್ನೆಚ್ಚರಿಕೆ ಕ್ರಮ ಕೈಗೊಂಡೆವು. ಸಾಂಸ್ಥಿಕ ಕ್ವಾರಂಟೈನ್‌ ಹಾಗೂ ಹೋಂ ಕ್ವಾರಂಟೈನ್‌ ಕಟ್ಟುನಿಟ್ಟಾಗಿ ಪಾಲಿಸಿದೆವು. ಹೋಂ ಕ್ವಾರಂಟೈನ್‌ ವೇಳೆ ವ್ಯಕ್ತಿಯ ಮನೆಯ ಇತರ ಸದಸ್ಯರು ತಿರುಗಾಡುವುದು ಅಪಾಯ ಎಂಬುದನ್ನು ಅರಿತು, ಇಡೀ ಮನೆಯನ್ನೇ ಕ್ವಾರಂಟೈನ್‌ ಮಾಡಿದ್ದೇವೆ. ಹೀಗಾಗಿ, ತಾಲ್ಲೂಕಿನಲ್ಲಿ ಸೋಂಕು ಹರಡುವುದನ್ನು ತಡೆದಿದ್ದೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.