ADVERTISEMENT

6ಕ್ಕೆ ಪ್ರವೀಣ್, ರಾಜೇಶ್‌ ವೇಣು–ವೀಣಾ ಜುಗಲ್‌ಬಂದಿ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2022, 16:30 IST
Last Updated 5 ಡಿಸೆಂಬರ್ 2022, 16:30 IST
ಪ್ರವೀಣ್ ಗೊಡ್ಖಿಂಡಿ
ಪ್ರವೀಣ್ ಗೊಡ್ಖಿಂಡಿ   

ಮಂಗಳೂರು: ಸ್ಯಾಕ್ಸೊಫೋನ್ ವಾದಕ ಕದ್ರಿ ಗೋಪಾಲನಾಥ್‌ ಅವರ 73ನೇ ಜಯಂತಿ ಅಂಗವಾಗಿ ‘ಡಾ ಕದ್ರಿ ಗೋಪಾಲನಾಥ್ ಅಕಾಡೆಮಿ ಫಾರ್ ಆರ್ಟ್ಸ್’ ಆಯೋಜಿಸಿರುವ ವೀಣಾ–ವೇಣು ಜುಗಲ್‌ಬಂದಿ ಇದೇ 6ರಂದು ಸಂಜೆ 6.30ಕ್ಕೆ ನಡೆಯಲಿದೆ. ವೇಣುವಾದಕ ಪಂಡಿತ್‌ ಪ್ರವೀಣ್ ಗೋಡ್ಖಿಂಡಿ ಮತ್ತು ವೀಣಾ ವಾದಕ ವಿದ್ವಾನ್‌ ರಾಜೇಶ್ ವೈದ್ಯ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ಉರ್ವ ಸ್ಟೋರ್‌ನಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಕದ್ರಿ ಸಂಗೀತ ಸೌರಭ ಬೆಳಿಗ್ಗೆ 10 ಗಂಟೆಯಿಂದ ಸಂಜೆಯ ವರೆಗೆ ನಡೆಯಲಿದ್ದು ವಿದ್ವಾನ್ ಎಂ.ನಾರಾಯಣ ಅವರಿಗೆ ಜೀವಮಾನ ಶ್ರೇಷ್ಠ ಪ್ರಶಸ್ತಿಗೆ ಪ್ರದಾನ ಮಾಡಲಾಗುವುದು ಎಂದು ಅಕಾಡೆಮಿಯಪ್ರಧಾನ ಕಾರ್ಯದರ್ಶಿ ಕದ್ರಿ ಮಣಿಕಾಂತ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಜುಗಲ್‌ ಬಂದಿ ಕಾರ್ಯಕ್ರಮದಲ್ಲಿ ವಿದ್ವಾನ್ ಮೋಹನ ರಾಮನ್ (ಮೃದಂಗ), ಪಂಡಿತ್ ರಾಜೇಂದ್ರ ನಾಕೋಡ್ (ತಬಲಾ), ವಿದ್ವಾನ್ ಸಾಯಿ ಹರಿ (ಘಟಂ) ಮತ್ತು ವಿದ್ವಾನ್ ಬಿ.ರಾಜಶೇಖರ್ (ಮೋರ್ಸಿಂಗ್‌) ಪಕ್ಕವಾದ್ಯ ನುಡಿಸಲಿದ್ದಾರೆ ಎಂದು ಅವರು ತಿಳಿಸಿದರು.

ADVERTISEMENT

ಬೆಳಿಗ್ಗೆಯಿಂದ ನಿರಂತರ ಸಂಗೀತ ಮತ್ತು ನೃತ್ಯ ಕಾರ್ಯಕ್ರಮಗಳು ನಡೆಯಲಿದ್ದು ಗೋಪಾಲನಾಥ್‌ ಅವರ ಶಿಷ್ಯಂದಿರು ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದ ಅಂಗವಾಗಿ ಡಿಸೆಂಬರ್ 4ರಂದು ಗಾಯನ ಸ್ಪರ್ಧೆ ಏರ್ಪಡಿಸಲಾಗಿತ್ತು. ಮುಂದೆಯೂ ಸ್ಪರ್ಧೆಗಳು ನಡೆಯಲಿವೆ. ಜಾನಪದ ಅಧ್ಯಯನವೂ ನಡೆಯಲಿದೆ ಎಂದು ಅವರು ವಿವರಿಸಿದರು.

ಬೆಳಿಗ್ಗೆ 9.30ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ಎಕ್ಸ್‌ಪರ್ಟ್ ಕಾಲೇಜಿನ ಅಧ್ಯಕ್ಷ ನರೇಂದ್ರ ಎಲ್‌.ನಾಯಕ್ ಅವರು ಸಂಗೀತ ಸೌರಭವನ್ನು ಉದ್ಘಾಟಿಸುವರು. ಕಾರ್ಡೊಲೈಟ್‌ನ ಪ್ರಧಾನ ವ್ಯವಸ್ಥಾಪಕ ದಿವಾಕರ್ ಕದ್ರಿ, ಎಂಐಟಿಇ ಉಪಾಧ್ಯಕ್ಷೆ ಸವಿತಾ ಚೌಟ, ದಕ್ಷಿಣ ಕನ್ನಡ ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷೆ ಪಮ್ಮಿ ಕೊಡಿಯಾಲ್‌ಬೈಲ್‌, ಉದ್ಯಮಿ ಮುಖೇಶ್ ಹೆಗ್ಡೆ ಪಾಲ್ಗೊಳ್ಳಲಿದ್ದಾರೆ. ಸಂಜೆ 5.30ಕ್ಕೆ ಸಮಾರೋಪ ಸಮಾರಂಭದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಮೋಹನ ಆಳ್ವಾ, ಶಾಸಕ ವೇದವ್ಯಾಸ್ ಕಾಮತ್‌, ಪೊಲೀಸ್ ಕಮಿಷನರ್ ಶಶಿಕುಮಾರ್‌, ಉದ್ಯಮಿ ಮುಕುಂದ್ ಕಾಮತ್‌, ಮಲ್ಲಿಕಾ ಕಲಾವೃಂದದ ಪ್ರಧಾನ ಕಾರ್ಯದರ್ಶಿ ಸುಧಾಕರ್ ರಾವ್ ಪೇಜಾವರ, ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ ಬೈಲ್, ಉದ್ಯಮಿ ಲಕ್ಷ್ಮೀಶ ಭಂಡಾರಿ, ಕಲ್ಕೂರ ಪ್ರತಿಷ್ಠಾನದ ಪ್ರದೀಪ್ ಕುಮಾರ್ ಕಲ್ಕೂರ ಪಾಲ್ಗೊಳ್ಳುವರು ಎಂದು ತಿಳಿಸಿದರು.

ಗುರುಪ್ರಸಾದ್ ಕದ್ರಿ, ಅಂಬಿಕಾ ಮೋಹನ್ ಮತ್ತು ಮೈಮ್ ರಾಮದಾಸ್ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.