ADVERTISEMENT

ಉಪ್ಪಿನಂಗಡಿ | ಭಾರಿ ಮಳೆ; ಉಪ್ಪಿನಂಗಡಿಯಲ್ಲಿ ನದಿ ಸಂಗಮ

​ಪ್ರಜಾವಾಣಿ ವಾರ್ತೆ
Published 31 ಜುಲೈ 2024, 4:45 IST
Last Updated 31 ಜುಲೈ 2024, 4:45 IST
ಉಪ್ಪಿನಂಗಡಿಯಲ್ಲಿ ಸಂಗ ವೀಕ್ಷಿಸಲು ಬಂದಿದ್ದ ಜನ
ಉಪ್ಪಿನಂಗಡಿಯಲ್ಲಿ ಸಂಗ ವೀಕ್ಷಿಸಲು ಬಂದಿದ್ದ ಜನ   

ಉಪ್ಪಿನಂಗಡಿ: ಸತತ ಮಳೆಯಿಂದಾಗಿ ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳೆರಡು ಉಕ್ಕಿ ಹರಿದು ಮಂಗಳವಾರ ಉಪ್ಪಿನಂಗಡಿಯ ಸಹಸ್ರಲಿಂಗೇಶ್ವರ ದೇವಾಲಯದ ಮುಂಭಾಗದಲ್ಲಿ ನದಿಗಳೆರಡು ಸಂಗಮಿಸಿದವು. ಈ ವೇಳೆ ಬಾಗಿನ ಸಮರ್ಪಣೆ, ಗಂಗಾ ಪೂಜೆ ಹಾಗೂ ಪವಿತ್ರ ಸಂಗಮ ತೀರ್ಥ ಸ್ನಾನ ನಡೆಯಿತು.

ಮಂಗಳವಾರ ಮಧ್ಯಾಹ್ನದಿಂದ ಅಪಾಯದ ಮಟ್ಟವನ್ನು ಮೀರಿ ಹರಿದ ನೇತ್ರಾವತಿಯು ದೇವಾಲಯದ ಮಹಾಕಾಳಿ ಅಮ್ಮನವರ ಗುಡಿಯನ್ನು ಆವರಿಸಿ ಹರಿಯತೊಡಗಿತು. ಬಳಿಕ ಸಹಸ್ರಲಿಂಗೇಶ್ವರ ದೇವಾಲಯದ ಮುಂಭಾಗಕ್ಕೆ ವಿಸ್ತರಿಸಿ ಹರಿಯತೊಡಗಿದ ನೇತ್ರಾವತಿ ಸಂಜೆ 6 ಗಂಟೆಯ ವರೆಗೆ ದೇವಾಲಯದ ಪ್ರಾಂಗಣವನ್ನು ಪ್ರವೇಶಿಸಿತು.

ಶಾಸಕ ಅಶೋಕ್ ಕುಮಾರ್ ರೈ ನದಿಗೆ ಬಾಗಿನ ಸಮರ್ಪಿಸಿದರು. ಮುಖಂಡರಾದ ಸಂಜೀವ ಮಠಂದೂರು, ಅರುಣ್ ಕುಮಾರ್ ಪುತ್ತಿಲ, ತಹಶೀಲ್ದಾರ್ ಪುರಂದರ, ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಧಾಕೃಷ್ಣ ನಾಯಕ್, ಸದಸ್ಯರಾದ ದೇವಿದಾಸ್ ರೈ, ಅರ್ತಿಲ ಕೃಷ್ಣ ರಾವ್, ವೆಂಕಪ್ಪ ಪೂಜಾರಿ, ರಮ್ಯಾ ರಾಜಾರಾಮ್, ಹರೀಶ್ ಉಪಾಧ್ಯಾಯ ಭಾಗವಹಿಸಿದ್ದರು.

ADVERTISEMENT

ನದಿಗಳ ಸಂಗಮ ಪೂಜೆ ವೀಕ್ಷಿಸಲು ಸಾವಿರಾರು ಮಂದಿ ದೇವಳದತ್ತ ಬಂದಿದ್ದರು. ಪೊಲೀಸರು ಪ್ರಮುಖ ರಸ್ತೆಗಳಲ್ಲೇ ವಾಹನಗಳನ್ನು ನಿಯಂತ್ರಿಸಿದ್ದರು.

ಕೊಪ್ಪಳದಲ್ಲಿ ಮನೆ ಕುಸಿದಿದೆ. ಉಪ್ಪಿನಂಗಡಿ ಗ್ರಾಮದ ಪಂಜಳ, ಕಜೆಕ್ಕಾರ್, ನೂಜಿ, ನಟ್ಟಿಬೈಲು ಪ್ರದೇಶಗಳ ತಗ್ಗು ಪ್ರದೇಶಗಳು ಜಲಾವೃತವಾಗಿದ್ದು, ಅಪಾಯಕ್ಕೆ ಸಿಲುಕಿದ್ದವರನ್ನು ಸ್ಥಳಾಂತರಿಸಲಾಗಿದೆ. ಉಪ್ಪಿನಂಗಡಿ ಪೇಟೆಯ ಸ್ಕಂದ ಹೋಟೆಲ್, ಇಂದ್ರಪ್ರಸ್ಥ ವಿದ್ಯಾಲಯದ ಪರಿಸರದಲ್ಲಿ ನೆರೆ ನೀರು ವ್ಯಾಪಿಸಿ ಅಲ್ಲಿನ ಉದ್ಯಮಿಗಳನ್ನು ನಿವಾಸಿಗಳನ್ನು ಸಂಕಷ್ಟಕ್ಕೆ ಒಳಪಡಿಸಿತು.

