ಬಂಟ್ವಾಳ: ಭಾರಿ ಮಳೆಯಿಂದ ಅಪಾಯಕಾರಿ ಮಟ್ಟ ಮೀರಿ (10.5 ಮೀಟರ್) ಹರಿದಿದ್ದ ನೇತ್ರಾವತಿ ನದಿಯಲ್ಲಿ ಬುಧವಾರ ಸಂಜೆ ವೇಳೆಗೆ ನೀರು 6.8 ಮೀಟರ್‌ಗೆ ಇಳಿದಿದ್ದು, ರಾತ್ರಿ ವೇಳೆ ನೀರಿನ ಮಟ್ಟ ಮತ್ತೆ 7.1 ಮೀಟರ್‌ಗೆ ಹೆಚ್ಚಳವಾಗಿದೆ.
ಮಧ್ಯಾಹ್ನ ಬಳಿಕ ಪಶ್ಚಿಮಘಟ್ಟದ ತಪ್ಪಲಿನ ಪ್ರದೇಶಗಳಲ್ಲಿ ಭಾರಿ ಮಳೆಯಾಗಿದ್ದರಿಂದ ನದಿಯಲ್ಲಿ ನೀರಿನ ಹರಿವು ಹೆಚ್ಚಆಗಿದೆ.
ಮಾಣಿ ಗ್ರಾಮದ ಸೂರಿಕುಮೇರು ಎಂಬಲ್ಲಿ ಹಮೀದ್ ಎಂಬುವರ ಮನೆ ಗೋಡೆ ಕುಸಿದು ಪಕ್ಕದ ಮನೆಗೂ ಹಾನಿಯಾಗಿದೆ. ಪುಣಚ ಗ್ರಾಮದ ಬಡೆಕನಡ್ಕ ನಿವಾಸಿ ಚೋಮ ಎಂಬುವರ ಮನೆಗೆ ಹಾನಿಯಾಗಿದೆ. ಪುದು ಗ್ರಾಮದ ನೀರೊಲ್ಬೆ ನಿವಾಸಿ ಬಾಬು ಶೆಟ್ಟಿ ಮನೆಯ ತಡೆಗೋಡೆ ಕುಸಿದಿದೆ. ಮಮ್ತಾಜ್ ಅಬೂಬಕ್ಕರ್ ಎಂಬುವರ ಮನೆ ಗೋಡೆ ಮತ್ತು ಚಾವಣಿಗೆ ಹಾನಿಗೀಡಾಗಿದೆ. ನೇತ್ರಾವತಿ ನದಿ ನೀರಿನ ಜತೆಗೆ ಹರಿದು ಬಂದ ಪಾಸ್ಟಿಕ್ ತ್ಯಾಜ್ಯಗಳು ಅಲ್ಲಲ್ಲಿ ಗುಡ್ಡೆಯಂತೆ ಶೇಖರಣೆಗೊಂಡಿವೆ.
ಸೇತುವೆ ಮುಳುಗಡೆ
ಮೂಡುಬಿದಿರೆ ತಾಲ್ಲೂಕಿನ ಆಯರಗುಡ್ಡೆ ಪಣಪಿಲ ಶಾಲೆ ಮತ್ತು ಬೋರುಗುಡ್ಡೆಯನ್ನು ಸಂಪರ್ಕಿಸುವ ಕಲ್ಲೇರಿ ಸೇತುವೆ ಜಲಾವೃತವಾಗಿದ್ದು, ಈ ಎರಡು ಪ್ರದೇಶಗಳ ನಡುವೆ ಸಂಪರ್ಕ ಕಡಿತಗೊಂಡಿದೆ.
ಬಳಂಜದಲ್ಲಿ ಧರೆ ಕುಸಿತದ ಭೀತಿ
ಬೆಳ್ತಂಗಡಿ: ಸತತ ಮಳೆಯಿಂದ ಬಳಂಜ ಗ್ರಾಮದ ಕರ್ಮಂದೊಟ್ಟು ಜನತಾ ಕಾಲನಿಯಲ್ಲಿ ನಾಲ್ಕು ಮನೆಗಳು ಕುಸಿಯುವ ಅಪಾಯದಲ್ಲಿವೆ. ಈ ಮನೆಗಳಿಂದ ಜನರನ್ನು ಪಂಚಾಯಿತಿಯಲ್ಲಿ ತಾತ್ಕಾಲಿಕವಾಗಿ ತೆರೆಯಲಾಗಿರುವ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ವೇಣೂರು ಗ್ರಾಮ ಪಂಚಾಯಿತಿಯ ಕಚೇರಿ ಬಳಿ ಭೂಕುಸಿತ ಉಂಟಾಗಿದೆ.
