ಬಿಜೆಪಿ ಕಾರ್ಯಕರ್ತರು ರಸ್ತೆ ತಡೆ ನಡೆಸಿದರು
ಮಂಗಳೂರು: ಸರ್ಕಾರಿ ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಶೇ 4 ಮೀಸಲಾತಿ ನೀಡಿ, ಕಾಂಗ್ರೆಸ್ ಸರ್ಕಾರ ಓಲೈಕೆ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಶನಿವಾರ ಇಲ್ಲಿ ಪ್ರತಿಭಟನೆ ನಡೆಸಿದರು.
ಕ್ಲಾಕ್ ಟವರ್ ಎದುರು ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಅವರು, ಈ ನಾಡು ಶರಣರು, ಸಂತರು, ಸೂಫಿ ಸಂತರ ನಾಡು. ಈ ನಾಡಿನಲ್ಲಿ ದುರಾಡಳಿತ ಮಾಡುತ್ತಿರುವವರಿಗೆ ಎಚ್ಚರಿಕೆ ಕೊಡಲು ಪ್ರತಿಪಕ್ಷವಾಗಿ ಬಿಜೆಪಿ ಪ್ರತಿಭಟನೆ ಮಾಡಿದರೆ 18 ಶಾಸಕರನ್ನು ಆರು ತಿಂಗಳು ಅಮಾನತು ಮಾಡಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರಾಜಕೀಯ ದರ್ಪ ತೋರಿದೆ. ಸಿದ್ದರಾಮಯ್ಯ ಈ ಹಿಂದಿನ ಸದನದ ಕಲಾಪಗಳ ವಿಡಿಯೊವನ್ನು ಒಮ್ಮೆ ನೋಡಲಿ. ತಾವು ಪ್ರತಿಪಕ್ಷದ ನಾಯಕರಿದ್ದ ಸಂದರ್ಭದಲ್ಲಿ, ವಿಧಾನಸಭೆಯಲ್ಲಿ ತೊಡೆತಟ್ಟಿದ್ದನ್ನು ನೋಡಬೇಕು. ವಿಧಾನ ಪರಿಷತ್‌ನಲ್ಲಿ ಸಭಾಪತಿ ಪೀಠದಲ್ಲಿದ್ದವರನ್ನು ಎಳೆದಾಡಿದ್ದನ್ನು ನೋಡಬೇಕು’ ಎಂದರು.
ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಪ್ರತಿಭಟನೆ ಮಾಡುವ ಹಕ್ಕು ಇದೆ. ಆದರೆ, ಗೂಂಡಾಗಿರಿ ಮಾಡುವ ಹಕ್ಕನ್ನು ಪಡೆದುಕೊಂಡು, ಕಾನೂನು ಕೈಗೆತ್ತಿಕೊಂಡವರು ಕಾಂಗ್ರೆಸ್‌ನವರು. ಬಿಜೆಪಿ ಶಾಸಕರು ಇವರಂತೆ ನಡೆದುಕೊಂಡಿಲ್ಲ, ಕೈಯಲ್ಲಿದ್ದ ಪೇಪರ್‌ಗಳನ್ನು ಹರಿದು ಬಿಸಾಡಿದ್ದಾರೆ. ಈ ಕಾರಣಕ್ಕೆ ನಿಯಮಾವಳಿಗಳ ಉಲ್ಲಂಘನೆ ಆಗಿದೆ ಎಂದು ಆರೋಪಿಸಿ, ಅವರನ್ನು ಆರು ತಿಂಗಳು ಅಮಾನತು ಮಾಡಲಾಗಿದೆ. ಈ ಹೋರಾಟವನ್ನು ನಾವು ಮುಂದುವರಿಸುತ್ತೇವೆ ಎಂದು ಹೇಳಿದರು.
ಸಿದ್ದರಾಮಯ್ಯ ಅವರಿಗೆ ಅಧಿಕಾರದಲ್ಲಿ ಮುಂದುವರಿಯಲು ಯಾವುದೇ ನೈತಿಕತೆ ಇಲ್ಲ. ಗೌರವದಿಂದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜ್ಯದ ಜನರ ಕ್ಷಮೆ ಕೇಳಬೇಕು. ದೇಶದಲ್ಲಿ ಮೋದಿ ಸರ್ಕಾರ ಅಭಿವೃದ್ಧಿಯಲ್ಲಿ ತೊಡಗಿದ್ದರೆ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ಹಗರಣಗಳನ್ನು ನಡೆಸುತ್ತಿದೆ. ಅವರದೇ ಸರ್ಕಾರದ ಸಚಿವ ಕೆ.ಎನ್. ರಾಜಣ್ಣ, ಸತೀಶ ಜಾರಕಿಹೊಳಿ ಹನಿಟ್ರ್ಯಾಪ್ ಆಗಿದೆ ಹೇಳುತ್ತಾರೆ ಎಂದು ಟೀಕಿಸಿದರು.
ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಮಾತನಾಡಿ, ನೆಹರೂ ಕಾಲದಿಂದಲೂ ಮತ ಬ್ಯಾಂಕ್ ರಾಜಕೀಯ ಕಾಂಗ್ರೆಸ್ ಪರಂಪರೆಯಾಗಿ ಬಂದಿದೆ ಎಂದರು.
ಕಾಂಗ್ರೆಸ್ ಪಕ್ಷವು ಹಿಂದೂ- ಮುಸ್ಲಿಮರ ನಡುವೆ ಕಂದಕ ಮೂಡಿಸಿದೆ. ಮುಂದಾದರೂ ಒಂದಾಗಿ ಬದುಕಬಹುದೆಂದರೆ ಈಗಿನ ನೀತಿಗಳು ಮತ್ತಷ್ಟು ಒಡಕು ಮೂಡಿಸುತ್ತಿವೆ. ಬಿಜೆಪಿ ಸರ್ಕಾರವು ಮುಸ್ಲಿಮರ ಪರ ಅನೇಕ ಕಾನೂನುಗಳನ್ನು ಜಾರಿಗೊಳಿಸಿದೆ. ಅಲ್ಪಸಂಖ್ಯಾತರಿಗೆ ಅನ್ಯಾಯ ಆದಾಗ ಬಿಜೆಪಿ ಸ್ಪಂದಿಸುತ್ತದೆ, ಆದರೆ, ಓಲೈಸುವ ಕೆಲಸ ಮಾಡುವುದಿಲ್ಲ ಎಂದರು.
ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ, ಪ್ರಮುಖರಾದ ಪ್ರತಾಪಸಿಂಹ ನಾಯಕ್, ಕಿಶೋರ್ ಬೊಟ್ಯಾಡಿ, ಸಂಜೀವ ಮಠಂದೂರು, ಪದ್ಮನಾಭ ಕೊಟ್ಟಾರಿ, ನಂದನ ಮಲ್ಯ, ರವಿಶಂಕರ ಮಿಜಾರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.