ADVERTISEMENT

ನೈಜ ಆರೋಪಿಗಳನ್ನು ಬಂಧಿಸಿ, ಶಾಂತಿ ಮರುಸ್ಥಾಪಿಸಿ: ಕುಮಾರಸ್ವಾಮಿ ಆಗ್ರಹ

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2022, 2:03 IST
Last Updated 2 ಆಗಸ್ಟ್ 2022, 2:03 IST
ಸುಳ್ಯ ತಾಲ್ಲೂಕು ಕಳಂಜದಲ್ಲಿರುವ ಮಸೂದ್ ಮನೆಗೆ ಭೇಟಿ ನೀಡಿದ ಎಚ್‌.ಡಿ.ಕುಮಾರಸ್ವಾಮಿ ಅವರು ಮಸೂದ್ ತಾಯಿಗೆ ₹ 5 ಲಕ್ಷ ಮೊತ್ತದ ಚೆಕ್ ನೀಡಿದರು.
ಸುಳ್ಯ ತಾಲ್ಲೂಕು ಕಳಂಜದಲ್ಲಿರುವ ಮಸೂದ್ ಮನೆಗೆ ಭೇಟಿ ನೀಡಿದ ಎಚ್‌.ಡಿ.ಕುಮಾರಸ್ವಾಮಿ ಅವರು ಮಸೂದ್ ತಾಯಿಗೆ ₹ 5 ಲಕ್ಷ ಮೊತ್ತದ ಚೆಕ್ ನೀಡಿದರು.   

ಮಂಗಳೂರು: ‘ಹತ್ಯೆ ಪ್ರಕರಣಗಳಲ್ಲಿ ಯಾವುದೇ ರಾಜಕೀಯ ಪಕ್ಷಗಳ ಮುಖಂಡರು, ಸಂಘಟನೆಗಳ ಪ್ರಮುಖರ ಮಕ್ಕಳು ಬಲಿಯಾಗುವುದಿಲ್ಲ. ಬದಲಾಗಿ, ಕಾರ್ಮಿಕರ ಮಕ್ಕಳು, ಜನಸಾಮಾನ್ಯರ ಮಕ್ಕಳು ಬಲಿಯಾಗುತ್ತಿದ್ದಾರೆ. ಈ ಹಿಂದೆ ನಡೆದಿರುವ ಹತ್ಯೆ ಪ್ರಕರಣಗಳಲ್ಲೂ ಆರೋಪಿಗಳಿಗೆ ಕನಿಷ್ಠ ಪ್ರಮಾಣದ ಶಿಕ್ಷೆ ಆಗಿದೆ. ಕಾಟಾಚಾರಕ್ಕೆ ಯಾರನ್ನೋ ಬಂಧಿಸುವ ಕೆಲಸ ಆಗಬಾರದು. ನೈಜ ಆರೋಪಿಗಳನ್ನು ಬಂಧಿಸಿ, ಕರಾವಳಿಯಲ್ಲಿ ಶಾಂತಿ ಮರು ಸ್ಥಾಪಿಸಬೇಕು’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಆಗ್ರಹಿಸಿದರು.

ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕರಾವಳಿಯಲ್ಲಿ ಎರಡು ಪ್ರಮುಖ ರಾಷ್ಟ್ರೀಯ ಪಕ್ಷಗಳು ಹಿಂದೂ– ಮುಸ್ಲಿಮರ ನಡುವೆ ಕಂದಕ ಸೃಷ್ಟಿಸಿವೆ. ಬೇರೆ ಬೇರೆ ಘಟನೆಗಳು ನಡೆದಾಗ ಸರ್ಕಾರ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದರೂ, ಹತ್ಯೆ ನಡೆಸಿರುವ ಆರೋಪಿಗಳಿಗೆ ಯಾವ ಹಂತದ ಶಿಕ್ಷೆಯಾಗಿದೆ’ ಎಂದು ಪ್ರಶ್ನಿಸಿದರು.

