ADVERTISEMENT

ಕೂಳೂರು ಸೇತುವೆ ಎಷ್ಟು ಸುರಕ್ಷಿತ?

ಕಾಳಿ ನದಿ ಸೇತುವೆ ಕುಸಿದ ಬೆನ್ನಲ್ಲೇ ಚರ್ಚೆ ಆರಂಭ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2024, 14:08 IST
Last Updated 8 ಆಗಸ್ಟ್ 2024, 14:08 IST
ಮಂಗಳೂರಿನ ಕೂಳೂರು ಸೇತುವೆ (ಸಂಗ್ರಹ ಚಿತ್ರ)
ಮಂಗಳೂರಿನ ಕೂಳೂರು ಸೇತುವೆ (ಸಂಗ್ರಹ ಚಿತ್ರ)   

ಮಂಗಳೂರು: ಕರ್ನಾಟಕ – ಗೋವಾ ರಾಜ್ಯ ಸಂಪರ್ಕಸುವ ಕಾಳಿ ನದಿ ಸೇತುವೆ ಕುಸಿದ ಬೆನ್ನಲ್ಲೇ ರಾಷ್ಟ್ರೀಯ ಹೆದ್ದಾರಿ 146ರಲ್ಲಿರುವ ಮಂಗಳೂರು ನಗರಕ್ಕೆ ಪ್ರವೇಶ ಕಲ್ಪಿಸುವ ಕೂಳೂರು ಸೇತುವೆ ಗುಣಮಟ್ಟದ ಬಗ್ಗೆ ಚರ್ಚೆ ಆರಂಭವಾಗಿದೆ.

ಸುಮಾರು ಏಳು ದಶಕಗಳ ಹಿಂದೆ ನಿರ್ಮಿಸಿದ್ದ ಕೂಳೂರು ಸೇತುವೆಯನ್ನು 1952ರಲ್ಲಿ ಮದ್ರಾಸ್ ಪ್ರಾಂತ್ಯದ ಸಚಿವ ಎನ್. ರಂಗರೆಡ್ಡಿ ಉದ್ಘಾಟಿಸಿದ್ದರು ಎಂದು ದಾಖಲೆಗಳು ಹೇಳುತ್ತವೆ. ಕೂಳೂರು ಸೇತುವೆ ಹಳೆಯದಾಗಿರುವ ಕಾರಣ ಅದರ ಪಕ್ಕದಲ್ಲೇ ಹೊಸ ಸೇತುವೆ ನಿರ್ಮಾಣ ಕಾಮಗಾರಿ ಆರಂಭವಾಗಿ ವರ್ಷಗಳು ಕಳೆದರೂ, ಅದು ಆಮೆಗತಿಯಲ್ಲಿ ಸಾಗುತ್ತಿದೆ. ಹಳೆಯ ಸೇತುವೆ ಮೇಲೆ ನಿತ್ಯವೂ ಸಾವಿರಾರು ವಾಹನಗಳು ಸಂಚರಿಸುತ್ತವೆ.

ಫಲ್ಗುಣಿ ನದಿಗೆ ನಿರ್ಮಿಸಿರುವ ಕೂಳೂರು ಸೇತುವೆಯಲ್ಲಿ ಭಾರಿ ವಾಹನ ಸಂಚಾರ ನಿಲ್ಲಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು 2018ರಲ್ಲಿ ಜಿಲ್ಲಾಡಳಿತಕ್ಕೆ ವರದಿ ನೀಡಿತ್ತು. ಹೈದರಾಬಾದ್‌ನ ಮೆ. ಆರ್ವಿ ಅಸೋಸಿಯೇಟ್ಸ್‌ ಏಜೆನ್ಸಿಯು ಸೇತುವೆ ತಪಾಸಣೆ ನಡೆಸಿತ್ತು.

ADVERTISEMENT

2020ರಲ್ಲಿ ‘ಮೈಕ್ರೊ ಕಾಂಟೆಸ್ಟ್’ ತಂತ್ರಜ್ಞಾನದೊಂದಿಗೆ ₹38 ಲಕ್ಷ ವೆಚ್ಚದಲ್ಲಿ ಈ ಸೇತುವೆ ದುರಸ್ತಿಗೊಳಿಸಲಾಗಿತ್ತು. ಆಗಿನ ಸಂಸದ ನಳಿನ್‌ಕುಮಾರ್ ಕಟೀಲ್ ಅವರು, ಹೊಸ ತಂತ್ರಜ್ಞಾನದೊಂದಿಗೆ ಸೇತುವೆ ಭದ್ರಗೊಳಿಸಿರುವ ಬಗ್ಗೆ ಮಾಹಿತಿ ನೀಡಿದ್ದರಿಂದ, ಜನರು ಆ ಮಾತಿನಲ್ಲಿ ವಿಶ್ವಾಸ ಹೊಂದಿದ್ದರು. ಇದಾಗಿ ಈಗ ನಾಲ್ಕು ವರ್ಷಗಳು ಕಳೆದಿವೆ. ಹಗಲು–ರಾತ್ರಿ ವಾಹನ ದಟ್ಟಣೆ ಇರುವ ಈ ರಸ್ತೆಯಲ್ಲಿ, ಬಸ್‌, ಲಾರಿ, ಟ್ಯಾಂಕರ್‌ಗಳು ಸಂಚರಿಸುತ್ತವೆ. ಏಕಕಾಲದಲ್ಲಿ ಎರಡು ಸಾಲಿನಲ್ಲಿ ವಾಹನಗಳು ಸಾಗುತ್ತವೆ. ಪ್ರಸ್ತುತ ಸೇತುವೆಯ ಧಾರಣ ಸಾಮರ್ಥ್ಯ ಯಾವ ಪ್ರಮಾಣದಲ್ಲಿದೆ ಎಂಬುದನ್ನು ತುರ್ತಾಗಿ ತಪಾಸಣೆ ನಡೆಸಬೇಕಾಗಿದೆ ಎಂದು ಪ್ರಯಾಣಿಕರೊಬ್ಬರು ಒತ್ತಾಯಿಸಿದರು.

‘ಕೂಳೂರು ಸೇತುವೆ, 4ನೇ ಮೈಲು ಕಿರು ಸೇತುವೆಯ ಗುಣಮಟ್ಟ ಪರೀಕ್ಷಿಸಬೇಕು. ಇವೆರಡೂ ಅಪಾಯದ ಸ್ಥಿತಿಯಲ್ಲಿವೆ. ಅವಘಡಗಳು ಸಂಭವಿಸುವ ಮುನ್ನ ಆಡಳಿತ ಎಚ್ಚೆತ್ತುಕೊಳ್ಳಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ಜಯಕೃಷ್ಣನ್ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.