ADVERTISEMENT

ಬಾಲಕಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ವ್ಯಕ್ತಿಗೆ ಜೀವಾವಧಿ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2022, 5:35 IST
Last Updated 21 ಅಕ್ಟೋಬರ್ 2022, 5:35 IST
   

ಮಂಗಳೂರು: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ ಆತ್ಮಹತ್ಯೆಗೆ ಪ್ರೇರಣೆ ನೀಡಿದ ಆರೋಪಿ ಪೊಲೀಸ್ ಕಾನ್‌ಸ್ಟೇಬಲ್‌ಗೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷೆನ್ಸ್‌ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದೆ.

ಜಿಲ್ಲಾ ಸಶಸ್ತ್ರ ಮೀಸಲು ಪಡೆಯಲ್ಲಿ ಪೊಲೀಸ್ ಕಾನ್‌ಸ್ಟೇಬಲ್ ಆಗಿದ್ದ ಬಜ್ಪೆ ಸಿದ್ಧಾರ್ಥನಗರದ ಪ್ರವೀಣ್ ಸಾಲ್ಯಾನ್ (35) ಶಿಕ್ಷೆಗೊಳಗಾದ ಆರೋಪಿ.

ಆರೋಪಿಯು 2015ರಲ್ಲಿ ಸಂತ್ರಸ್ತ ಬಾಲಕಿಯನ್ನು ಫೇಸ್‌ಬುಕ್ ಮೂಲಕ ಪರಿಚಯ ಮಾಡಿಕೊಂಡು, ಪ್ರೀತಿಸುವುದಾಗಿ ನಂಬಿಸಿ, ಮೊಬೈಲ್ ಫೋನ್ ಮತ್ತು ಸಾಮಾಜಿಕ ಜಾಲತಾಣದ ಮೂಲಕ ಸಂಪರ್ಕಿಸಿ, ಅಶ್ಲೀಲ ಸಂಭಾಷಣೆ ನಡೆಸುತ್ತಿದ್ದ. ನಂತರ ಬಾಲಕಿಯ ಮುಗ್ಧತೆಯನ್ನೇ ದಾಳವಾಗಿಸಿಕೊಂಡು, ₹ 1 ಲಕ್ಷ ಹಣದ ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ. ಇದರಿಂದ ನೊಂದ ಬಾಲಕಿ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಪ್ರಕರಣ ಬೆಳಕಿಗೆ ಬಂದ ಮೇಲೆ ಆರೋಪಿಯನ್ನು ಇಲಾಖೆಯಿಂದ ಅಮಾನತು ಮಾಡಲಾಗಿತ್ತು.

ADVERTISEMENT

ಈ ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ರ ನ್ಯಾಯಾಧೀಶೆ (ಎಫ್‌ಟಿಎಸ್‌ಸಿ-1 (ಪೋಕ್ಸೊ) ಮಂಜುಳಾ, ಆರೋಪಿಗೆ ಐಪಿಸಿ 305ರಡಿ ಜೀವಾವಧಿ ಶಿಕ್ಷೆ ಮತ್ತು ₹ 10 ಸಾವಿರ ದಂಡ ಹಾಗೂ ಸೆಕ್ಷನ್ 12ರಡಿ (ಪೋಕ್ಸೊ) 3 ವರ್ಷ ಕಠಿಣ ಸಜೆ ಹಾಗೂ ₹ 1,000 ದಂಡ ವಿಧಿಸಿ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ವಕೀಲೆ ಸಹನಾದೇವಿ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.