ADVERTISEMENT

ಜವಳಿ ಉದ್ಯಮಕ್ಕೆ ಹೊಡೆತ: ಸಾಮಾಜಿಕ ಜಾಲತಾಣದಲ್ಲಿ ವ್ಯಾಪಾರಿ ಅಳಲು

​ಪ್ರಜಾವಾಣಿ ವಾರ್ತೆ
Published 20 ಮೇ 2021, 12:43 IST
Last Updated 20 ಮೇ 2021, 12:43 IST

ಮೂಡುಬಿದಿರೆ: ಲಾಕ್‌ಡೌನ್‌ನಿಂದ ಜವಳಿ ಉದ್ಯಮಕ್ಕೆ ಆಗಿರುವ ಆರ್ಥಿಕ ಹೊಡೆದ ಬಗ್ಗೆ ಇಲ್ಲಿನ ಬಟ್ಟೆ ವ್ಯಾಪಾರಿಸದಾಶಿವ ನೆಲ್ಲಿಮಾರ್ ಅಳಲು ತೊಡಿಕೊಂಡ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

‘ಲಾಕ್‌ಡೌನ್‌ ನಿಯಮ ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎಂಬಂತಿದೆ. ಬಡ ಬಟ್ಟೆ ವ್ಯಾಪಾರಿಗಳು ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದ್ದಾರೆ. ಇತರ ಅಗತ್ಯ ವಸ್ತುಗಳಂತೆ ಜವಳಿ ಅಂಗಡಿ ತೆರೆಯಲು ಅವಕಾಶ ನೀಡಬೇಕಿತ್ತು. ಸೀಸನ್ ವ್ಯಾಪಾರ ನಂಬಿ ಲಕ್ಷಾಂತರ ರೂಪಾಯಿ ಬಟ್ಟೆ ದಾಸ್ತಾನು ಮಾಡಿದ್ದೆವು. ಫ್ಯಾಷನ್ ಹಳೆಯದಾದರೆ ಗ್ರಾಹಕರು ಖರೀದಿಸುವುದಿಲ್ಲ. ಅರ್ಧ ದರದಲ್ಲಿ ಮಾರಾಟ ಮಾಡಿ ಕೈಸುಟ್ಟುಕೊಳ್ಳಬೇಕು. ಬಟ್ಟೆ ಅಂಗಡಿ ತೆರೆಯುವಾಗ ಆಷಾಢ ಮಾಸವಾಗಿತ್ತು. ರಂಜಾನ್‌ನಲ್ಲೂ ವ್ಯಾಪಾರ ಇರಲಿಲ್ಲ.

‘ಕಳೆದ ವರ್ಷ ದೇಶದಲ್ಲಿ ಕೋವಿಡ್ ಹರಡಲು ತಬ್ಲಿಘಿಗಳು ಕಾರಣ ಎಂದು ಆಕಾಶ–ಭೂಮಿ ಒಂದಾಗುವಂತೆ ಕೆಲವು ಮಾಧ್ಯಮಗಳು ಮುಸ್ಲಿಮರನ್ನು ಟೀಕಿಸಿದ್ದರು. ಇದರಿಂದ ಬೇಸತ್ತು ಈ ಸಮುದಾಯ ರಂಜಾನ್ ಉಪವಾಸದ ಅವಧಿಯಲ್ಲಿ ಬಟ್ಟೆ ಖರೀದಿ ಮಾಡುವುದನ್ನೇ ನಿಲ್ಲಿಸಿದ ಕಾರಣ ದೇಶಕ್ಕೆ ₹ 1,000 ಕೋಟಿ ಜಿಎಸ್‌ಟಿ ನಷ್ಟ ಆಗಿದೆ. ಕೋವಿಡ್‌ನಿಂದ ನಮ್ಮಂತಹ ಮಧ್ಯಮ ವರ್ಗದ ಜವಳಿ ವ್ಯಾಪಾರಿಗಳ ಸ್ಥಿತಿ ದೇವರೇ ಬಲ್ಲ. ಉದ್ಯೋಗ ಕಡಿತದಿಂದ ಸಾವಿರಾರು ಮಂದಿ ಬೀದಿಗೆ ಬಿದ್ದಿದ್ದಾರೆ. ನನ್ನಲ್ಲಿ ಕೆಲಸಕ್ಕಿದ್ದ 18 ಜನರಲ್ಲಿ ಐದು ಮಂದಿಯನ್ನು ಮಾತ್ರ ಉಳಿಸಿಕೊಳ್ಳಲು ಸಾಧ್ಯವಾಗಿದೆ. ಕಡಿಮೆ ಶಿಕ್ಷಣ ಓದಿದವರಿಗೆ ನಾವು ಕೆಲಸ ಕೊಟ್ಟಿದ್ದೇವೆ. ಇವರಿಗೆ ಸರ್ಕಾರಿ ಕೆಲಸ ಕೊಡಲು ಸಾಧ್ಯವೇ? ನನ್ನಂತಹ ಜವಳಿ ವ್ಯಾಪಾರಿಗಳು ಬ್ಯಾಂಕ್ ಸಾಲ ಕಟ್ಟಲಾಗದೆ, ಮನೆ ಖರ್ಚು ನಿಭಾಯಿಸಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದು ವಿಡಿಯೊದಲ್ಲಿ ಅವರು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.