ADVERTISEMENT

ಸರಳ ದಸರಾ; ಹುಲಿ ವೇಷಕ್ಕೂ ನಿರ್ಬಂಧ

ದೀಪಾವಳಿಯಲ್ಲಿ ಪಟಾಕಿ ಮಾರಾಟ, ಸುಡುವುದು ನಿಷೇಧ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2020, 3:25 IST
Last Updated 4 ಅಕ್ಟೋಬರ್ 2020, 3:25 IST

ಮಂಗಳೂರು: ದಸರಾ, ದೀಪಾವಳಿ ಹಬ್ಬಗಳನ್ನು ಸರಳವಾಗಿ ಆಚರಿಸಲು ನಿರ್ಧರಿಸಿರುವ ಧಾರ್ಮಿಕ ಪರಿಷತ್ ಸಭೆ, ಈ ಬಾರಿಯ ದಸರಾ ಹಬ್ಬದಲ್ಲಿ ಹುಲಿ ವೇಷ ತಂಡಗಳಿಗೂ ಅವಕಾಶ ನೀಡದಿರಲು ನಿರ್ಧರಿಸಿದೆ.

ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಹಬ್ಬಗಳ ಆಚರಣೆ ಕುರಿತಂತೆ ಹಲವು ನಿರ್ಣಯ ಕೈಗೊಳ್ಳಲಾಗಿದೆ.

ದಸರಾ ಹಬ್ಬದಲ್ಲಿ ಜನಸಂದಣಿ ಹೆಚ್ಚಿರುವ ದೇವಸ್ಥಾನಗಳಲ್ಲಿ ಸ್ಯಾನಿಟೈಸರ್‌, ಥರ್ಮಲ್‌ ಸ್ಕ್ಯಾನಿಂಗ್, ಮಾಸ್ಕ್‌ ಧರಿಸುವುದನ್ನು ಕಡ್ಡಾಯಗೊಳಿಸಬೇಕು. ಇದರ ಕಟ್ಟುನಿಟ್ಟಿನ ಜಾರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂ ಸೇವಕರನ್ನು ನೇಮಿಸಬೇಕು ಎಂದು ತಿಳಿಸಲಾಗಿದೆ.

ADVERTISEMENT

ಸಾಂಪ್ರದಾಯಿಕವಾಗಿ ಸಂಘ–ಸಂಸ್ಥೆಗಳು ರಸ್ತೆ ಬದಿ ಅಥವಾ ಇನ್ನಿತರ ಕಡೆಗಳಲ್ಲಿ ಶಾರದಾ ಮೂರ್ತಿಗಳ ಪ್ರತಿಷ್ಠಾನ ಮಾಡಿದಲ್ಲಿ, ಆ ಸ್ಥಳಗಳಲ್ಲಿ ಸಭಾ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅವಕಾಶ ನೀಡಬಾರದು. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ದೇವಸ್ಥಾನಗಳ ಆವರಣದ ಒಳಗೆ, ಸುರಕ್ಷಿತ ಅಂತರ ಕಾಪಾಡಿಕೊಂಡು ನಡೆಸಬಹುದಾಗಿದ್ದು, ಅದನ್ನು ಸಾಮಾಜಿಕ ಜಾಲತಾಣಗಳ ಮೂಲಕ ನೇರ ಪ್ರಸಾರ ಮಾಡಬೇಕು. ಯಾವುದೇ ದೊಡ್ಡ ಗಾತ್ರದ ಶಾಮಿಯಾನ ಅಥವಾ ಚಪ್ಪರ ಹಾಕಲು ಅವಕಾಶ ನೀಡದಂತೆ ಸಂಬಂಧಿಸಿದ ದೇವಸ್ಥಾನಗಳಿಗೆ ಸೂಚಿಸಲಾಯಿತು.

ಜನರ ಆರೋಗ್ಯದ ದೃಷ್ಟಿಯಿಂದ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸುಡುಮದ್ದು, ಪಟಾಕಿ ಶೇಖರಣೆ, ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಲು ನಿರ್ಣಯಿಸಲಾಯಿತು.

ರಾಜ್ಯ ಧಾರ್ಮಿಕ ಪರಿಷತ್‌ ಸದಸ್ಯರಾದ ಕೆ. ಸೂರ್ಯ ಕಶೇಕೋಡಿ, ಸೂರ್ಯನಾರಾಯಣ ಭಟ್‌, ಕುದ್ರೋಳಿ ಗೋಕರ್ಣನಾಥ ದೇವಸ್ಥಾನ, ಮಹತೋಭಾರ ಮಂಗಳಾದೇವಿ ದೇವಸ್ಥಾನ, ಬೋಳಾರ ಮಾರಿಗುಡಿ, ವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿ ಪ್ರತಿನಿಧಿಗಳು, ಜಿಲ್ಲಾ ಧಾರ್ಮಿಕ ಪರಿಷತ್ತಿನ ಸದಸ್ಯರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.