ಮಂಗಳೂರು: 18 ಹೋಲ್‌ಗಳ ಗಾಲ್ಫ್ ಕೋರ್ಸ್ ಹಾಗೂ ಹೊನಲು ಬೆಳಕಿನ ಸೌಕರ್ಯಗಳ ಸೇರ್ಪಡೆ ಮೂಲಕ ಗಮನ ಸೆಳೆಯುತ್ತಿರುವ ಪಿಲಿಕುಳ ಗಾಲ್ಫ್ ಕ್ಲಬ್ (ಪಿಜಿಸಿ) ಈ ಪರಿಸರದಲ್ಲಿ ಈ ಕ್ರೀಡೆಯನ್ನು ಜನಪ್ರಿಯಗೊಳಿಸಲು ಮತ್ತೊಂದು ಹೆಜ್ಜೆ ಇಡಲು ಸಜ್ಜಾಗಿದೆ. ಗಾಲ್ಫ್ ಕ್ರೀಡೆಯ ಉತ್ಕೃಷ್ಟ ಮಟ್ಟದ ತರಬೇತಿಗಾಗಿ 'ಗಾಲ್ಫ್ ಎಕ್ಸೆಲೆನ್ಸ್ ಅಕಾಡೆಮಿ'ಯನ್ನು ಆರಂಭಿಸಲು ಮುಂದಾಗಿದೆ.
ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕ್ಲಬ್‌ನ ಕ್ಯಾಪ್ಟನ್ ಮನೋಜ್ ಶೆಟ್ಟಿ, ‘1999ರಲ್ಲಿ ಕಾರ್ಯಾರಂಭ ಮಾಡಿರುವ ಪಿಲಿಕುಳ ಗಾಲ್ಫ್ ಕ್ಲಬ್ ಈ ಪರಿಸರದಲ್ಲಿ ಈ ಕ್ರೀಡೆಯತ್ತ ಜನರನ್ನು ಸೆಳೆಯುವ ಯತ್ನದಲ್ಲಿ ತೊಡಗಿದೆ. ಕ್ಲಬ್ ವತಿಯಿಂದ ಗಾಲ್ಫ್ ಎಕ್ಸೆಲೆನ್ಸ್ ಅಕಾಡೆಮಿ ಸ್ಥಾಪಿಸಲಿದ್ದು, ನುರಿತ ತರಬೇತುದಾರು ಯುವ ಗಾಲ್ಫ್‌ಪಟುಗಳನ್ನು ತರಬೇತುಗೊಳಿಸಲಿದ್ದಾರೆ. ಮೈಕಲ್ ಡಿಸೋಜ ಅವರ ಕುಟುಂಬದವರು ಈ ಯೋಜನೆಗೆ ಆರ್ಥಿಕ ನೆರವು ಒದಗಿಸಲು ಮುಂದೆ ಬಂದಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂಬರುವ ಮೇ 31ರ ಒಳಗೆ ಇದು ಕಾರ್ಯಾರಂಭ ಮಾಡಲಿದೆ’ ಎಂದರು.
‘ಅಕಾಡೆಮಿಯಲ್ಲಿ 20– ಬೇ ಗಾಲ್ಫ್ ಟ್ರೈನಿಂಗ್ ಸೌಕರ್ಯ ಇರಲಿದೆ. ಉದಯೋನ್ಮುಖ ಗಾಲ್ಫ್‌ಪಟುಗಳು ಇಲ್ಲಿ ಅಭ್ಯಾಸ ನಡೆಸಬಹುದು ಮತ್ತು ಜೊತೆಯಲ್ಲೇ ವೃತ್ತಿಪರ ತರಬೇತಿಯನ್ನೂ ಪಡೆಯಬಹುದು. ಈ ಪ್ರದೇಶದಿಂದ ಮುಂದಿನ 10 ವರ್ಷಗಳಲ್ಲಿ ಒಂದೆರಡು ಮಂದಿಯಾದರೂ ವೃತ್ತಿಪರ ಗಾಲ್ಫ್‌ಪಟುಗಳು ರೂಪುಗೊಳ್ಳುವಂತಾಗಬೇಕು ಎಂಬುದು ನಮ್ಮ ಉದ್ದೇಶ’ ಎಂದರು.
‘ಈ ಅಕಾಡೆಮಿ ಸ್ಥಾಪನೆ ಯೋಜನೆಯನ್ನು ನಾವು ಪಿಲಿಕುಳ ಗಾಲ್ಫ್ ಕ್ಲಬ್ 3.0 ಎಂದು ಹೆಸರಿಸಿದ್ದೇವೆ. ಈ ಸಂಬಂಧ ಮೂರು ಪ್ರಸಿದ್ಧ ಗಾಲ್ಫ್ ಕೋಚಿಂಗ್ ಅಕಾಡೆಮಿಗಳನ್ನು ಸಂಪರ್ಕಿಸಿದ್ದೇವೆ. ನಮ್ಮ ಕ್ಲಬ್‌ಗೆ ಭೇಟಿ ನೀಡಲಿರುವ ಆ ಕೋಚಿಂಗ್ ಅಕಾಡೆಮಿಗಳ ಪ್ರತಿನಿಧಿಗಳು, ಅವರ ಅನುಭವ ಆಧರಿತ ಸಲಹೆಗಳನ್ನು ಹಂಚಿಕೊಳ್ಳಲಿದ್ದಾರೆ. ಆ ಬಳಿಕ ಅಕಾಡೆಮಿಗೆ ಅಂತಿಮ ರೂಪ ನೀಡಲಿದ್ದೇವೆ. ಇಲ್ಲಿ ತರಬೇತಿ ಪಡೆಯುವವರ ವಾಸ್ತವ್ಯಕ್ಕೆ ಡಾರ್ಮೆಟರಿಗಳನ್ನು ನಿರ್ಮಿಸಲಿದ್ದೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.