ಸಭೆಯಲ್ಲಿ ಶಾಸಕ ವೇದವ್ಯಾಸ ಕಾಮತ್, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕ ಸ ಶಾಸಕ ಭರತ್ ಶೆಟ್ಟಿ, ಎನ್‌ಎಚ್‌ಎಐ ಯೋಜನಾ ನಿರ್ದೇಶಕ ಜಾವೇದ್ ಅಜ್ಮಿ ಮತ್ತಿತರರು ಭಾಗವಹಿಸಿದ್ದರು.
ಮಂಗಳೂರು: ಸುರತ್ಕಲ್‌ನಿಂದ ಬಿಸಿ ರೋಡ್ ವರೆಗಿನ ರಸ್ತೆಯನ್ನು ಮೇಲ್ದರ್ಜೆಗೇರಿಸುವ ಕಾಮಗಾರಿಗೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧವಾಗಿದ್ದು ಏಜೆನ್ಸಿ ಗೊತ್ತುಮಾಡುವ ಕಾರ್ಯ ನಡೆಯುತ್ತಿದೆ. ತುರ್ತು ಅಭಿವೃದ್ಧಿಗೆ ₹ 28.5 ಕೋಟಿ ವಿಶೇಷ ಅನುದಾನ ಬಂದಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಪೊಲೀಸ್ ಇಲಾಖೆ ಅಧಿಕಾರಿಗಳು ಮತ್ತು ಮಹಾನಗರ ಪಾಲಿಕೆ ಎಂಜಿನಿಯರ್‌ಗಳ ಜೊತೆ ಗುರುವಾರ ಸಂಜೆ ಸಭೆ ನಡೆಸಿದ ಅವರು ಯೋಜನೆಯ ಬಗ್ಗೆ ಮಾಹಿತಿ ನೀಡಿದರು.
ಹೆದ್ದಾರಿಯ ಸಮಸ್ಯೆ ಪರಿಹಾರಕ್ಕೆ ಮೂರು ಇಲಾಖೆಗಳು ಜೊತೆಗೂಡಿ ಕಾರ್ಯಪ್ರವೃತ್ತವಾಗಬೇಕು ಎಂದು ಸೂಚಿಸಿದ ಸಂಸದರು ಸುರತ್ಕಲ್–ಬಿಸಿ ರೋಡ್ ವರೆಗಿನ ರಸ್ತೆ ಈಗ ರಾಷ್ಟ್ರೀಯ ಹೆದ್ದಾರಿಯ ಗುಣಮಟ್ಟ ಹೊಂದಿಲ್ಲ. ಈ ರಸ್ತೆಯನ್ನು ಮೇಲ್ದರ್ಜೆಗೇರಿಸಲು ಮತ್ತು 35 ಕಿಮೀ ಬೈಪಾಸ್ ನಿರ್ಮಾಣಕ್ಕೆ ಅನುಮೋದನೆ ಸಿಕ್ಕಿದೆ. ಕೆಲವೇ ತಿಂಗಳಲ್ಲಿ ಕಾಮಗಾರಿಯ ಸ್ಪಷ್ಟ ಚಿತ್ರಣ ಲಭಿಸಲಿದೆ. ಒಟ್ಟು 11 ಕಿಮೀ ಮರುಡಾಂಬರೀಕರಣ ಸದ್ಯದಲ್ಲೇ ಆಗಲಿದೆ ಎಂದರು.
ಅಭಿವೃದ್ಧಿ ಕಾಮಗಾರಿ ಕುರಿತು ಮಾಹಿತಿ ನೀಡಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಜಾವೇದ್ ಅಜ್ಮಿ ಅಭಿವೃದ್ಧಿ ಕಾಮಗಾರಿಯನ್ನು ಒಂದೇ ಹಂತದಲ್ಲಿ ಮಾಡಲು ನಿರ್ಧರಿಸಲಾಗಿದೆ. ಕಾಂಕ್ರಿಟ್ ರಸ್ತೆಯಾಗಿ ಮಾರ್ಪಡಿಸಲು ಚಿಂತನೆ ನಡೆದಿತ್ತು. ಆದರೆ ಅದಕ್ಕೆ ತುಂಬ ಸಮಯ ತಗಲುತ್ತದೆ. ಬದಲಿ ರಸ್ತೆಗಳು ಕಡಿಮೆ ಇರುವುದರಿಂದ ವಾಹನಗಳನ್ನು ನಿಯಂತ್ರಿಸುವುದು ಕಷ್ಟಸಾಧ್ಯ. ಆದ್ದರಿಂದ ಬಿಟುಮನ್ (ಡಾಂಬರ್) ಹಾಕಲು ನಿರ್ಧರಿಸಲಾಗಿದೆ ಎಂದರು.
