
ಗುಂಡ್ಯ (ಉಪ್ಪಿನಂಗಡಿ): ರಾಷ್ಟ್ರೀಯ ಹೆದ್ದಾರಿ 75ರ ಹಾಸನ–ಬೆಂಗಳೂರು ರಸ್ತೆಯಲ್ಲಿರುವ ಗುಂಡ್ಯ ಗ್ರಾಮವು ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಗ್ರಾಮವಾಗಿದ್ದು, ಇಲ್ಲಿನ ಬಸ್ ತಂಗುದಾಣ ಕಸದ ತೊಟ್ಟಿಯಾಗಿ ಮಾರ್ಪಟ್ಟಿದೆ.
ಎರಡು ವರ್ಷದ ಹಿಂದೆ ಶಿರಾಡಿ ಗ್ರಾಮ ಪಂಚಾಯಿತಿಯು ಪ್ರಯಾಣಿಕರ ಅನುಕೂಲಕ್ಕಾಗಿ ಇಲ್ಲಿ ಶೆಡ್‌ವೊಂದನ್ನು ನಿರ್ಮಿಸಿತ್ತು. ಅದು ಭಾರಿ ಗಾಳಿ ಮಳೆಗೆ 6 ತಿಂಗಳಲ್ಲಿ ಮುರಿದು ಬಿದ್ದಿದೆ.
ದಿನದ 24 ಗಂಟೆಯೂ ಜನಸಂದಣಿ: ನಿತ್ಯ ರಾಜ್ಯದ ವಿವಿಧ ಭಾಗಗಳಿಂದ ಬರುವ ಪ್ರವಾಸಿಗರು ಇಲ್ಲಿ ಇಳಿದು ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳದತ್ತ ಪ್ರಯಾಣ ಬೆಳೆಸುತ್ತಾರೆ. ದಿನದ 24 ಗಂಟೆಯೂ ಬಸ್ ಸಂಚಾರ ಇರುವುದರಿಂದ ಇದು ಸದಾ ಜನಸಂದಣಿಯ ಸ್ಥಳವಾಗಿದೆ. ಬಸ್ಸಿನಿಂದ ಇಳಿದು ಬೇರೊಂದು ಬಸ್ ಬರುವ ತನಕ ಕುಳಿತುಕೊಳ್ಳಲು ಜನರಿಗೆ ತಂಗುದಾಣವೇ ಇಲ್ಲದ ಕಾರಣ ಜೀವ ಭಯದಲ್ಲೇ ಹೆದ್ದಾರಿಯ ಬದಿಯಲ್ಲಿಯೇ ನಿಲ್ಲುವಂತಾಗಿದೆ.
ಗಬ್ಬು ವಾಸನೆ: ಸ್ಥಳೀಯ ವ್ಯಾಪಾರಸ್ಥರು ಅಂಗಡಿಗಳ ತ್ಯಾಜ್ಯವನ್ನು ತಂಗುದಾಣದ ಮುಂಭಾಗದಲ್ಲೇ ಸುರಿಯಲಾರಂಭಿಸಿದ್ದು, ಅದು ಕೊಳೆತು ಗಬ್ಬು ವಾಸನೆ ಬರುತ್ತಿದೆ. ಅಲ್ಲದೇ ಪ್ಲಾಸ್ಟಿಕ್, ಕಸಕಡ್ಡಿ ರಾಶಿಯಾಗಿ ಬೆಂಕಿ ಹಾಕಿ ಸುಟ್ಟಿದ್ದಾರೆ. ಇಲ್ಲಿ ಯಾತ್ರಿಕರು ದುರ್ವಾಸನೆ ನಡುವೆ ಮೂಗು ಮುಚ್ಚಿಕೊಂಡು ನಿಲ್ಲಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ತ್ಯಾಜ್ಯ ತೆರವುಗೊಳಿಸುವ ಕಾರ್ಯಕ್ಕೆ ಮುಂದಾಗಬೇಕು. ಸ್ಥಳ ಪರಿಶೀಲನೆ ನಡೆಸಿ, ತಂಗುದಾಣವನ್ನು ದುರಸ್ತಿ ಅಥವಾ ನೂತನವಾಗಿ ನಿರ್ಮಿಸಬೇಕು ಎಂದು ಗುಂಡ್ಯ ಗ್ರಾಮದ ಯತೀಶ್ ಕುಮಾರ್ ಒತ್ತಾಯಿಸಿದ್ದಾರೆ.
‘ಅರಣ್ಯ ಇಲಾಖೆ ಅಡ್ಡಿ’
ಪ್ರಯಾಣಿಕರ ತಂಗುದಾಣ ಸೇರಿ ಅಂಗಡಿಯೊಂದನ್ನು ವ್ಯಕ್ತಿಯೊಬ್ಬರು ಹರಾಜಿನಲ್ಲಿ ಪಡೆದುಕೊಂಡಿದ್ದು ಅವರ ಅವಧಿ ಮುಗಿದ ಬಳಿಕವೂ ಬಿಡ್ ಹಣ ಕಟ್ಟದೆ ಬಾಕಿ ಇರಿಸಿಕೊಂಡಿದ್ದರು. ಹೀಗಾಗಿ ಅದನ್ನು ಅಮಾನತು ಮಾಡಲಾಗಿದೆ.ಪ್ರಕರಣ ಈಗ ನ್ಯಾಯಾಲಯದಲ್ಲಿದೆ. ಬೇರೆ ಕಡೆ ಪ್ರಯಾಣಿಕರ ತಂಗುದಾಣ ಮಾಡಲು ಸರ್ಕಾರಿ ಜಾಗ ಇಲ್ಲ. ಅಲ್ಲದೇ ಅದಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಅವಕಾಶ ನೀಡುತ್ತಿಲ್ಲ. ಹೀಗಾಗಿ ಹೊಸದಾಗಿ ಪ್ರಯಾಣಿಕರ ತಂಗುದಾಣ ಮಾಡಲು ಅಸಾಧ್ಯವಾಗಿದೆ. ಕಾರ್ತೀಕೇಯನ್ ಅಧ್ಯಕ್ಷ ಶಿರಾಡಿ ಗ್ರಾಮ ಪಂಚಾಯಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.