ADVERTISEMENT

ಕಾಸರಗೋಡು: 38 ಗಣೇಶ ವಿಗ್ರಹಗಳು ಆರಾಧನೆಗೆ ಸಿದ್ಧ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2025, 5:22 IST
Last Updated 26 ಆಗಸ್ಟ್ 2025, 5:22 IST
ಕಾಸರಗೋಡಿನ ಉಳಿಯತ್ತಡ್ಕ ಗುರುಕೃಪಾದಲ್ಲಿ ನಡೆಯುತ್ತಿರುವ ಗಣೇಶ ವಿಗ್ರಹ ನಿರ್ಮಾಣ ಕಾರ್ಯ
ಕಾಸರಗೋಡಿನ ಉಳಿಯತ್ತಡ್ಕ ಗುರುಕೃಪಾದಲ್ಲಿ ನಡೆಯುತ್ತಿರುವ ಗಣೇಶ ವಿಗ್ರಹ ನಿರ್ಮಾಣ ಕಾರ್ಯ   

ಕಾಸರಗೋಡು: ಸಾರ್ವಜನಿಕವಾಗಿ ಪೂಜೆಗೊಳ್ಳುವ 38 ಮಣ್ಣಿನ ಗಣೇಶ ಮೂರ್ತಿಗಳು ಕಾಸರಗೋಡಿನ ಉಳಿಯತ್ತಡ್ಕ ಗುರುಕೃಪಾ ನಿವಾಸದಲ್ಲಿ ನಿರ್ಮಾಣಗೊಳ್ಳುತ್ತಿವೆ.

ಇಲ್ಲಿನ ಪುರೋಹಿತ ಬಿ.ಕೇಶವ ಆಚಾರ್ ಅವರ ನಿರ್ದೇಶನದಲ್ಲಿ ಅವರ ಪುತ್ರರಾದ ಗುರುಪ್ರಸಾದ್ ಶರ್ಮ ಮತ್ತು ಹರಿಪ್ರಸಾದ್ ಶರ್ಮ ನೇತೃತ್ವದಲ್ಲಿ ಸುಮಾರು 10 ಮಂದಿಯ ತಂಡ ಆವೆಮಣ್ಣಿನಿಂದ ಗಣೇಶನ ವಿಗ್ರಹ ನಿರ್ಮಾಣದಲ್ಲಿ ತೊಡಗಿಕೊಂಡಿದೆ. ಜಿಲ್ಲೆಯ ಕಾಸರಗೋಡು ಸಾರ್ವಜನಿಕ ಗಣೇಶ, ಎಡನೀರು ಮಠದ ಸಾರ್ವಜನಿಕ ಗಣೇಶ, ಮೇಲ್ಪರಂಬ, ಕುಂಟಾರು ಸಾರ್ವಜನಿಕ ಗಣೇಶ ಸಹಿತ ವಿವಿಧೆಡೆ ಪೂಜೆಗೊಳ್ಳುವ ಮೂರ್ತಿಗಳ ಜೊತೆಗೆ ಬೆಂಗಳೂರಿನ ವಿವಿಧೆಡೆ ಪೂಜೆಗೊಳ್ಳುವ ಮೂರ್ತಿಗಳೂ ಇಲ್ಲಿ ಸಿದ್ಧಗೊಂಡಿವೆ.

ಆರೂವರೆ, ಐದು ಅಡಿ ಎತ್ತರ, 4 ಅಡಿ ಅಗಲದ ಮೂರ್ತಿಗಳೂ, 1– 2 ಅಡಿಯ ಚಿಕ್ಕ ಮೂರ್ತಿಗಳೂ ಇಲ್ಲಿ ನಿರ್ಮಾಣವಾಗುತ್ತಿವೆ. ಚಿಕ್ಕ ಮೂರ್ತಿ ನಿರ್ಮಾಣಕ್ಕೆ 2 ದಿನ ಬೇಕಾದರೆ, ದೊಡ್ಡ ಮೂರ್ತಿ ನಿರ್ಮಾಣಕ್ಕೆ 6-7 ದಿನಗಳು ಬೇಕಾಗುತ್ತವೆ. ನಂತರ 4 ದಿನಗಳ ಅಂತರದಲ್ಲಿ ಬಣ್ಣ ನೀಡುವ ಕೆಲಸ ಆರಂಭವಾಗುತ್ತದೆ ಎಂದು ಹರಿಪ್ರಸಾದ್ ಶರ್ಮ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಮೂಡುಬಿದಿರೆಯಿಂದ ತರಿಸಿದ ಆವೆಮಣ್ಣಿನಿಂದ ಮೂರ್ತಿ ರಚಿಸಲಾಗುತ್ತಿದೆ. ಬೆಂಗಳೂರಿನ ವಿವಿಧೆಡೆಯ ಬೇಡಿಕೆಯಂತೆ ತಿರುಪತಿ ತಿಮ್ಮಪ್ಪನ ಮಾದರಿಯ ಗಣಪತಿ, ಗೌರಿ ಗಣೇಶ ವಿಗ್ರಹಗಳನ್ನು ರಚಿಸಿದ್ದಾರೆ.