ಸದ್ಯ ಪಾಲಿಕೆ ವ್ಯಾಪ್ತಿಯಲ್ಲಿ ಮಾತ್ರ ಸರ್ವಿಸ್ ರಸ್ತೆ ಮಾಡುವ ಯೋಜನೆ ಇದ್ದು ಬೈಕಂಪಾಡಿಯಿಂದ 4 ಕಿಮೀ ಎತ್ತರಿಸಿದ ಮಾರ್ಗ ನಿರ್ಮಾಣಕ್ಕೂ ಚಿಂತನೆ ಇದೆ ಎಂದು ಅವರು ವಿವರಿಸಿದರು.
ಗುಂಡಿಗಳನ್ನು ಮುಚ್ಚುವ ಕಾರ್ಯ ಒಂದು ವಾರದಲ್ಲಿ ಮುಗಿಯಲಿದ್ದು ಅಕ್ಟೋಬರ್ ಮೊದಲ ವಾರದಿಂದ ಮರುಡಾಂಬರೀಕರಣ ನಡೆಯಲಿದೆ ಎಂದು ಟೆಂಡರ್ ಪಡೆದುಕೊಂಡಿರುವ ಮುಗರೋಡಿ ಕನ್‌ಸ್ಟ್ರಕ್ಷನ್ಸ್‌ನ ಸುಧಾಕರ ಶೆಟ್ಟಿ ತಿಳಿಸಿದರು.
ರಸ್ತೆ ಬದಿಯ ಅಂಗಡಿ ತೆರವಿಗೆ ಸೂಚನೆ
ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಪಡಿಸುವ ರೀತಿಯಲ್ಲಿ ಹೆದ್ದಾರಿ ಬದಿಯಲ್ಲಿ ಸ್ಥಾಪಿಸಿರುವ ಅಂಗಡಿಗಳನ್ನು ತೆರವುಗೊಳಿಸುವಂತೆ ಸಂಸದರು ಸೂಚಿಸಿದರು. ಶಾಸಕ ವೇದವ್ಯಾಸ ಕಾಮತ್ ಕೂಡ ಇದಕ್ಕೆ ದನಿಗೂಡಿಸಿದರು. ಅಂಗಡಿಗಳನ್ನು ತೆರವು ಮಾಡಲು ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಮತ್ತು ಪೊಲೀಸರು ಮುಂದಾಗಬೇಕು. ಅಗತ್ಯ ಬಿದ್ದರೆ ಅದಕ್ಕೆ ಏಜೆನ್ಸಿಯೊಂದನ್ನು ಗೊತ್ತು ಮಾಡುವಂತೆ ಅವರು ತಿಳಿಸಿದರು.
ತಣ್ಣೀರುಬಾವಿಗೆ ಹೋಗುವ ದಾರಿಯಲ್ಲಿ ಟ್ರಕ್‌ಗಳನ್ನು ನಿಲ್ಲಿಸಲು ‘ಬೇ’ಗಳು ಇವೆ. ಆದರೂ ರಸ್ತೆ ಬದಿಯಲ್ಲೇ ಟ್ರಕ್ ನಿಲ್ಲಿಸುತ್ತಿದ್ದಾರೆ. ಸಂಜೆ ವೇಳೆ ರಸ್ತೆ ಬದಿಯಲ್ಲೇ ಮೀನು ಮಾರಾಟ ಮಾಡುತ್ತಾರೆ. ಇದನ್ನು ತಡೆಯಬೇಕು ಎಂದು ಸಂಸದರು ತಿಳಿಸಿದರು. ಅಲ್ಲಿ ನಿರಂತರ ಪೊಲೀಸ್ ಗಸ್ತು ಇದ್ದು ಸಮಸ್ಯೆಗೆ ತಕ್ಕಮಟ್ಟಿಗೆ ಪರಿಹಾರ ಆಗಿದೆ ಎಂದು ಸಂಚಾರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತೆ ನಜ್ಮಾ ಫಾರೂಕಿ ತಿಳಿಸಿದರು. ಮುಖಂಡ ಪ್ರೇಮಾನಂದ ಶೆಟ್ಟಿ ಇದ್ದರು.