‘ಕಳೆದ 15 ದಿನಗಳಲ್ಲಿ ಹತ್ಯೆಯಾಗಿರುವ ಮೂವರು ಯುವಕರ ಮನೆಗೆ ಭೇಟಿ ನೀಡಿದ್ದೇನೆ. ‘ಹಂತಕರಿಗೆ ಕಠಿಣ ಶಿಕ್ಷೆ ಆಗಬೇಕು, ನಮ್ಮ ಮನೆ ಮಕ್ಕಳಂತೆ ಬೇರೆಯವರಿಗೆ ಈ ರೀತಿ ಆಗಬಾರದು’ ಎಂಬುದು ಮಕ್ಕಳನ್ನು ಕಳೆದುಕೊಂಡಿರುವ ಮೂವರೂ ಪಾಲಕರ ಆಗ್ರಹವಾಗಿದೆ. ಪಾಲಕರ ಜತೆ ವಿವರವಾಗಿ ಚರ್ಚಿಸಿದ್ದು, ಈ ವಿಷಯವನ್ನು ಸದನದಲ್ಲೂ ಪ್ರಸ್ತಾಪಿಸುತ್ತೇನೆ’ ಎಂದರು.

ADVERTISEMENT

‘ಆಡಳಿತ ಪಕ್ಷದ ಶಾಸಕರೊಬ್ಬರು ‘ನಮ್ಮ ಕಾರ್ಯಕರ್ತರಿಗೆ ತೊಂದರೆ ಕೊಟ್ಟರೆ ಸುಮ್ಮನಿರಲು ಸಾಧ್ಯವಿಲ್ಲ’ ಎನ್ನುತ್ತಾರೆ. ಶಾಸಕರೇ ಹೀಗೆ ಹೇಳಿಕೆ ನೀಡಿದರೆ, ಪೊಲೀಸರು ಹೇಗೆ ಸ್ವತಂತ್ರವಾಗಿ ತನಿಖೆ ಮಾಡಲು ಸಾಧ್ಯವಿದೆ? ಘಟನೆ ನಡೆದು ಅನೇಕ ದಿನಗಳ ಮೇಲೆ ಡಿಜಿಪಿ ಇಲ್ಲಿ ಬಂದು ಹೋಗಿದ್ದಾರೆ. ಸಂತ್ರಸ್ತರ ಕುಟುಂಬವನ್ನೂ ಭೇಟಿ ಮಾಡದೆ, ತರಾತುರಿಯಲ್ಲಿ ಬಂದು ಹೋಗುವ ಕೆಲಸ ಏನಿತ್ತು’ ಎಂದು ವಾಗ್ದಾಳಿ ನಡೆಸಿದರು.

‘ರಾಜ್ಯದ ಪೊಲೀಸರಿಗೆ ಮುಕ್ತ ಸ್ವಾತಂತ್ರ್ಯ ನೀಡಿದರೆ ಆರೋಪಿಗಳನ್ನು ಬಂಧಿಸುತ್ತಾರೆ. ಎನ್‌ಐಎ ತನಿಖೆ ಬೇಕಾಗಿಲ್ಲ. ಈ ಹಿಂದೆ ಭಟ್ಕಳದ ಶಾಸಕರಾಗಿದ್ದ ಚಿತ್ತರಂಜನ್ ಕೊಲೆ ಪ್ರಕರಣವನ್ನು ಎನ್ಐಎಗೆ ವಹಿಸಿದ್ದರು. ಫಲಿತಾಂಶ ಸಿಗಲಿಲ್ಲ. ಮೂರು ಪ್ರಕರಣಗಳ ಆರೋಪಿಗಳನ್ನು ಬಂಧಿಸಲು ರಾಜ್ಯದ ಪೊಲೀಸರು ಸಮರ್ಥರು’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿದರು.

ವಿಧಾನ ಪರಿಷತ್ ಸದಸ್ಯರಾದ ಬಿ.ಎಂ. ಫಾರೂಕ್, ಭೋಜೇಗೌಡ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಮಾಧವ ಗೌಡ, ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಯೋಗೀಶ್ ಶೆಟ್ಟಿ, ಎಂ.ಬಿ.ಸದಾಶಿವ, ಮುಹಮ್ಮದ್ ಕುಂಞ, ಸುಶೀಲ್ ನರೊನ್ನಾ, ರಮೀಝಾ ನಝೀರ್, ವಸಂತ ಪೂಜಾರಿ, ನಝೀರ್ ಉಳ್ಳಾಲ, ಅಕ್ಷಿತ್ ಸುವರ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.