ADVERTISEMENT

ಹೆದ್ದಾರಿ ವಿಸ್ತರಣೆ ಕಾಮಗಾರಿ ಮರುಜೀವ, ಅಂಗಡಿ ತೆರವುಗೊಳಿಸುತ್ತಿರುವ ಮಾಲೀಕರು

ಸಿದ್ದಿಕ್ ನೀರಾಜೆ
Published 28 ನವೆಂಬರ್ 2021, 5:28 IST
Last Updated 28 ನವೆಂಬರ್ 2021, 5:28 IST
ರಾಷ್ಟ್ರೀಯ ಹೆದ್ದಾರಿ –75ರಲ್ಲಿ ಚತುಪ್ಪಥ ಕಾಮಗಾರಿ ನಡೆಸಲು ನೆಲ್ಯಾಡಿಯಲ್ಲಿದ್ದ ಪ್ರಯಾಣಿಕರ ತಂಗುದಾಣವನ್ನು ಕ್ರೇನ್ ಸಹಾಯದಿಂದ ತೆರವುಗೊಳಿಸಲಾಯಿತು.
ರಾಷ್ಟ್ರೀಯ ಹೆದ್ದಾರಿ –75ರಲ್ಲಿ ಚತುಪ್ಪಥ ಕಾಮಗಾರಿ ನಡೆಸಲು ನೆಲ್ಯಾಡಿಯಲ್ಲಿದ್ದ ಪ್ರಯಾಣಿಕರ ತಂಗುದಾಣವನ್ನು ಕ್ರೇನ್ ಸಹಾಯದಿಂದ ತೆರವುಗೊಳಿಸಲಾಯಿತು.   

ನೆಲ್ಯಾಡಿ(ಉಪ್ಪಿನಂಗಡಿ): ಆರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ರಾಷ್ಟ್ರೀಯ ಹೆದ್ದಾರಿ– 75ರಲ್ಲಿ ಅಡ್ಡಹೊಳೆಯಿಂದ ಬಿ.ಸಿ.ರೋಡ್ ವರೆಗಿನ ಚತುಷ್ಪಥ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿ ಮರುಜೀವ ಪಡೆದುಕೊಂಡಿದೆ.

ಕಾಮಗಾರಿಗೆ ಸ್ವಲ್ಪ ಮಟ್ಟಿನ ವೇಗ ಸಿಕ್ಕಿದ್ದು, ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆದಾರರ ಸೂಚನೆ ಮೇರೆಗೆ ನೆಲ್ಯಾಡಿ ಪೇಟೆಯಲ್ಲಿದ್ದ ಹೆದ್ದಾರಿ ಬದಿಯ ಅಂಗಡಿಗಳನ್ನು ಮಾಲೀಕರು ಸ್ವಯಂ ಪ್ರೇರಣೆಯಿಂದ ತೆರವುಗೊಳಿಸುತ್ತಿದ್ದಾರೆ.

ಶಿರಾಡಿ ಗ್ರಾಮದ ಅಡ್ಡಹೊಳೆಯಿಂದ ಬಿ.ಸಿ. ರೋಡುವರೆಗೆ 63 ಕಿ.ಮೀ ಚತುಷ್ಪಥ ರಸ್ತೆ ನಿರ್ಮಾಣಗೊಳ್ಳಲಿದೆ. ಈ ಹಿಂದೆ ಕಾಮಗಾರಿ ಗುತ್ತಿಗೆ ವಹಿಸಿಕೊಂಡಿದ್ದ ಕಂಪನಿ ಹಿಂದೆ ಸರಿದ ಹಿನ್ನೆಲೆಯಲ್ಲಿ ಮರು ಟೆಂಡರ್ ಕರೆಯಲಾಗಿತ್ತು.