‘ಹೊಂಡ ಮುಚ್ಚುವುದು ಎಂಜಿನಿಯರ್ ಜವಾಬ್ದಾರಿ’
ನಗರದ ರಸ್ತೆ ಸಮಸ್ಯೆಗಳಿಗೆ ತಕ್ಷಣ ಪರಿಹಾರ ಕಾಣಬೇಕು ಎಂದು ಸೂಚಿಸಿದ ಶಾಸಕ ವೇದವ್ಯಾಸ ಕಾಮತ್ ನಗರಪಾಲಿಕೆಯಲ್ಲಿ ಆರ್ಥಿಕ ಸಮಸ್ಯೆ ಇರುವುದು ನಿಜ. ಆದರೆ ಜನರಿಗೆ ಉತ್ತಮ ರಸ್ತೆಗಳನ್ನು ನೀಡಲೇಬೇಕು. ಆದ್ದರಿಂದ ಹೊಂಡಗಳನ್ನು ಕಂಡರೆ ಮುಚ್ಚಲು ಕ್ರಮ ಕೈಗೊಳ್ಳುವುದು ಎಂಜಿನಿಯರ್‌ಗಳ ಜವಾಬ್ದಾರಿ ಎಂದರು.
ನಗರದಲ್ಲಿ 22 ರಸ್ತೆಗಳ ಅಭಿವೃದ್ಧಿ ತುರ್ತಾಗಿ ಆಗಬೇಕು. ನವರಾತ್ರಿ ಸಂದರ್ಭದಲ್ಲಿ ಸಮಸ್ಯೆ ಉಲ್ಬಣಿಸದಂತೆ ನೋಡಿಕೊಳ್ಳಬೇಕು. ಮೆರವಣಿಗೆ ಸಾಗುವ ರಸ್ತೆಗಳ ಮೇಲೆ ವಿಶೇಷ ಗಮನ ಬೇಕು ಎಂದು ಅವರು ಸೂಚಿಸಿದರು. ಆದಷ್ಟು ಬೇಗ ಕಾರ್ಯಪ್ರವೃತ್ತರಾಗುವುದಾಗಿ ಪಾಲಿಕೆ ಮುಖ್ಯ ಎಂಜಿನಿಯರ್ ನರೇಶ್ ಶೆಣೈ ತಿಳಿಸಿದರು.
ನಂತೂರ್‌ನಲ್ಲಿ ಸಿಗ್ನಲ್ ಲೈಟ್ ಯಾಕಿಲ್ಲ?
ವಾಹನಗಳ ನಿಯಂತ್ರಣಕ್ಕೆ ಭಾರಿ ತೊಂದರೆಯಾಗುವ ನಂತೂರು ವೃತ್ತದಲ್ಲಿ ಟ್ರಾಫಿಕ್ ಸಿಗ್ನಲ್ ಲೈಟ್ ಯಾಕೆ ಅಳವಡಿಸಿಲ್ಲ ಎಂದು ಸಂಸದ ಮತ್ತು ಶಾಸಕ ಸಂಚಾರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತೆ ನಜ್ಮಾ ಫಾರೂಕಿ ಅವರನ್ನು ಕೇಳಿದರು.
