ADVERTISEMENT

ದಕ್ಷಿಣ ಕನ್ನಡ | ಗಣಪನ ಉತ್ಸವದಲ್ಲಿ ವೈವಿಧ್ಯಮಯ ಆಮೋದ

ಬಗೆಬಗೆಯ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ–ಜಲಸ್ತಂಭನದ ನಡುವಿನ ಅವಧಿಯಲ್ಲಿ ಕಲಾ ಸಾಂಸ್ಕೃತಿಕ ವೈಭವ; ಸಂಘಟನೆ, ಸೌಹಾರ್ದದ ಮೆರುಗು

ವಿಕ್ರಂ ಕಾಂತಿಕೆರೆ
Published 25 ಆಗಸ್ಟ್ 2025, 6:44 IST
Last Updated 25 ಆಗಸ್ಟ್ 2025, 6:44 IST
ಮಣ್ಣಿನ ಗಣೇಶ ಮೂರ್ತಿಗಳಿಗೆ ಬಣ್ಣ ಬಳಿಯುತ್ತಿರುವ ಕಲಾವಿದ ಪ್ರಜಾವಾಣಿ ಚಿತ್ರ : ಫಕ್ರುದ್ದೀನ್ ಎಚ್
ಮಣ್ಣಿನ ಗಣೇಶ ಮೂರ್ತಿಗಳಿಗೆ ಬಣ್ಣ ಬಳಿಯುತ್ತಿರುವ ಕಲಾವಿದ ಪ್ರಜಾವಾಣಿ ಚಿತ್ರ : ಫಕ್ರುದ್ದೀನ್ ಎಚ್   

ಮಂಗಳೂರು: ಚಕ್ಕುಲಿ, ಕಜ್ಜಾಯ, ಕಡುಬು ಪ್ರಿಯ ಡೊಳ್ಳುಹೊಟ್ಟೆಯ ಗಣಪನ ಪೂಜೆಯಲ್ಲಿ ಮೋದಕಕ್ಕೂ ವಿಶೇಷ ಸ್ಥಾನ. ಅಂಥ ಗಣೇಶನನ್ನು ಸಾರ್ವಜನಿಕವಾಗಿ ಪೂಜಿಸುವ ಉತ್ಸವದಲ್ಲಿ ಕಲೆ, ಸಂಸ್ಕೃತಿ, ಪರಂಪರೆಯನ್ನು ಬಿಂಬಿಸುವ ವೈವಿಧ್ಯಮಯ ಕಾರ್ಯಕ್ರಮಗಳ ಆಮೋದ. ಆ ವೈಭವಕ್ಕೆ ಮಂಗಳೂರು ನಗರವೂ ಸೇರಿದಂತೆ ಜಿಲ್ಲೆ ಮತ್ತೊಮ್ಮೆ ಸಜ್ಜಾಗಿದೆ. ಟ್ಯಾಬ್ಲೊ, ಭಜನೆ, ಬೊಂಜೆ ಕುಣಿತ, ಕುಣಿತ ಭಜನೆ, ಜಾನಪದ ನೃತ್ಯಗಳು, ಭಕ್ತಿ ಸಂಗೀತ ಮುಂತಾದವುಗಳನ್ನು ಒಳಗೊಂಡ ಶೋಭಾಯಾತ್ರೆಯ ಸೊಬಗು ಸವಿಯಲು ಜನರೂ ಕಾತರರಾಗಿದ್ದಾರೆ. 