ಕೇಶವ ಆಚಾರ್ ಅವರು 54 ವರ್ಷಗಳಿಂದ ಗಣೇಶ ಮೂರ್ತಿ ತಯಾರಿಸುತ್ತಿದ್ದು, ಅವರ ವಂಶ ಸುಮಾರು 160 ವರ್ಷಗಳಿಂದ ಈ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಕೇಶವ ಆಚಾರ್ ಅವರು ರಚಿಸಿದ ಮೂರ್ತಿಗಳು ಮಸ್ಕತ್‌, ಕೊಯಮತ್ತೂರು ಸಹಿತ ಹೊರ ದೇಶ, ಹೊರರಾಜ್ಯಗಳಲ್ಲೂ ಪೂಜೆಗೊಂಡಿವೆ.

ಕಾಸರಗೋಡು ಸಾರ್ವಜನಿಕ ಗಣೇಶೋತ್ಸವ 70 ವರ್ಷಗಳ ಸಂಭ್ರಮದಲ್ಲಿದ್ದರೆ, 24 ವರ್ಷಗಳಿಂದ ಕೇಶವ ಆಚಾರ್ ಅವರೇ ಇಲ್ಲಿಗೆ ಮೂರ್ತಿ ರಚಿಸಿದ್ದಾರೆ. ಈಗ ಅವರ ನಿರ್ದೇಶನದಲ್ಲಿ ಮಕ್ಕಳು ಈ ಕಾಯಕ ಮುಂದುವರಿಸುತ್ತಿದ್ದಾರೆ. ನಿತ್ಯಾನುಷ್ಠಾನ ಇರುವ ಕಾರಣ ಇಲ್ಲಿ ನಿರ್ಮಾಣಗೊಳ್ಳುವ ಗಣೇಶ ವಿಗ್ರಹ ಕಾಯಕವೂ ಶಾಸ್ತ್ರೋಕ್ತವಾಗಿಯೇ ನಡೆಯುತ್ತಿವೆ.

ಶಾಸ್ತ್ರೋಕ್ತ ನಿರ್ಮಾಣ

ಕಠಿಣ ವ್ರತಾಚರಣೆ ಸಹಿತವಾಗಿ ಅಥರ್ವ ಶೀರ್ಷ ಮಂತ್ರ ಮೂಲಕ ಇಲ್ಲಿ ಗಣೇಶ ವಿಗ್ರಹಗಳ ನಿರ್ಮಾಣ ನಡೆಯುತ್ತದೆ. ಈ ಅವಧಿಯಲ್ಲಿ ಯಾವುದೇ ವಿಚಾರಗಳ ಉಲ್ಲೇಖ ನಡೆಸುವುದಿಲ್ಲ. ವಿಗ್ರಹವನ್ನು ಸಂಬಂಧಪಟ್ಟವರಿಗೆ ಬಿಟ್ಟು ಕೊಡುವ ವೇಳೆಯೂ ಶಿಲ್ಪಶಾಸ್ತ್ರ ಪ್ರಕಾರ ವಿಶ್ವಕರ್ಮ ಪೂಜೆ ಸಹಿತ ಕಾರ್ಯಕ್ರಮ ನಡೆಸಲಾಗುತ್ತದೆ.

-ಬಿ.ಕೇಶವ ಆಚಾರ್, ಪುರೋಹಿತ, ಗುರುಕೃಪಾ, ಉಳಿಯತ್ತಡ್ಕ

ಕಾಸರಗೋಡಿನ ಉಳಿಯತ್ತಡ್ಕ ಗುರುಕೃಪಾದಲ್ಲಿ ನಡೆಯುತ್ತಿರುವ ಗಣೇಶ ವಿಗ್ರಹ ನಿರ್ಮಾಣ ಕಾರ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.