ಮೂಲ್ಕಿ : ಕಿನ್ನಿಗೋಳಿ ಸಮೀಪದ ಐಕಳದಲ್ಲಿ ಶನಿವಾರ ಆರಂಭಗೊಂಡ ಐಕಳಬಾವ ಕಾಂತಾಬಾರೆ–ಬೂದಾಬಾರೆ ಕಂಬಳದಲ್ಲಿ ಆಧುನಿಕ ತಂತ್ರಜ್ಞಾನದ ‘ಗೇಟ್’ ನಿಯಮ ಪ್ರಾಯೋಗಿಕವಾಗಿ ಜಾರಿಗೆ ಬಂದಿದೆ.
ಕಂಬಳವನ್ನು ಕಾಲಮಿತಿಯಲ್ಲಿ ಮುಗಿಸುವುದಕ್ಕಾಗಿ ಜಿಲ್ಲಾ ಕಂಬಳ ಸಮಿತಿ ಈ ವರ್ಷ ಹೊಸ ತಂತ್ರಜ್ಞಾನಗಳನ್ನು ಬಳಸುತ್ತಿದ್ದು ಅದಾನಿ ಸಮೂಹ ₹ 10 ಲಕ್ಷ ವೆಚ್ಚದ ಗೇಟ್ ತಂತ್ರಜ್ಞಾನವನ್ನು ಒದಗಿಸಿದೆ. ಕಂಬಳದ ಕರೆಯಲ್ಲಿ ಕೋಣಗಳನ್ನು ಓಟಕ್ಕೆ ಅಣಿಗೊಳಿಸುವ ‘ಗಂತಿ’ನಲ್ಲಿ ಗೇಟ್ ಇರಿಸಲಾಗುತ್ತದೆ. ಜಾಲರಿ (ಮೆಶ್) ಇರುವ ವಿಶಿಷ್ಟ ಗೇಟ್ ‘ಸ್ಕೈವ್ಯೂ’ ಟೆಕ್ನಾಲಜಿ ಸಂಸ್ಥೆ ಸಿದ್ಧಪಡಿಸಿದೆ.
ಐಕಳಬಾವ ಕಂಬಳದಿಂದ ಕಾಲಮಿತಿ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಲು ಕಂಬಳ ಸಮಿತಿ ಮುಂದಾಗಿದ್ದು ಕೋಣಗಳ ಯಜಮಾನರ ಗಮನ ಸೆಳೆಯಲು ಫ್ಲೆಕ್ಸ್ ಅಳವಡಿಸಿದೆ. ಇದರಲ್ಲಿ ಪ್ರತಿ ಸ್ಪರ್ಧೆಯ ಆರಂಭ ಮತ್ತು ಮುಕ್ತಾಯದ ಸಮಯವನ್ನು ನಮೂದಿಸಲಾಗಿದೆ. ಕೋಣಗಳನ್ನು ಅಣಿಗೊಳಿಸಲು ನಿಗದಿ ಮಾಡಿರುವ ಕೌಂಟ್ ಡೌನ್ ಅವಧಿಯನ್ನು ಕೂಡ ನಮೂದಿಸಲಾಗಿದೆ. ಹಗ್ಗ ಹಿರಿಯ, ಕನೆಹಲಗೆ ಮತ್ತು ಅಡ್ಡಹಲಗೆ ವಿಭಾಗಕ್ಕೆ 10 ನಿಮಿಷ, ಹಗ್ಗ ಕಿರಿಯ ಮತ್ತು ನೇಗಿಲು ಹಿರಿಯ ವಿಭಾಗಕ್ಕೆ 7 ನಿಮಿಷ ಮತ್ತು ನೇಗಿಲು ಕಿರಿಯ ವಿಭಾಗಕ್ಕೆ 5 ನಿಮಿಷಗಳ ಅವಧಿ ನೀಡಲಾಗಿದೆ.
ಅವಧಿ ಮೀರಿ ಕೋಣಗಳನ್ನು ಸ್ಪರ್ಧೆಗೆ ಇಳಿಸಿದರೆ ಅಂಪೈರ್ ನೀಡುವ ನಿರ್ಣಯವನ್ನು ಪಾಲಿಸಬೇಕಾಗುತ್ತದೆ ಎಂದು ತಿಳಿಸಲಾಗಿದೆ. ನಿಯಮಗಳನ್ನು ಪಾಲಿಸುವುದಾಗಿ ಕೋಣಗಳ ಯಜಮಾನರು ಒಪ್ಪಿಕೊಂಡಿದ್ದು ಹೊಸ ತಂತ್ರಜ್ಞಾನಕ್ಕೆ ಬೆಂಬಲ ಸೂಚಿಸಿದ್ದಾರೆ ಎಂದು ಸಮಿತಿಯ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.