ADVERTISEMENT

ಮಾದಕ ಪದಾರ್ಥ ಸೇವನೆ: ಮತ್ತಷ್ಟು ವಿದ್ಯಾರ್ಥಿಗಳು ಪೊಲೀಸ್‌ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2023, 6:44 IST
Last Updated 21 ಜನವರಿ 2023, 6:44 IST
ಕೆಎಂಸಿ ವೈದ್ಯಕೀಯ ಕಾಲೇಜಿನ ಡಿನ್‌ ಡಾ.ಬಿ.ಉನ್ನಿಕೃಷ್ಣನ್‌ ಅವರು, ಕಾಲೇಜು ಪ್ರಾಂಗಣದಲ್ಲಿ ಮಾದಕ ಪದಾರ್ಥಗಳ ಸೇವನೆ ಮತ್ತು ಮಾರಾಟ ನಿಯಂತ್ರಣ ಆಸ್ಪದವನ್ನೇ ನೀಡದ ಬಗ್ಗೆ ಕೈಗೊಂಡ ಕ್ರಮಗಳ ಕುರಿತ ಪತ್ರವನ್ನು ಎನ್.ಶಶಿಕುಮಾರ್‌ ಅವರಿಗೆ ಶುಕ್ರವಾರ ಹಸ್ತಾಂತರಿಸಿದರು
ಕೆಎಂಸಿ ವೈದ್ಯಕೀಯ ಕಾಲೇಜಿನ ಡಿನ್‌ ಡಾ.ಬಿ.ಉನ್ನಿಕೃಷ್ಣನ್‌ ಅವರು, ಕಾಲೇಜು ಪ್ರಾಂಗಣದಲ್ಲಿ ಮಾದಕ ಪದಾರ್ಥಗಳ ಸೇವನೆ ಮತ್ತು ಮಾರಾಟ ನಿಯಂತ್ರಣ ಆಸ್ಪದವನ್ನೇ ನೀಡದ ಬಗ್ಗೆ ಕೈಗೊಂಡ ಕ್ರಮಗಳ ಕುರಿತ ಪತ್ರವನ್ನು ಎನ್.ಶಶಿಕುಮಾರ್‌ ಅವರಿಗೆ ಶುಕ್ರವಾರ ಹಸ್ತಾಂತರಿಸಿದರು   

ಮಂಗಳೂರು: ಗಾಂಜಾ ಸೇವನೆ ಮತ್ತು ಮಾರಾಟದಲ್ಲಿ ತೊಡಗಿದ್ದ ಆರೋಪದ ಮೇರೆಗೆ ಪೊಲೀಸರು ಮತ್ತಷ್ಟು ವೈದ್ಯ ವಿದ್ಯಾರ್ಥಿಗಳನ್ನು ಶುಕ್ರವಾರ ವಶಕ್ಕೆ ಪಡೆದಿದ್ದಾರೆ.

ಈ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ನಗರ ಪೊಲೀಸ್‌ ಕಮಿಷನರ್‌ ಎನ್‌.ಶಶಿಕುಮಾರ್‌, ‘ಪ್ರಕರಣದ ತನಿಖೆಯ ಭಾಗವಾಗಿ ನಮ್ಮ ಸಿಬ್ಬಂದಿ ಮತ್ತಷ್ಟು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದಿದ್ದಾರೆ. ಅವರು ಮಾದಕ ಪದಾರ್ಥ ಮಾರಾಟ ಅಥವಾ ಸೇವನೆಯಲ್ಲಿ ತೊಡಗಿದ್ದುದು ಕಂಡುಬಂದರೆ ಅವರನ್ನೂ ಬಂಧಿಸುತ್ತೇವೆ’ ಎಂದು ತಿಳಿಸಿದರು.

ಕಾಲೇಜಿನಲ್ಲಿ ಮಾದಕ ಪದಾರ್ಥಗಳ ಮಾರಾಟ ಮತ್ತು ಸೇವನೆಗೆ ಕಡಿವಾಣ ಹಾಕಲು ಕೈಗೊಂಡ ಕ್ರಮಗಳ ಬಗ್ಗೆ ನಗರದ ಕಸ್ತೂರಬಾ ವೈದ್ಯಕೀಯ ಕಾಲೇಜು (ಕೆಎಂಸಿ) ಆಸ್ಪತ್ರೆಯ ಡೀನ್‌ ಡಾ.ಬಿ.ಉನ್ನಿಕೃಷ್ಣನ್ ಅವರು ಶಶಿಕುಮಾರ್‌ ಅವರನ್ನು ಶುಕ್ರವಾರ ಭೇಟಿಯಾಗಿ ಚರ್ಚಿಸಿದರು.