ಹಡೀಲು ಗದ್ದೆಗಳು ಸಂಪೂರ್ಣ ನೀರಿನಿಂದಾವೃತವಾಗಿವೆ. ಹಳೆಗೇಟಿನಲ್ಲಿ ವಸತಿ ಸಂಕೀರ್ಣ, ಮನೆಗಳು ಜಲಾವೃತವಾಗಿದ್ದು, ಇಲ್ಲಿನ ಸುಮಾರು 12 ಮನೆಯವರು ಸ್ಥಳಾಂತರಗೊಂಡಿದ್ದಾರೆ. ಮಠ ಹಿರ್ತಡ್ಕದಲ್ಲಿ ನೇತ್ರಾವತಿ ನದಿ ದಡದಲ್ಲಿರುವ ಸುಮಾರು 5 ಮನೆಗಳು ಮುಳುಗಡೆಯಾಗುವ ಭೀತಿ ಇದೆ. ಕುಟುಂಬದವರನ್ನು ಸ್ಥಳಾಂತರಿಸಲಾಗಿದೆ.

ಹೆದ್ದಾರಿಗೆ ನೀರು: ಇಲ್ಲಿನ ಪಂಜಳ ಎಂಬಲ್ಲಿ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ನೀರು ನುಗ್ಗಿದ್ದು, ಇಲ್ಲಿ ಪೊಲೀಸರು, ಸ್ಥಳೀಯರು ಸ್ಥಳದಲ್ಲಿದ್ದು, ವಾಹನಗಳ ಸಂಚಾರಕ್ಕೆ ಅಡಚಣೆಯಾಗಿದೆ.

ಬಂಡೆ ಕುಸಿತದ ಭೀತಿ: ಪಂಜಳದ ರಾಷ್ಟ್ರೀಯ ಹೆದ್ದಾರಿ ಬಳಿಯ ಪೆಟ್ರೋಲ್ ಪಂಪ್‌ ಸಮೀಪ ಹೆದ್ದಾರಿ ಚತುಷ್ಪಥ ಕಾಮಗಾರಿಗಾಗಿ ಗುಡ್ಡವನ್ನು ಅಗೆದಿದ್ದು, ಮಳೆಗೆ ಕುಸಿಯುತ್ತಿದೆ. ಈ ಗುಡ್ಡದ ಮಧ್ಯೆ ಎರಡು ಬಂಡೆಕಲ್ಲುಗಳಿದ್ದು, ಅದರಡಿಯ ಮಣ್ಣು ಮಳೆಗೆ ಕರಗುತ್ತಿರುವುದರಿಂದ ಅದು ಕುಸಿದು ಬೀಳುವ ಆತಂಕ ಎದುರಾಗಿದೆ.

ಕಂದಾಯ ಅಕಾರಿಗಳ ಭೇಟಿ: ಪುತ್ತೂರು ತಹಶೀಲ್ದಾರ್ ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳ ತಂಡ ಜಲಾವೃತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿತು.

ನದಿ ನೀರು ಏರಿಕೆಯಾಗುತ್ತಿರುವುದರಿಂದ ರಕ್ಷಣಾ ತಂಡ ಸನ್ನದ್ಧ ಸ್ಥಿತಿಯಲ್ಲಿದ್ದು, ಸಂಗಮ ಕ್ಷೇತ್ರದ ಬಳಿ ಪರಿಸ್ಥಿತಿ ನಿಯಂತ್ರಿಸುತ್ತಿದ್ದಾರೆ.

ಸಂಘ- ಸಂಸ್ಥೆಗಳ ಸಾಥ್: ಹೆದ್ದಾರಿಗೆ ನೀರು ನುಗ್ಗಿದಾಗ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲು ಹಾಗೂ ಜಲಾವೃತಗೊಂಡ ಮನೆಗಳ ಸಾಮಗ್ರಿ ಸ್ಥಳಾಂತರಕ್ಕೆ ವಿಶ್ವಹಿಂದೂ ಪರಿಷತ್, ಬಜರಂಗದಳ, ಎಸ್‌ಎಸ್‌ಎಫ್‌, ಎಸ್‌ಕೆಎಸ್‌ಎಸ್‌ಎಫ್‌, ಎಸ್‌ಕೆಎಸ್‌ಎಸ್‌ಎಫ್‌ ವಿಖಾಯ ಸಂಘಟನೆಗಳ ಸದಸ್ಯರು ಸಹಕಾರ ನೀಡುತ್ತಿದ್ದಾರೆ.

ಉಪ್ಪಿನಂಗಡಿ: ಸತತ ಮಳೆಯಿಂದಾಗಿ ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳೆರಡು ಉಕ್ಕಿ ಹರಿದು ಮಂಗಳವಾರ ಉಪ್ಪಿನಂಗಡಿಯ ಸಹಸ್ರಲಿಂಗೇಶ್ವರ ದೇವಾಲಯದ ಮುಂಭಾಗದಲ್ಲಿ ನದಿಗಳೆರಡು ಸಂಗಮಿಸಿದವು. ಈ ವೇಳೆ ಬಾಗಿನ ಸಮರ್ಪಣೆ ಗಂಗಾ ಪೂಜೆ ಹಾಗೂ ಪವಿತ್ರ ಸಂಗಮ ತೀರ್ಥ ಸ್ನಾನ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.