ಬೆಳಗಾವಿ, ಹುಬ್ಬಳ್ಳಿ–ಧಾರವಾಡ, ಕಾರವಾರ ಮುಂತಾದ ನಗರಗಳಿಗೆ ಹೋಲಿಸಿದರೆ ಮಂಗಳೂರು ಮತ್ತು ಒಟ್ಟಾರೆ ತುಳುನಾಡಿನಲ್ಲಿ ಗಣೇಶೋತ್ಸವದ ಸ್ವರೂಪ ಸ್ವಲ್ಪ ಭಿನ್ನ. ಇಲ್ಲಿ ಗಣೇಶ ಮೂರ್ತಿಯನ್ನು ಕೂರಿಸಿ ಪೂಜಿಸುವ ಪದ್ಧತಿ ದೊಡ್ಡಮಟ್ಟದಲ್ಲಿ ಪ್ರಚಲಿತವಿಲ್ಲ. ಹಾಗೇನಾದರೂ ಇದ್ದರೆ ಅದಕ್ಕೆ ಪ್ರಮುಖ ಕಾರಣ ಹೊರಜಿಲ್ಲೆ ಮತ್ತು ಬೇರೆ ಬೇರೆ ಪ್ರದೇಶಗಳ ಪ್ರಭಾವ. ಆದರೆ ಸಾರ್ವಜನಿಕವಾಗಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿ ಸಂಭ್ರಮಿಸುವ ಪದ್ಧತಿ ಇಲ್ಲಿ ಅನೇಕ ವರ್ಷಗಳಿಂದ ಇದೆ. ಹೀಗೆ ದಶಕಗಳಿಂದ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ಅನೇಕ ಗಣೇಶೋತ್ಸವ ಸಮಿತಿಗಳು ಇಲ್ಲಿವೆ. ಈಚೆಗೆ ಜನ್ಮತಾಳಿದ ಸಮಿತಿಗಳ ಸಂಖ್ಯೆಯೂ ಕಡಿಮೆಯೇನಲ್ಲ. ಅಬ್ಬರದ ಸಂಗೀತಕ್ಕೆ ಸಂಬಂಧಿಸಿ ಭಕ್ತರು ಮತ್ತು ಪೊಲೀಸರ ನಡುವೆ ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲೂ ಬಹುತೇಕ ಸಮಿತಿಗಳು ಸಾಂಪ್ರದಾಯಿಕ ಶೈಲಿಯಲ್ಲಷ್ಟೇ ಕಾರ್ಯಕ್ರಮಗಳನ್ನು ಆಯೋಜಿಸಲು ಪಣತೊಟ್ಟಿವೆ.

ಮಂಗಳೂರು ನಗರದಲ್ಲೇ 50ಕ್ಕೂ ಹೆಚ್ಚು ಕಡೆಗಳಲ್ಲಿ ಗಣಪತಿ ಕೂರಿಸುತ್ತಾರೆ. 77 ವರ್ಷಗಳಿಂದ ಗಣೇಶೋತ್ಸವ ಆಚರಿಸುತ್ತಿರುವ ಕೇಶವ ಸ್ಮೃತಿ ಸಂವರ್ಧನ ಸಮಿತಿ, ಆರು ದಶಕ ಸಮೀಪಿಸುತ್ತಿರುವ ಕುಲಶೇಖರ ಹಿಂದೂ ಸೇವಾ ಸಮಿತಿ ಟ್ರಸ್ಟ್‌ನ ಗಣೇಶೋತ್ಸವ, ಅರ್ಧಶತಮಾನ ಕಳೆದಿರುವ ಕಂಕನಾಡಿ ಪಂಪ್‌ವೆಲ್ ಸಾರ್ವಜನಿಕ ಶ್ರೀ ಗಣೇಶೋತ್ಸವ, ಗೌರಿಮಠ ರಸ್ತೆಯ ಶ್ರೀ ಮಹಾಮಾರಿಯಮ್ಮ ಯುವಕ ವೃಂದದ 32ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ, 30 ವರ್ಷಗಳಿಂದ ನಗರದ ಕೇಂದ್ರ ಮೈದಾನದಲ್ಲಿ ನಡೆಯುತ್ತಿರುವ ಉತ್ಸವ ಮುಂತಾದವುಗಳ ಜೊತೆಯಲ್ಲಿ ಸೂಟರ್‌ಪೇಟೆ, ಬಂಟರ ಯಾನೆ ನಾಡವರ ಮಾತೃಸಂಘದ 'ಓಂಕಾರ ನಗರ' ಗಣಪ, ಫರಂಗಿಪೇಟೆ ಹಿಂದು ಧಾರ್ಮಿಕ ಸೇವಾ ಸಮಿತಿಯ ಗಣಪ, ಬಿಕರ್ನಕಟ್ಟೆ ಹಿಂದೂ ಯುವಸೇನೆ, ತಲಪಾಡಿ ಗಣಪ, ಕದ್ರಿ, ಶರವು ದೇವಸ್ಥಾನ, ವಿಶ್ವ ಹಿಂದು ಪರಿಷತ್‌ ಮತ್ತು ಬಜರಂಗದಳದ ಕೋಡಿಕಲ್ ಘಟಕ ಮುಂತಾದ ಕಡೆಗಳಲ್ಲಿ ನಡೆಯುವ ಉತ್ಸವಗಳೆಲ್ಲವೂ ಒಂದಕ್ಕಿಂತ ಒಂದು ಭಿನ್ನ. ಆದರೆ ಎಲ್ಲ ಕಡೆ ಕಂಡುಬರುವ ಮೂಲಧಾತು ಒಂದೇ–ಸಂಘಟನೆ, ಸೌಹಾರ್ದ ಮತ್ತು ಕಲಾಸೇವೆ.