ಅದಕ್ಕೆ ಅವರು ಪಂಪ್‌ವೆಲ್ ಮತ್ತು ಮಲ್ಲಿಕಟ್ಟೆ ಕಡೆಯಿಂದ ಬರುವ ವಾಹನಗಳು ಏರುಗತಿಯಲ್ಲಿ ಸಾಗಿಬರುತ್ತವೆ. ನಂತೂರು ಕಡೆಯಿಂದ ವಾಹನಗಳು ಇಳಿಮುಖವಾಗಿ ಬರುತ್ತವೆ. ಬಿಕರ್ನಕಟ್ಟೆ ಕಡೆ ಅಂಗಡಿಗಳು, ವಸತಿ ಪ್ರದೇಶ ಇರುವುದರಿಂದ ಜನಸಂಚಾರ ಹೆಚ್ಚಾಗಿರುತ್ತದೆ. ಈ ಎಲ್ಲ ಸ್ಥಳೀಯ ಸಮಸ್ಯೆಗಳಿಂದಾಗಿ ಸಿಗ್ನಲ್ ಲೈಟ್ ವಾಹನ ಚಾಲಕರಿಗೆ ಕಾಣಿಸದಿರುವ ಸಾಧ್ಯತೆ ಇದೆ. ಆದ್ದರಿಂದ ಅದರ ಪ್ರಸ್ತಾಪ ಮುಂದಿಟ್ಟಿಲ್ಲ ಎಂದು ನಜ್ಮಾ ಹೇಳಿದರು.
ಇತರ ನಗರಗಳಲ್ಲಿ ಇಂಥ ಪ್ರದೇಶಗಳಿದ್ದರೆ, ಅಲ್ಲಿ ಯಾವ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂಬುದನ್ನು ಪರಿಶೀಲಿಸಿ ಪ್ರಸ್ತಾವ ಸಲ್ಲಿಸುವಂತೆ ಶಾಸಕರು ಸೂಚಿಸಿದರು.
ಛಾಯಾಚಿತ್ರಕ್ಕೆ ಬಂದ ಶಾಸಕರು!
ಸಭೆ ಸಂಜೆ 5.30ಕ್ಕೆ ನಿಗದಿಯಾಗಿತ್ತು. ಸಂಸದರು ಮತ್ತು ಅಧಿಕಾರಿಗಳು ಸರಿಯಾದ ಸಮಯದಲ್ಲಿ ಬಂದಿದ್ದರು. ಆದರೆ ಶಾಸಕರಾದ ವೇದವ್ಯಾಸ ಕಾಮತ್ ಮತ್ತು ಭರತ್ ಶೆಟ್ಟಿ ಅವರು ಬಂದ ನಂತರ ಸಭೆ ಆರಂಭಿಸುವುದಾಗಿ ತಿಳಿಸಲಾಯಿತು. 6.20ರ ವೇಳೆ ವೇದವ್ಯಾಸ ಕಾಮತ್ ಬಂದರು. ಸಭೆ ಆರಂಭವಾಗಿ ಕೆಲವೇ ನಿಮಿಷಗಳಲ್ಲಿ ಭರತ್ ಶೆಟ್ಟಿ ಕೂಡ ಬಂದರು.
ಆದರೆ ಸಂಸದರ ಪಕ್ಕದಲ್ಲಿ ಕುಳಿತ ಭರತ್ ಶೆಟ್ಟಿ ಮಾಧ್ಯಮದವರ ಕಡೆಗೆ ನೋಡಿ ‘ಬೇಗ ಒಂದು ಫೋಟೊ ತೆಗೆದುಕೊಳ್ಳಿ. ನನಗೆ ತುರ್ತಾಗಿ ಹೋಗಬೇಕು’ ಎಂದರು. ಫೋಟೊ ತೆಗೆಯುತ್ತಿದ್ದಾಗ, ‘ಅವರು ವಿಮಾನ ನಿಲ್ದಾಣಕ್ಕೆ ಹೋಗಬೇಕಾಗಿದೆ’ ಎಂದು ಸಂಸದರು ತಿಳಿಸಿದರು. ‘ಪೋಟೊ ಸೆಷನ್’ ಆದ ಕೂಡಲೇ ಶಾಸಕರು ಹೊರಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.