ಮಂಗಳೂರು: ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರ ಚಿನ್ನಾಭರಣ ಕದ್ದ ಆರೋಪದ ಮೇಲೆ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಎಸ್‌ಎಟಿಎಸ್‌ನಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರು ಬ್ಯಾಗೇಜ್ ನಿರ್ವಹಣಾ ಸಿಬ್ಬಂದಿಯನ್ನು ಬಂಧಿಸಲಾಗಿದೆ.
ಮಂಗಳೂರು ತಾಲ್ಲೂಕು ಕಂದಾವರದ ನಿತಿನ್, ಮೂಡುಪೆರಾರದ ಸದಾನಂದ, ಬಜಪೆಯ ರಾಜೇಶ್ ಹಾಗೂ ಪ್ರವೀಣ್ ಫರ್ನಾಂಡಿಸ್ ಬಂಧಿತರು.
ಆ.30ರಂದು ಎರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಮಂಗಳೂರಿಗೆ ಬಂದಿಳಿದ ಮಹಿಳಾ ಪ್ರಯಾಣಿಕರೊಬ್ಬರು, ಬ್ಯಾಗೇಜ್ ಬೆಲ್ಟ್‌ನಿಂದ ತಮ್ಮ ಲಗೇಜ್ ತೆಗೆದಾಗ ಅದರಲ್ಲಿರುವ ₹4.5 ಲಕ್ಷ ಮೌಲ್ಯದ 56 ಗ್ರಾಂ ಚಿನ್ನಾಭರಣ ಕಾಣೆಯಾಗಿದ್ದನ್ನು ಗಮನಿಸಿದ್ದಾರೆ. ಈ ಸಂಬಂಧ ಬಜಪೆ ಠಾಣೆಗೆ ಅವರು ದೂರು ನೀಡಿದ್ದರು. ಈ ದೂರನ್ನು ಆಧರಿಸಿ, ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ತನಿಖೆ ನಡೆಸುವ ವೇಳೆ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಎಸ್‌ಎಟಿಎಸ್‌ನಲ್ಲಿ ಲೋಡರ್, ಅನ್‌ಲೋಡರ್‌ಗಳಾಗಿ ಕೆಲಸ ಮಾಡುತ್ತಿದ್ದ ನಾಲ್ವರನ್ನು ವಿಚಾರಣೆ ನಡೆಸಲಾಗಿದೆ.
ವಿಚಾರಣೆ ವೇಳೆ ನಾಲ್ವರು ಸಿಬ್ಬಂದಿ, ಚಿನ್ನವನ್ನು ಕದ್ದಿರುವುದಾಗಿ ಒಪ್ಪಿಕೊಂಡಿದ್ದಾರೆ. ಜೊತೆಗೆ, ಕಳವು ಮಾಡಿದ ಆಭರಣವನ್ನು ಮೂಡುಪೆರಾರನ ರವಿರಾಜ್ ಎಂಬ ವ್ಯಕ್ತಿಗೆ ಮಾರಾಟ ಮಾಡಿರುವುದಾಗಿ ಹೇಳಿದ್ದಾರೆ. ಕಳವು ಮಾಡಿದ್ದ ಮಾಲನ್ನು ಪಡೆದ ಆರೋಪದ ಮೇಲೆ ರವಿರಾಜ್‌ನನ್ನು ಬಂಧಿಸಲಾಗಿದೆ. ಬಂಧಿತರಿಂದ ಕಳವಾದ ಮಾಲನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.
‘ಜನವರಿ ತಿಂಗಳಿನಲ್ಲಿ ಪ್ರಯಾಣಿಕ ಮನೋಹರ್ ಶೆಟ್ಟಿ ಅವರ ಬ್ಯಾಗ್‌ನಿಂದ ನಗದು ಕಳ್ಳತನ ಆಗಿರುವ ಬಗ್ಗೆ ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದಕ್ಕೆ ಸಂಬಂಧಿಸಿ ₹2 ಲಕ್ಷ ವಶಪಡಿಸಿಕೊಳ್ಳಲಾಗಿದೆ. ಹೆಚ್ಚಿನ ತನಿಖೆಗಾಗಿ ಆರೋಪಿಗಳನ್ನು ಪೊಲೀಸ್ ವಶಕ್ಕೆ ಪಡೆಯಲಾಗುವುದು’ ಎಂದು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.