ADVERTISEMENT

ಕೇಶವ ಸ್ಮೃತಿ ಸಂವರ್ಧನ ಸಮಿತಿಯಲ್ಲಿ ಈ ವರ್ಷವೂ ಧಾರ್ಮಿಕ ಮತ್ತು ಕಲಾ ಕಾರ್ಯಕ್ರಮಗಳಿಗೆ ಆದ್ಯತೆ. ಹರಿನಾಮ ಸಂಕೀರ್ತನೆ, ಮೂಡ ಗಣಪತಿ ಸೇವೆ, ರಂಗಪೂಜೆ, ಆಶೀರ್ವಚನ, ಗಾನಸುಧೆ, ಭರತನಾಟ್ಯ, ಭಜನ್‌ ಸಂಧ್ಯಾ, ವಾದ್ಯಗೋಷ್ಠಿ, ಕೇರಳದ ಚೆಂಡೆ, ಶಂಖ, ಜಾಗಟೆ, ಕುಣಿತ ಭಜನೆ ಇತ್ಯಾದಿ ಇಲ್ಲಿನ ಪ್ರಮುಖ ಕಾರ್ಯಕ್ರಮಗಳು. ಬಂಟರ ಯಾನೆ ನಾಡವರ ಮಾತೃಸಂಘದ ಉತ್ಸವದಲ್ಲಿ ತೆನೆಹಬ್ಬ, ಅಷ್ಟೋತ್ತರ ನಾರಿಕೇಳ ಮಹಾಗಣಯಾಗ ಮುಂತಾದವರು ಇರುತ್ತವೆ.

ಪದವಿನಂಗಡಿಯ ದೇವಿನಗರ, ಮಂಗಳೂರಿನ ವೆಂಕಟರಮಣ ದೇವಸ್ಥಾನ, ಬಂಟ್ಸ್‌ ಹಾಸ್ಟೆಲ್, ರಥಬೀದಿ, ಕರಂಗಲ್ಪಾಡಿ ಮಾರುಕಟ್ಟೆ, ಪೊಲೀಸ್ ಲೇನ್, ಜಪ್ಪಿನಮೊಗರು, ಬಲ್ಮಠ, ಅತ್ತಾವರ, ಕೆಎಸ್‌ಆರ್‌ಟಿಸಿ, ಮಾರಿಗುಡಿ, ಎನ್‌ಎಂಪಿಎ, ಎಂಸಿಎಫ್‌, ಕೆಒಐಸಿಎಲ್‌, ಕರ್ನಾಟಕ ಗೃಹ ಮಂಡಳಿ, ತೊಕ್ಕೊಟ್ಟು, ಕೊಣಾಜೆ, ಮೀನುಗಾರಿಕಾ ಕಾಲೇಜು, ಶ್ರೀ ಮಹಾಮಾರಿಯಮ್ಮ ಯುವಕ ವೃಂದ, ಜಪ್ಪಿನಮೊಗರು ಮುಂತಾದ ಕಡೆಗಳಲ್ಲಿ ಆಚರಣೆಗೆ ಅದ್ಧೂರಿ ಸಿದ್ಧತೆಗೆ ನಡೆದಿವೆ.