ಕಾಸರಗೋಡು: ಬಿರುಸಿನ ಗಾಳಿ–ಮಳೆ
ಕಾಸರಗೋಡು: ಜಿಲ್ಲೆಯಲ್ಲಿ ಸುರಿದ ಬಿರುಸಿನ ಗಾಳಿಮಳೆಗೆ ವಿವಿಧೆಡೆ ಹಾನಿ ಸಂಭವಿಸಿದೆ. ಕಡಲ್ಕೊರೆತ ತೀವ್ರವಾಗಿದ್ದು ಮರಗಳು, ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿವೆ. ಬಹುತೇಕ ಪ್ರದೇಶಗಳಲ್ಲಿ ವಿದ್ಯುತ್ ಮೊಟಕುಂಟಾಗಿದೆ.
ಅಂಗಡಿಮೊಗರು ಸರ್ಕಾರಿ ಶಾಲೆ ಬಳಿ ಗುಡ್ಡ ಕುಸಿದಿದೆ. ಕುಂಬಳೆ ಬದ್ರಿಯಾ ನಗರದ ಇಬ್ರಾಹಿಂ ಅವರ ಮನೆಯ ಹೆಂಚುಗಳು ಗಾಳಿಗೆ ಹಾರಿಹೋಗಿವೆ. ಮನೆಯೊಳಗೆ ನೀರು ತುಂಬಿಕೊಂಡಿದ್ದು ₹ 50 ಸಾವಿರ ನಷ್ಟ ಅಂದಾಜಿಸಲಾಗಿದೆ. ಮಂಜೇಶ್ವರ ಬಳಿಯ ಆನೆಕಲ್ಲಿನಲ್ಲಿ ಅಕೇಷ್ಯಾ ಮರಗಳು ಬುಡಕಳಚಿ ಬಿದ್ದು ವಿದ್ಯುತ್ ತಂತಿ ಕಡಿದುಹೋಗಿದೆ. ಬೇಳ-ಕಿಳಿಂಗಾರು ರಸ್ತೆಯಲ್ಲಿ ಮರ ಉರುಳಿ ರಸ್ತೆ ಸಂಚಾರ ಮೊಟಕುಗೊಂಡಿದೆ. ಮೊಗ್ರಾಲ್ ಪುತ್ತೂರು ರಸ್ತೆ ಜಲಾವೃತವಾಗಿದೆ. ಪುಲ್ಲೂರು ರಸ್ತೆಗೆ ತೆಂಗಿನಮರ ಬುಡಕಳಚಿಕೊಂಡು ಬಿದ್ದು ಸಂಚಾರ ಮೊಟಕುಗೊಂಡಿದೆ. ವಿದ್ಯುತ್ ತಂತಿಯೂ ಕಡಿದುಹೋಗಿದೆ.
ಮನೆ ಮೇಲೆ ಬಿದ್ದ ಮರ ತೆರವು
ಬದಿಯಡ್ಕ: ಎಣ್ಮಕಜೆ ಗ್ರಾಮ ಪಂಚಾಯತಿನ ಸಾಯ ಎಂಬಲ್ಲಿನ ಕೂಟೇಲು ಮಂಜುನಾಥ ಆಚಾರ್ಯರ ಮನೆಯ ಮೇಲೆ ಬಿದ್ದ ಮರಗಳನ್ನು ಕೇಪು ಉಳ್ಳಾಳ್ತಿ ಶೌರ್ಯ ವಿಪತ್ತು ದಳದ ಕಾರ್ಯಕರ್ತರು ತೆರವುಗೊಳಿಸಿದರು. ಕಾರ್ಯಾಚರಣೆಯಲ್ಲಿ ಘಟಕದ ಸಂಯೋಜಕಿ ಗಾಯತ್ರಿ, ಮೇಲ್ವಿಚಾರಕ ಜಗದೀಶ್ ಪೂಜಾರಿ, ಕಾರ್ಯಕರ್ತರಾದ ಸತೀಶ, ಮೀನಾಕ್ಷಿ, ಗಾಯತ್ರಿ, ಮಹಾಲಿಂಗ ಪಾಟಾಳಿ, ಕುಶಾಲಪ್ಪ, ಮಾಲತಿ, ಈಶ್ವರ, ಲೋಹಿತ್, ಆನಂದ ಬಂಗೇರ, ಚಂದ್ರಹಾಸ ಭಾಗವಹಿಸಿದ್ದರು.
ಪ್ರವಾಹದಂತೆ ಮನೆಗೆ ನುಗ್ಗಿದ ನೀರು
ಬೆಳ್ತಂಗಡಿ: ಪುಂಜಾಲಕಟ್ಟೆ- ಚಾರ್ಮಾಡಿವರೆಗಿನ ಹೆದ್ದಾರಿ ಕಾಮಗಾರಿ ಅಪೂರ್ಣಗೊಂಡಿದ್ದು ಮುಂಡಾಜೆ ಗ್ರಾಮದ ಅಂಬಡ್ತ್ಯಾರು ಬಳಿ ಚಂದ್ರಶೇಖರ ಎಂಬುವರ ಮನೆಗೆ ಮಳೆ ನೀರು ಪ್ರವಾಹದಂತೆ ನುಗ್ಗಿದೆ. ಇಲ್ಲಿ ಮೋರಿ ಮತ್ತು ಚರಂಡಿ ಕಾಮಗಾರಿ ಸ್ಥಗಿತಗೊಂಡಿದ್ದು ಚರಂಡಿಯಲ್ಲಿ ಹರಿಯಬೇಕಿದ್ದ ನೀರು ಮನೆಯೊಳಗೆ ಬರುವಂತಾಗಿದೆ.
ಹೆದ್ದಾರಿ ಕಾಮಗಾರಿಯ ಅವಾಂತರದಿಂದಾಗಿ ಪತ್ನಿ ಮಕ್ಕಳ ಜತೆಗೆ ಚಂದ್ರಶೇಖರ ಅವರು ಕಾಳಜಿ ಕೇಂದ್ರ ಸೇರಬೇಕಾದ ಸ್ಥಿತಿ ಬಂದೊದಗಿದೆ. ಅವರ ಮನೆಯೂ ಅಪಾಯದಲ್ಲಿದೆ. ಹೆದ್ದಾರಿ ಪ್ರಾಧಿಕಾರ ಸಂಬಂಧಿಸಿದ ಗುತ್ತಿಗೆದಾರ ಜಿಲ್ಲಾಡಳಿತ ತುತ್ತು ಕ್ರಮ ವಹಿಸಿ ತಮ್ಮ ಕುಟುಂಬಕ್ಕೆ ಮತ್ತು ಮನೆಗೆ ಸೂಕ್ತ ರಕ್ಷಣೆ ಪರಿಹಾರ ಒದಿಸಬೇಕು ಎಂದು ಚಂದ್ರಶೇಖರ ಆಗ್ರಹಿಸಿದ್ದಾರೆ.
ನೆರೆ ಮಳೆ ಹಾನಿ ಪ್ರದೇಶಗಳಿಗೆ ಡಿ.ಸಿ ಭೇಟಿ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೆರೆ ಹಾಗೂ ಮಳೆಯಿಂದ ಹಾನಿಗೊಳಗಾದ ಹರೇಕಳ ಬಂಟ್ವಾಳ ಆಲಡ್ಕ ಉಪ್ಪಿನಂಗಡಿಯ ಪ್ರದೇಶಗಳಿಗೆ ಅಧಿಕಾರಿಗಳೊಂದಿಗೆ ಬುಧವಾರ ಭೇಟಿ ನೀಡಿ ಪರಿಶೀಲಿಸಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಸಂತ್ರಸ್ತರ ಹವಾಲು ಆಲಿಸಿದರು.
ಪರಿಹಾರ ಕಾರ್ಯಗಳನ್ನು ಖುದ್ದು ಪರಿಶೀಲಿಸಿದರು. ನೆರೆ ಪೀಡಿತ ಪ್ರದೇಶಗಳಲ್ಲಿ ಹಾಗೂ ನೆರೆ ಸಂಭವಿಸಬಹುದಾದ ಪ್ರದೇಶಗಳಲ್ಲಿ ಸದಾ ಕಟ್ಟೆಚ್ಚರ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ನೆರೆ ಪ್ರದೇಶಗಳಲ್ಲಿ ಅಗತ್ಯ ಬಿದ್ದರೆ ನಿವಾಸಿಗಳ ಸ್ಥಳಾಂತರಕ್ಕೆ ಮತ್ತು ಕಾಳಜಿ ಕೇಂದ್ರಗಳ ಸ್ಥಾಪನೆಗೆ ತ್ವರಿತ ವ್ಯವಸ್ಥೆ ಕಲ್ಪಿಸುವಂತೆ ನಿರ್ದೇಶನ ನೀಡಿದರು.
