ಮಂಗಳೂರು: ನಗರದ ಪಿವಿಎಸ್ ವೃತ್ತದ ಬಳಿಯ ಮೌರಿಷ್ಕಾ ಪಾರ್ಕ್ ಅಪಾರ್ಟ್‌ಮೆಂಟ್ ಸಮುಚ್ಚಯದ ಮನೆಯೊಂದರಿಂದ 53 ಗ್ರಾಂ ತೂಕದ ಚಿನ್ನಾಭರಣ ಕಳವಾದ ಬಗ್ಗೆ ಕದ್ರಿಯ ನಗರ ಪೂರ್ವ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
‘ನಾನು ಹಾಗೂ ನನ್ನ ಮಕ್ಕಳು ಉದ್ಯೋಗ ಸಲುವಾಗಿ ಕತಾರ್‌ನಲ್ಲಿ ವಾಸವಿದ್ದೇವೆ. ಮೌರಿಷ್ಕಾ ಪಾರ್ಕ್ ಅಪಾರ್ಟ್‌ಮೆಂಟ್ ಸಮುಚ್ಚಯದಲ್ಲಿ ನನ್ನ ಪತ್ನಿಯು ಆಕೆಯ ಅಕ್ಕನ ಮಗನ ಜೊತೆ ವಾಸವಿದ್ದರು. ಅನಾರೋಗ್ಯದ ಕಾರಣ ಆಕೆ ಜುಲೈ ಕೊನೆಯ ವಾರದಿಂದ ತವರು ಮನೆಯಲ್ಲಿ ವಾಸವಾಗಿದ್ದಾರೆ. ಅಪಾರ್ಟ್‌ಮೆಂಟ್ ಸಮುಚ್ಚಯದ ಮನೆಯಲ್ಲಿ ಪತ್ನಿಯ ಅಕ್ಕನ ಮಗ ಮಾತ್ರ ವಾಸವಾಗಿದ್ದ. ಅಕ್ಕನ ಮಗನ ಬಳಿ ಆ ಮನೆಯಲ್ಲಿದ್ದ ಚಿನ್ನಭರಣಗಳ ಕರಡಿಗೆ ತರುವಂತೆ ಈಚೆಗೆ ನನ್ ಪತ್ನಿ ಹೇಳಿದ್ದಳು. ಆದರೆ ಮನೆಯ ಕಪಾಟಿನಲ್ಲಿ ಇಟ್ಟಿದ್ದ ಚಿನ್ನಾಭರಣಗಳ ಕರಡಿಗೆ ಕಾಣೆಯಾಗಿತ್ತು.’
‘ಕರಡಿಗೆಯಲ್ಲಿ 21 ಗ್ರಾಂ ತೂಕದ ಒಂದು ಜೊತೆ ಚಿನ್ನದ ಬಳೆಗಳು, 12 ಗ್ರಾಂ ತೂಕದ ಬ್ರಾಸ್ಲೆಟ್, ಒಟ್ಟು 20 ಗ್ರಾಂ ತೂಕದ ನಾಲ್ಕು ಜೊತೆ ಬೆಂಡೋಲೆಗಳು (ವಜ್ರ, ಹವಳ, ಕಲ್ಲುಗಳನ್ನು ಅಳವಡಿಸಿದ್ದು) ಇದ್ದವು. ಅವುಗಳ ಒಟ್ಟು ಮೌಲ್ಯ ₹ 9.46 ಲಕ್ಷ ಆಗಬಹುದು. ನಮ್ಮ ಮನೆ ಕೆಲಸದಾಕೆ ಜುಲೈನಿಂದ ಕೆಲಸಕ್ಕೆ ಬಂದಿಲ್ಲ. ನಮ್ಮ ಫೋನ್ ಕರೆಯನ್ನೂ ಸ್ವೀಕರಿಸುತ್ತಿಲ್ಲ. ಆಕೆಯೇ ಚಿನ್ನಾಭರಣಗಳಿದ್ದ ಕರಡಿಗೆಯನ್ನು ಕದ್ದಿರುವ ಸಾಧ್ಯತೆ ಇದೆ ಎಂದು ಮನೆಯ ಮಾಲೀಕ ಜಗದೀಶ್ ಯು.ಎಸ್ ಅವರು ದೂರಿನಲ್ಲಿ ತಿಳಿಸಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.