‘56 ವರ್ಷಗಳಿಂದ ಗಣಪತಿ ಕೂರಿಸುತ್ತಿದ್ದೇವೆ. ಇಲ್ಲಿಯ ವರೆಗೆ ಅಬ್ಬರದ ಕಾರ್ಯಕ್ರಮಗಳು ಮಾಡಿಲ್ಲ. ಡಿಜೆ ಬಳಸಿಲ್ಲ. ಎಲ್ಲವೂ ಸಾಂಪ್ರದಾಯಿಕವಾಗಿಯೇ ನಡೆಯುತ್ತಿದೆ. ಈ ಬಾರಿ ಮೂರು ದಿನಗಳ ಕಾರ್ಯಕ್ರಮದಲ್ಲಿ ಹಗಲು ಭಜನೆ, ರಾತ್ರಿ ನಾಟಕ, ಯಕ್ಷಗಾನ ಇತ್ಯಾದಿ ಇರುತ್ತದೆ. ಶಕ್ತಿನಗರ, ಕೆಎಂಎಫ್‌ ಡೇರಿ, ಕುಡುಪು ಭಾಗದವರು ಸೇರಿಕೊಂಡು ಮಾಡುವ ಉತ್ಸವ ಇದು’ ಎಂದು ಉತ್ಸವ ಸಮಿತಿಯ ಟ್ರಸ್ಟಿ ಪ್ರದೀಪ್‌ ಪ್ರಭು ‘ಪ್ರಜಾವಾಣಿ’ಗೆ ತಿಳಿಸಿದರು.

ನಗರದ ಏಳೆಂಟು ಕಡೆಗಳಲ್ಲಿ ಗಣಪತಿ ಮೂರ್ತಿ ತಯಾರಿ ಮಾಡುತ್ತಿದ್ದು ವಿವಿಧ ಆಕಾರದ ಸುಮಾರು 2 ಸಾವಿರಕ್ಕೂ ಅಧಿಕ ಮೂರ್ತಿಗಳು ಪ್ರತಿಷ್ಠಾಪನೆಗೆ ಸಿದ್ಧವಾಗಿವೆ.

ಪ್ರದೀಪ್ ಕುಮಾರ್ ಕಲ್ಕೂರ
ವೆಂಕಟೇಶ ರಾವ್
ಅಂಕುಶ್‌
ಕಲಾವಿದರಿಗೆ ಹೆಚ್ಚು ಅವಕಾಶ ಸಿಗಲಿ ಗಣೇಶೋತ್ಸವ ಸಾಧ್ಯವಾದಷ್ಟೂ ಸಾಂಪ್ರದಾಯಿಕ ಚೌಕಟ್ಟಿನಲ್ಲಿ ಸಾಂಸ್ಕೃತಿಕ ಸ್ಪರ್ಶದೊಂದಿಗೆ ನಡೆಯಬೇಕು. ತೌಳವ ಸಂಸ್ಕೃತಿ ಅದರಲ್ಲಿ ಮೇಳೈಸಬೇಕು. ಕಲಾ ಕಾರ್ಯಕ್ರಮಗಳಿಗೆ ವೇದಿಕೆ ಸೃಷ್ಟಿಸಿ ರಾಷ್ಟ್ರೀಯ ಕಲಾವಿದರೂ ಇಲ್ಲಿಗೆ ಬಂದು ಪ್ರದರ್ಶನ ನೀಡುವಂತೆ ಮಾಡಬೇಕು. ಹಬ್ಬದ ಆಚರಣೆ ಸಮಾಜಕ್ಕೆ ಸಂದೇಶ ನಿಡುವಂತಿರಬೇಕು. ಗಣಪತಿಯನ್ನು ಸಣ್ಣವರಿಂದ ಹಿಡಿದು ಹಿರಿಯರ ವರೆಗೆ ಎಲ್ಲರೂ ಪೂಜಿಸುತ್ತಾರೆ. ಆದ್ದರಿಂದಲೇ ಬಾಲಗಣಪತಿಯಿಂದ ಶೂರ ಗಣಪತಿಯ ವರೆಗಿನ ಎಲ್ಲ ಬಗೆಯ ಗಣಪ ಹಬ್ಬದ ಸಂದರ್ಭದಲ್ಲಿ ವಿಜೃಂಭಿಸುತ್ತಾನೆ. ಕಜ್ಜಾಯ ಮೋದಕದಿಂದ ಹಿಡಿದು ಮೃಷ್ಟಾನ್ನ ಭೋಜನವೂ ಸಂಭ್ರಮದಲ್ಲಿ ಅಡಕವಾಗಿರುತ್ತದೆ. ಅಂಥ ಗಣಪನಿಗೆ ಸರ್ವಧರ್ಮ ಸಮನ್ವಯದ ನೆಲೆಯಲ್ಲಿ ಪೂಜೆಯಾಗಬೇಕು. ಅದಕ್ಕೆ ಶಬ್ದ ಮಾಲಿನ್ಯ ಅಥವಾ ಸಾಂಸ್ಕೃತಿಕ ಮಾಲಿನ್ಯದ ಕಳಂಕ ಉಂಟಾಗಬಾರದು.
ಪ್ರದೀಪ್ ಕುಮಾರ್ ಕಲ್ಕೂರ ಸಂಸ್ಕೃತಿ ಚಿಂತಕ
ಸಾರ್ವಜನಿಕ ಗಣೇಶೋತ್ಸವ 28ನೇ ವರ್ಷಕ್ಕೆ ಕಾಲಿಡುತ್ತಿದೆ. ಕ್ರೀಡೆ ಸಾಂಸ್ಕೃತಿಕ ಕಾರ್ಯಕ್ರಮ ವಿವಿಧ ಸ್ಪರ್ಧೆಗಳು ನಮ್ಮಲ್ಲಿ ಎರಡು ದಿನಗಳ ಉತ್ಸವದ ಪ್ರಮುಖ ಅಂಶಗಳು. ಈ ಹಬ್ಬಕ್ಕಾಗಿ ಪ್ರತಿ ವರ್ಷ ಕಾಯುತ್ತಾ ಇರುತ್ತೇವೆ. ಎಲ್ಲವನ್ನೂ ಮರೆತು ಪಾಲ್ಗೊಳ್ಳುತ್ತೇವೆ. ಮೂರನೇ ತರಗತಿ ವಿದ್ಯಾರ್ಥಿಯಿಂದ ಹಿಡಿದು ಎಲ್ಲ ವಯಸ್ಸಿನವರೂ ಸಮಿತಿಯಲ್ಲಿ ಇದ್ದಾರೆ. ಗಣೇಶೋತ್ಸವ ಆಚರಣೆ ಮಾಡುವುದರಿಂದ ಮಾನಸಿಕ ನೆಮ್ಮದಿ ಸಿಗುತ್ತಿದೆ. ಇಷ್ಟಾರ್ಥ ಸಿದ್ಧಿ ಆಗುತ್ತಿದೆ.
ಅಂಕಿತ್ ಪದವಿನಂಗಡಿ ಸಾರ್ವಜನಿಕ ಗಣೇಶೋತ್ಸವ ಸಮಿತಿ