ಕಾಳಜಿ ಕೇಂದ್ರಗಳಲ್ಲಿ ಆಶ್ರಯಪಡೆದಿರುವವರ ಜೊತೆ ಸಮಾಲೋಚನೆ ನಡೆಸಿ ಸ್ಥೈರ್ಯ ತುಂಬಿದರು.
ಪರಿಸ್ಥಿತಿ ತಿಳಿಗೊಳ್ಳುವವರೆಗೆ ಎಲ್ಲ ರೀತಿಯ ನೆರವು ನೀಡುವಭರವಸೆ ನೀಡಿದರು. ಮಂಗಳೂರು ಉಪವಿಭಾಗಾಧಿಕಾರಿ ಹರ್ಷವರ್ಧನ್ ಬಂಟ್ವಾಳ ತಹಶೀಲ್ದಾರ್ ಅರ್ಚನಾ ಭಟ್ ಪುತ್ತೂರು ತಹಶೀಲ್ದಾರ್ ಪುರಂದರ ಹೆಗ್ಢೆ ಮತ್ತಿತರರು ಜೊತೆಯಲ್ಲಿದ್ದರು.
‘ಅಪಾಯಕಾರಿ ತಾಣದಲ್ಲಿ ರೀಲ್ಸ್ ಮಾಡಿದರೆ ಕ್ರಮ’
ಮಳೆ ಬರುವಾಗ ಅಥವಾ ನೆರೆ ಉಂಟಾದಾಗ ಅಪಾಯಕಾರಿ ತಾಣಗಳಲ್ಲಿ ರೀಲ್ಸ್ ಮಾಡದಂತೆ ಮುನ್ನೆಚ್ಚರಿಕಾ ಫಲಕಗಳನ್ನು ಅಳವಡಿಸಿದ್ದೇವೆ. ಇದನ್ನೂ ಮೀರಿಯೂ ವಿಡಿಯೊಗ್ರಾಫಿ ರೀಲ್ಸ್ ಮಾಡಿದರೆ ಅಂತಹವರ ವಿರುದ್ಧ ಎಫ್‌ಐಆರ್ ದಾಖಲಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಎಚ್ಚರಿಕೆ ನೀಡಿದ್ದಾರೆ.
ಭಾರಿ ಮಳೆಯಾಗುವಾಗ ಜಲಪಾತಗಳ ಬಳಿ ಯಾವಾಗ ನೀರಿನ ಪ್ರವಾಹ ಉಂಟಾಗುತ್ತದೆ ಹೇಳಲಾಗದು. ಅಲ್ಲಿ ವಿಡಿಯೊ ಮಾಡುವುದು ಅಪಾಯಕರ. ಯಾವತ್ತೂ ಅಂತಹ ದುಸ್ಸಾಹಸ ಮಾಡಲು ಯತ್ನಿಸಬಾರದು ಎಂದರು.
ಶಾಲೆ ಪಿ.ಯು.ಕಾಲೇಜುಗಳಿಗೆ ರಜೆ
ಜಿಲ್ಲೆಯಾದ್ಯಂತ ಗುರುವಾರವೂ (ಆ.1) ಭಾರಿ ಮಳೆಯಾಗುವ ಮುನ್ನೆಚ್ಚರಿಕೆ ಇರುವುದರಿಂದ ಹಾಗೂ ರೆಡ್ ಅಲರ್ಟ್ ಘೋಷಣೆ ಆಗಿರುವುದರಿಂದ ಜಿಲ್ಲೆಯ ಅಂಗನವಾಡಿ ಪ್ರಾಥಮಿಕ ಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ ಮಾಡಿದ್ದಾರೆ.
ಮೀನುಗಾರಿಕೆಗೆ ತೆರಳದಿರಿ: ಜುಲೈ 31ಕ್ಕೆ ಮೀನುಗಾರಿಕಾ ರಜೆ ಮುಕ್ತಾಯವಾಗಿದೆ. ಆ.1ರಿಂದ ಸಮುದ್ರ ಮೀನುಗಾರಿಗೆ ಅವಕಾಶವಿದೆ. ಆದರೆ ಸಮುದ್ರ ಪ್ರಕ್ಷುಬ್ದಗೊಂಡಿರುವುದರಿಂದ ಮೀನುಗಾರರು ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಬಾರದು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.