ADVERTISEMENT

ಈ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ಶಶಿಕುಮಾರ್‌, ‘ಕೆಎಂಸಿ ಪ್ರಾಂಗಣದಲ್ಲಿ ಮಾದಕ ಪದಾರ್ಥಗಳ ಸೇವನೆ ಹಾಗೂ ಮಾರಾಟಕ್ಕೆ ಆಸ್ಪದವನ್ನೇ ನೀಡದಿರಲು ‘ಶೂನ್ಯ ಸಹನೆ ನೀತಿ’ ಅಳವಡಿಸಿಕೊಂಡಿರುವುದನ್ನು ಖಾತರಿಪಡಿಸುವ ಪತ್ರವನ್ನು ಸಂಸ್ಥೆಯ ಡೀನ್‌ ನೀಡಿದ್ದಾರೆ. ವಿದ್ಯಾರ್ಥಿಗಳ ಲಾಕರ್‌ಗಳು, ಬ್ಯಾಗ್‌ಗಳನ್ನು ಕಾಲೇಜಿನ ಅಧಿಕಾರಿಗಳೇ ಆಗಾಗ ತಪಾಸಣೆಗೆ ಒಳಪಡಿಸುತ್ತಿದ್ದಾರೆ. ಮಾದಕ ಪದಾರ್ಥ ಸೇವನೆ ತಡೆಯಲು ಕಾಲೇಜು ಕಠಿಣ ಕ್ರಮಕೈಗೊಂಡಿದ್ದಾರೆ’ ಎಂದು ತಿಳಿಸಿದರು.

‘ಮಾದಕ ಪದಾರ್ಥ ದಂಧೆ ಮಟ್ಟಹಾಕಲು ಪೊಲೀಸ್‌ ಇಲಾಖೆ ನಡೆಸುತ್ತಿರುವ ತನಿಖೆಗೆ ಕಾಲೇಜಿನ ಆಡಳಿತವು ಸಂಪೂರ್ಣ ಸಹಕಾರ ನೀಡಿದೆ. ತಜ್ಞರ ಮೂಲಕ ಜಾಗೃತಿ ಕಮ್ಮಟಗಳನ್ನು ಹಮ್ಮಿಕೊಳ್ಳುವುದಕ್ಕೂ ಪೊಲೀಸರಿಗೆ ಸಹಕಾರ ನೀಡುವುದಾಗಿಯೂ ಕಾಲೇಜು ಭರವಸೆ ನೀಡಿದೆ’ ಎಂದರು.

‘ಮಾದಕ ಪದಾರ್ಥ ಸೇವನೆಯಿಂದಾಗುವ ಕೆಡುಕುಗಳ ವಿರುದ್ಧ ಇದರ ದುರ್ಬಳಕೆ ವಿರುದ್ಧ ನಿರಂತರ ಅಭಿಯಾನ ನಡೆಸಬೇಕಾಗಿದೆ’ ಎಂದರು.

‘ಸುಲಭವಾಗಿ ಹಣ ಗಳಿಸುವುದೇ ಮಾದಕ ಪದಾರ್ಥ ಮಾರಾಟಗಾರರ ಉದ್ದೇಶ. ದೇಶದ ಆರ್ಥಿಕತೆಯನ್ನು ಅಸ್ಥಿರಗೊಳಿಸುವ ಸಂಚಿನ ಭಾಗವಾಗಿ ಇದನ್ನು ನಡೆಸುತ್ತಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ನೀಲ್‌ ಕಿಶೋರಿಲಾಲ್‌ ರಾಮ್‌ಜಿ ಷಾ ವಿಸಾ ರದ್ದುಪಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ಬರೆಯಲಿದ್ದೇವೆ’ ಎಂದರು.

ನಗರದಲ್ಲಿ ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿರುವ ಮನರಂಜನಾ ಕ್ಲಬ್‌ಗಳನ್ನು ಮುಚ್ಚಿಸಲು ಕ್ರಮಕೈಗೊಳ್ಳುವುದಾಗಿ ಕಮಿಷನರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.