ತಲೆಮಾರುಗಳ ಮೂರ್ತಿ ಸೇವೆ ಆವೆಮಣ್ಣು ಮತ್ತು ನೈಸರ್ಗಿಕ ಬಣ್ಣಗಳನ್ನು ಬಳಸಿ ಮೂರ್ತಿಗಳನ್ನು ಸಿದ್ಧಪಡಿಸುವ ಮಂಗಳೂರು ಮಣ್ಣಗುಡ್ಡದ ‘ರಾವ್’ ಕುಟುಂಬ ಈ ಬಾರಿಯೂ ಬಗೆಬಗೆಯ ಗಣಪನ ತಯಾರಿಯಲ್ಲಿ ತೊಡಗಿದ್ದಾರೆ. ಮುಂಬೈಯಲ್ಲಿ ಸಾರಿಗೆ ಸಂಸ್ಥೆಯನ್ನು ನಡೆಸುತ್ತಿದ್ದ ಮೋಹನ ರಾವ್‌ ಅವರು ಮಂಗಳೂರಿನಲ್ಲಿ ಮೂರ್ತಿ ತಯಾರಿಯನ್ನು ಪ್ರಚಲಿತಗೊಳಿಸಿದ್ದರು. ಅವರ ಮಕ್ಕಳಾದ ಪ್ರಭಾಕರ ರಾವ್ 94 ಸುಧಾಕರ ರಾವ್ 88 ರಾಮಚಂದ್ರ ರಾವ್ ಜಯಲಕ್ಷ್ಮಿ ರಾವ್ ಅವರ ಪತಿ ವಿಟ್ಠಲ ರಾವ್ ಮುಂತಾದವರು ಈಗಲೂ ಈ ಸೇವೆಯನ್ನು ಮುಂದುವರಿಸುತ್ತಿದ್ದಾರೆ. ದಿವಂಗತ ದೀನಾನಾಥ ರಾವ್ ಕೂಡ ಕಲಾಸೇವೆ ಮಾಡಿದ್ದರು. ಕುಸ್ತಿಪಟು ವಯಲಿನ್ ವಾದಕ ಮತ್ತು ಗಾಯಕ ಆಗಿದ್ದ ಮೋಹನ ರಾವ್ ಅವರ ಮೊಮ್ಮಕ್ಕಳು ಮರಿಮೊಮ್ಮಕ್ಕಳು ಕೂಡ ಹಬ್ಬದ ಸಂದರ್ಭದಲ್ಲಿ ಮೂರ್ತಿ ತಯಾರಿಗೆ ಸಹಕಾರ ನೀಡುತ್ತಿದ್ದಾರೆ.  ‘ಒಂದೂವರೆ ತಿಂಗಳ ಹಿಂದೆ ಚಿತ್ರಾ ನಕ್ಷತ್ರದಂದು ಆವೆಮಣ್ಣು ತೆಗೆದುಕೊಂಡು ಬಂದು ಪೂಜೆ ಮಾಡಲಾಗುತ್ತದೆ. ಮಣ್ಣಿಗೆ ಗಣಪನ ಸ್ವರೂಪ ನೀಡಿದ ನಂತರ ಹುಣ್ಣಿಮೆಯ ದಿನ ಬಣ್ಣದ ಮುಹೂರ್ತ ಮಾಡಲಾಗುತ್ತದೆ. ಮುದ್ರೆ ಮತ್ತು ದೃಷ್ಟಿ ಹಾಕುವುದನ್ನೂ ಶುಭಮುಹೂರ್ತದಲ್ಲೇ ಮಾಡಲಾಗುತ್ತದೆ. ವಿವಿಧ ಆಸನಗಳಲ್ಲಿರುವ ವಿವಿಧ ಗಾತ್ರದ ಮೂರ್ತಿಗಳಿಗೆ ಬೇಡಿಕೆ ಇದೆ. ಇದನ್ನು ವ್ಯಾಪಾರಿ ದೃಷ್ಟಿ ಮಾಡುತ್ತಿಲ್ಲ. ಆದ್ದರಿಂದ ಅನೇಕ ವರ್ಷಗಳಿಂದ ತೆಗೆದುಕೊಂಡು ಹೋಗುವವರಿಗೆ ಮಾತ್ರ ಆದ್ಯತೆ. ಮಂಗಳೂರು ನಗರ ಸುತ್ತಮುತ್ತ ಕೇರಳದ ಕೆಲವು ಭಾಗಗಳಿಗೆ ಮೂರ್ತಿಗಳು ಹೋಗುತ್ತವೆ. ಪ್ರತಿ ವರ್ಷ ಒಂದು ಮೂರ್ತಿ ಅಮೆರಿಕಕ್ಕೆ ಹೋಗುತ್ತದೆ. ಶೆರ್ಲೇಕರ್ ಕುಟುಂಬದವರಿಗಾಗಿ ಅದನ್ನು ತಯಾರಿಸಲಾಗುತ್ತದೆ’ ಎಂದು ವೆಂಕಟೇಶ ರಾವ್ ತಿಳಿಸಿದರು.   ‘ವಿಗ್ರಹ ಪ್ರತಿಷ್ಠಾಪನೆ ಮಾಡಿದ ನಂತರ ಜಲಸ್ತಂಭನ ಆಗಲೇಬೇಕು. ಆದ್ದರಿಂದ ಜಲಚರ ಪರಿಸರಕ್ಕೆ ಹಾನಿಯಾಗುವಂಥ ಯಾವ ಪದಾರ್ಥಗಳನ್ನೂ ಬಳಸುತ್ತಿಲ್ಲ. ಮೂರ್ತಿಯ ಒಳಗೆ ರಾಡ್ ಬಳಸುವುದಿಲ್ಲ. ಪೂರ್ತಿ ಮಣ್ಣಿನಿಂದಲೇ ಮಾಡಲಾಗುತ್ತದೆ. ಬಣ್ಣದಲ್ಲಿ ಸೀಸವನ್ನು ಬಳಸುತ್ತಿಲ್ಲ’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.