ADVERTISEMENT

ಅಡ್ಡಹೊಳೆಯಿಂದ ಪೆರಿಯಶಾಂತಿ
ವರೆಗಿನ 15 ಕಿ.ಮೀ ಕಾಮಗಾರಿಯನ್ನು ₹ 372 ಕೋಟಿಗೆ ಮಹಾರಾಷ್ಟ್ರದ ಎಸ್.ಎಂ. ಔತಾಡೆ ಸಂಸ್ಥೆ ಗುತ್ತಿಗೆ ಪಡೆದಿದೆ. ಪೆರಿಯಶಾಂತಿಯಿಂದ ಬಿ.ಸಿ.
ರೋಡುವರೆಗಿನ 48 ಕಿ.ಮೀ ಕಾಮಗಾರಿ
ಯನ್ನು ₹ 1,100.88 ಕೋಟಿ ಮೊತ್ತದಲ್ಲಿ ಹೈದ್ರಾಬಾದ್‌ನ ಕೆ.ಎನ್.ಆರ್. ಕನ್‌ಸ್ಟ್ರಕ್ಷನ್ಸ್ ನಿರ್ಮಿಸುತ್ತಿದೆ.

ಶಿರಾಡಿ ಗ್ರಾಮದ ಉದನೆ ಸಮೀಪ ಯಂತ್ರಗಳ ಅಳವಡಿಕೆ ಕಾರ್ಯ ನಡೆದಿದೆ. ಕೆಲ ದಿನಗಳಿಂದ ಹೆದ್ದಾರಿಯ ಎರಡೂ ಬದಿಯಲ್ಲಿ ಗುರುತು ಹಾಕುವ ಕೆಲಸ ನಡೆಯುತ್ತಿದ್ದು, ಹೆದ್ದಾರಿಯ ಉದ್ದಕ್ಕೂ ಜೆಸಿಬಿ ಯಂತ್ರಗಳು ಸದ್ದು ಮಾಡುತ್ತಿವೆ.

ಅಂಗಡಿಗಳ ತೆರವು: ನೆಲ್ಯಾಡಿ ಪೇಟೆಯ ಎರಡು ಬದಿಗಳಲ್ಲೂ ರಸ್ತೆಗೆ ಮಾರ್ಕಿಂಗ್ ಮಾಡಲಾಗಿದೆ. ಮಾರ್ಕಿಂಗ್ ವ್ಯಾಪ್ತಿಯೊಳಗೆ ಬರುವ ಅಂಗಡಿಗಳ ಮಾಲೀಕರಿಗೆ ಅಂಗಡಿ ತೆರವು ಮಾಡುವಂತೆ ಕಳೆದ ವಾರವೇ ಸೂಚನೆ ನೀಡಲಾಗಿತ್ತು. ನೆಲ್ಯಾಡಿಯಲ್ಲಿ ನಿರ್ಮಿಸಿದ್ದ ಪ್ರಯಾಣಿಕರ ತಂಗುದಾಣವನ್ನು ಕ್ರೇನ್ ಸಹಾಯದಿಂದ ಗುರುವಾರ ರಾತ್ರಿ ತೆರವುಗೊಳಿಸಲಾಯಿತು.

ನೆಲ್ಯಾಡಿ ಸರ್ಕಾರಿ ಶಾಲೆಯ ಮುಂಭಾಗದಲ್ಲಿ ನಿರ್ಮಿಸಿದ್ದ ಕಾಂಪೌಂಡ್‌ ಅನ್ನೂ ತೆರವು ಮಾಡಲಾಗಿದೆ. ನೆಲ್ಯಾಡಿ ಪೇಟೆಯಲ್ಲಿ ವರ್ತಕರು ತಮ್ಮ ಅಂಗಡಿಗಳ ಮುಂದೆ ಮಳೆ, ಬಿಸಿಲಿನ ರಕ್ಷಣೆಗಾಗಿ ಹಾಕಿದ್ದ ಶೀಟ್‌ಗಳನ್ನು ತೆರವುಗೊಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.